ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕೇರಳದ ಕ್ಯಾಲಿಕಟ್‌ನಲ್ಲಿ ಇಳಿದ ವಿಮಾನ ಮಂಗಳೂರಿನಲ್ಲಿ ಇಳಿಯಬೇಕಾಗಿದ್ದ ವಿಮಾನ ಕೇರಳದಲ್ಲಿ ಲ್ಯಾಂಡ್

ಮಂಗಳೂರು (ಸೆ.26):  ಮಂಗಳೂರಿನಲ್ಲಿ (mangaluru ) ಲ್ಯಾಂಡ್‌ ಆಗಬೇಕಿದ್ದ ದುಬೈ ಹಾಗೂ ದಮಾಮ್‌ನಿಂದ ಆಗಮಿಸಿದ ಏರ್‌ ಇಂಡಿಯಾ (air India) ವಿಮಾನಗಳನ್ನು ಶನಿವಾರ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕೇರಳದ (Kerala) ಕ್ಯಾಲಿಕಟ್‌ನಲ್ಲಿ ಇಳಿಸಲಾಗಿದೆ. ಆದರೆ ಅಲ್ಲಿ ಊಟ, ತಿಂಡಿ ನೀಡದೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಏರ್‌ ಇಂಡಿಯಾ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಬೈ ಹಾಗೂ ದಮಾಮ್‌ನಿಂದ ಶುಕ್ರವಾರ ತಡರಾತ್ರಿ ಹೊರಟ ವಿಮಾನಗಳು ಶನಿವಾರ ನಸುಕಿನ ಜಾವ 6 ಗಂಟೆಯೊಳಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ (Flight) ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ವಿಮಾನ ಇಳಿಸಲು ರನ್‌ವೇ ಕಾಣುತ್ತಿರಲಿಲ್ಲ. ಹಾಗಾಗಿ ಪೈಲಟ್‌ಗಳು ವಿಮಾನವನ್ನು ಕೇರಳದ ಕ್ಯಾಲಿಕಟ್‌ ವಿಮಾನ ನಿಲ್ದಾಣದಲ್ಲಿ ಇಳಿಸಿದರು. ಅಲ್ಲಿ ಎರಡೂ ವಿಮಾನಗಳು ಬೆಳಗ್ಗೆ 6.30ರೊಳಗೆ ಲ್ಯಾಂಡ್‌ ಆಗಿವೆ.

ತಾಲಿಬಾನ್ ಆಕ್ರಮಣದ ಬಳಿಕ ಆಫ್ಘಾನ್‌ನಲ್ಲಿ ಇಳಿಯಿತು ಮೊದಲ ಅಂತಾರಾಷ್ಟೀಯ ವಿಮಾನ!

ಬಳಿಕ ಹವಾಮಾನ ಸಮರ್ಪಕವಾದರೂ ವಿಮಾನ ಟೇಕಾಫ್‌ ಮಾಡದೆ ಮೂರೂವರೆ ಗಂಟೆ ಕಾಲ ಸತಾಯಿಸಿದ್ದಾರೆ. ಅಲ್ಲದೆ ವಿಮಾನದಲ್ಲಿ ಗರ್ಭಿಣಿ, ಮಕ್ಕಳೂ ಇದ್ದು, ಬ್ರೇಕ್‌ಫಾಸ್ಟ್‌ ಕೂಡ ನೀಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್‌ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ.

ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ಎರಡೂ ವಿಮಾನಗಳು ಕ್ಯಾಲಿಕಟ್‌ನಿಂದ ಮಂಗಳೂರು ನಿಲ್ದಾಣಕ್ಕೆ ಮರಳಿವೆ. ಮಾತ್ರವಲ್ಲ ಬೆಳಗ್ಗೆ ದುಬೈನಿಂದ (Dubai) ಆಗಮಿಸಿದ್ದ ಇನ್ನೊಂದು ಖಾಸಗಿ ವಿಮಾನ ಕೂಡ ಹವಾಮಾನ (weather) ವೈಪರೀತ್ಯದಿಂದ ಕ್ಯಾಲಿಕಟ್‌ಗೆ ತೆರಳಿ ಬಳಿಕ ಮಧ್ಯಾಹ್ನ ವೇಳೆಗೆ ಮಂಗಳೂರಿಗೆ ಮರಳಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.

ಅಣೆಕಟ್ಟಿನಿಂದಾಗಿ ಇಬ್ಬನಿ ಕಾರಣ?: ಈಗ ಮುಂಗಾರು (Monsoon) ಮಳೆಯ ಅಬ್ಬರ ಇಲ್ಲ, ಒಣಹವೆ ಇದ್ದು, ಬೆಳಗ್ಗಿನ ಹೊತ್ತು ಇಬ್ಬನಿಯ ಅಬ್ಬರವೂ ಇಲ್ಲ. ಹಾಗಿದ್ದೂ ನಸುಕಿನ ಜಾವ ರನ್‌ವೇ ಕಾಣಿಸದೇ ಇರಲು ಕಾರಣ ಏನು ಎಂಬುದು ಜಿಜ್ಞಾಸೆಗೆ ಕಾರಣವಾಗಿದೆ.

ವಿಮಾನ ನಿಲ್ದಾಣದ ಮೂಲಗಳು ಹೇಳುವ ಪ್ರಕಾರ, ಕೆಂಜಾರು ವಿಮಾನ ನಿಲ್ದಾಣದ ಅನತಿ ದೂರದಲ್ಲಿ ಇರುವ ಅಣೆಕಟ್ಟೆಯೇ ಇಬ್ಬನಿ ಸೃಷ್ಟಿಗೆ ಕಾರಣ ಎನ್ನಲಾಗುತ್ತಿದೆ. ನಸುಕಿನ ಜಾವ ಅಣೆಕಟ್ಟೆಯಿಂದ ಮೇಲ್ಭಾಗದಿಂದ ರಾಶಿರಾಶಿ ಇಬ್ಬನಿ ಗಗನದಲ್ಲಿ ಪಸರಿಸುತ್ತಿರುತ್ತದೆ. ಇದರಿಂದಾಗಿ ರನ್‌ವೇ ಕಾಣಿಸದಷ್ಟುಇಬ್ಬನಿ ವ್ಯಾಪಿಸಿಕೊಳ್ಳುತ್ತದೆ. ವಿಮಾನ ಇಳಿಯುವ ವೇಳೆ ರನ್‌ವೇ ಸರಿಯಾಗಿ ಕಾಣದೇ ಇದ್ದರೆ ವಿಮಾನ ಇಳಿಸುವ ಅಪಾಯವನ್ನು ಪೈಲಟ್‌ಗಳು ತೆಗೆದುಕೊಳ್ಳುವುದಿಲ್ಲ. ಶನಿವಾರ ಕೂಡ ಇದೇ ಆಗಿದೆ ಎಂದು ಮೂಲಗಳು ಹೇಳುತ್ತಿದೆ.