Asianet Suvarna News Asianet Suvarna News

ಕಾಂಗ್ರೆಸ್‌ಗೆ ಠಕ್ಕರ್‌ ಕೊಡಲು ಸಿದ್ಧವಾದ ಓವೈಸಿ ಪಕ್ಷ..!

* ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
* ಶಾಸಕ ಅಬ್ಬಯ್ಯ ದಬ್ಬಾಳಿಕೆಗೆ ಕಾಂಗ್ರೆಸ್‌ ಬಿಟ್ಟು ಹೋದವರಿಂದ ಓವೈಸಿ ಪಕ್ಷ ಸಂಘಟನೆ
* ಅಕ್ಷರಶಃ ಮೂಲೆಗುಂಪಾಗುತ್ತಿರುವ ಕಾಂಗ್ರಸ್ಸಿಗರು

AIMIM Will Be Contest in Hubballi Dharwad City Corporation Election grg
Author
Bengaluru, First Published Jul 3, 2021, 12:19 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.03): ಇದೇ ಮೊದಲ ಬಾರಿಗೆ ಅಸಾವುದ್ದೀನ್‌ ಓವೈಸಿಯ ಎಐಎಂಐಎಂ ಪಕ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು, ಕಾಂಗ್ರೆಸ್ಸಿಗೆ ಮಗ್ಗಲು ಮುಳ್ಳಾಗುವ ಎಲ್ಲ ಲಕ್ಷಣಗಳಿವೆ.

ಮೀಸಲು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಜಿಲ್ಲಾ ಮುಖಂಡರ ದಬ್ಬಾಳಿಕೆ, ಗುಂಪುಗಾರಿಕೆಯಿಂದ ಬೇಸತ್ತು ಓವೈಸಿ ಪಕ್ಷ ಸೇರಿರುವ ಮೂಲ ಕಾಂಗ್ರೆಸ್‌ ಮುಖಂಡರು ಮಹಾನಗರ ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್ಸಿನಲ್ಲಿನ ಅತೃಪ್ತರೆಲ್ಲ ಅತ್ತ ಮುಖ ಮಾಡಿದ್ದಾರೆ.

ಇದೀಗ ಜಿಲ್ಲೆಯಲ್ಲಿ ಓವೈಸಿ ಪಕ್ಷದ ಸದಸ್ಯರ ಸಂಖ್ಯೆ 1 ಲಕ್ಷಕ್ಕೇರಿದೆ. ಹೀಗೆ ಪಕ್ಷದ ಸದಸ್ಯತ್ವ ಪಡೆದಿರುವವರು ದಲಿತ ಮತ್ತು ಮುಸ್ಲಿಮರೇ ಹೆಚ್ಚು. ಹೈದ್ರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ರೀತಿ ಕಾಂಗ್ರೆಸ್‌ ಹಾಗೂ ಕೆಸಿಆರ್‌ ಚಂದ್ರುನ ಟಿಆರ್‌ಎಸ್‌ ಪಕ್ಷಕ್ಕೆ ಠಕ್ಕರ್‌ ಕೊಟ್ಟು ಪಾಠ ಕಲಿಸುವಲ್ಲಿ ಓವೈಸಿ ಪಕ್ಷ ಯಶಸ್ವಿಯಾಗಿದೆ. ಇದೀಗ ಅದೇ ಮಾದರಿಯಲ್ಲಿ ಕಾಂಗ್ರೆಸ್‌ನ್ನೇ ಟಾರ್ಗೇಟ್‌ ಮಾಡಿಕೊಂಡು ಪಕ್ಷವನ್ನು ಸಂಘಟಿಸಲಾಗುತ್ತಿದೆ. ಅದರಲ್ಲೂ ಮುಸ್ಲಿಂರು, ದಲಿತ ಮತದಾರರ ಬಾಹುಳ್ಯವಿರುವ ವಾರ್ಡ್‌ಗಳಲ್ಲಿ ಸಂಘಟನೆ ಬಿರುಸಿನಿಂದ ನಡೆದಿದ್ದು ಕಾಂಗ್ರೆಸ್ಸಿನಲ್ಲಿ ತಳಮಳ ಶುರುವಾಗಿದೆ.

ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲೂ ಕಾಂಗ್ರೆಸ್ಸಿಗೆ ನಿರಾಸಕ್ತಿ..!

ಈ ಸ್ಥಿತಿಗೆ ಪ್ರಸಾದ ಕಾರಣ:

ಮಹಾನಗರ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ, ಭಿನ್ನಮತ, ಒಳಜಗಳ, ಕಾಲೆಳೆಯುವ ಸಂಸ್ಕೃತಿ ಹೊಸದೇನಲ್ಲ. ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಕೆಲಮುಖಂಡರು ತಮ್ಮದೇ ಬಣಗಳನ್ನು ಮಾಡಿಕೊಂಡಿದ್ದಾರೆ. ಇದರಿಂದಾಗಿ ಮನೆಯೊಂದು ಆರು ಬಾಗಿಲು ಎನ್ನುವಂತಾಗಿದೆ ಕಾಂಗ್ರೆಸ್‌.

ಮೂಲ ಕಾಂಗ್ರೆಸ್ಸಿಗರಿಗೆ ಅತ್ತ ಸ್ಥಾನಮಾನಗಳು ಸಿಗಲ್ಲ. ಇತ್ತ ಅವರು ಹೇಳಿದ ಕೆಲಸಗಳು ಆಗುತ್ತಿಲ್ಲ. ಅಕ್ಷರಶಃ ಮೂಲೆಗುಂಪಾಗುತ್ತಿದ್ದಾರೆ. ಇದರಿಂದ ಬೇಸತ್ತು ಕೆಲವರು ಇವರ ಸಹವಾಸವೇ ಬೇಡವೆಂದು ಕಳೆದ ಆರೇಳು ತಿಂಗಳು ಹಿಂದೆಯಷ್ಟೇ ಓವೈಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗೆ ಸೇರ್ಪಡೆಗೊಂಡ ಮುಖಂಡರ ಹಿಂದೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜತೆಯಾಗಿದ್ದಾರೆ.

ಯಾರಾರ‍ಯರು ಹೋದವರು:

ಕಾಂಗ್ರೆಸ್‌ನ ರಾಜ್ಯ ಕಾರ್ಮಿಕ ಘಟಕದಲ್ಲಿನ ಮಾಜಿ ಮುಖಂಡ ವಿಜಯ್‌ ಗುಂಟ್ರಾಳ್‌. ಗುಂಟ್ರಾಳ ಪೌರಕಾರ್ಮಿಕರ ಪರ ಹೋರಾಟಗಾರ. ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಮಾತನಾಡಿದರೆಂಬ ಕಾರಣಕ್ಕೆ ಅವರನ್ನು ಕಾಂಗ್ರೆಸ್‌ ಜಿಲ್ಲಾ ಮುಖಂಡರು ಉಚ್ಛಾಟಿಸಿದರು. ಇದರಿಂದ ಬೇಸತ್ತು ಅವರು ಓವೈಸಿ ಪಕ್ಷಕ್ಕೆ ಸೇರಿದರು.

ಇನ್ನೂ ಮಾಜಿ ಸಚಿವ ಜಬ್ಬಾರಖಾನ್‌ ಹೊನ್ನಳ್ಳಿ ಅವರ ಆಪ್ತರಲ್ಲೊಬ್ಬರಾದ ಇಮ್ತಿಯಾಜ್‌ ಬಿಳಿಪಾಸರ್‌ ಹಾಗೂ ಪಾಲಿಕೆ ಮಾಜಿ ಸದಸ್ಯ ನಜೀರ್‌ ಹೊನ್ಯಾಳ ಸೇರಿದಂತೆ ಹಲವು ಮುಖಂಡರು ಓವೈಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಇಮ್ತಿಯಾಜ್‌ 20 ವರ್ಷಕ್ಕೂ ಅಧಿಕ ಕಾಲದಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರೆ, ನಜೀರ್‌ 12 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದವರು. ಇವರೆಲ್ಲರೂ ಇದೀಗ ಓವೈಸಿ ಪಕ್ಷ ಸಂಘಟನೆಯತ್ತ ಗಮನಹರಿಸಿದ್ದಾರೆ.

ನಾಯಕರೇ ಇಲ್ಲದ ಜೆಡಿಎಸ್‌ಗೆ ಚುನಾವಣೆ ಸವಾಲು..!

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಠಕ್ಕರ್‌ ಕೊಡುವ ಮೂಲಕ ಓವೈಸಿ ಪಕ್ಷದ ಖಾತೆ ತೆರೆಯಬೇಕೆಂಬ ಹಂಬಲ ಹೊಂದಿದೆ. ಪಾಲಿಕೆ ಚುನಾವಣೆಯಲ್ಲಿ ಈ ಓವೈಸಿ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ ಎನ್ನುವುದಕ್ಕಿಂತ ಅದೆಷ್ಟು ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣವಾಗುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗಿದೆ.

ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಮಾತನಾಡಿದ್ದಕ್ಕೆ ನನ್ನನ್ನು ಪಕ್ಷದಿಂದ ಕಾನೂನು ಬಾಹೀರವಾಗಿ ಉಚ್ಛಾಟಿಸಲಾಯಿತು. ಇದರಿಂದ ಬೇಸತ್ತು ನಾನು ಓವೈಸಿ ಪಕ್ಷ ಸೇರ್ಪಡೆಯಾಗಿದ್ದೇನೆ. ಪಾಲಿಕೆ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆಯೋದು ಗ್ಯಾರಂಟಿ ಎಂದು ಓವೈಸಿ ಪಕ್ಷದ ಮುಖಂಡ ವಿಜಯ ಗುಂಟ್ರಾಳ್‌ ತಿಳಿಸಿದ್ದಾರೆ. 

ನಾನು 20 ವರ್ಷ ಕಾಂಗ್ರೆಸ್‌ನಲ್ಲಿ ದುಡಿದೆ. ಆದರೆ ಶಾಸಕ ಪ್ರಸಾದ ಅಬ್ಬಯ್ಯ ಅವರ ದಬ್ಬಾಳಿಕೆ ನಿರಂತರವಾದ ಕಾರಣ ಆ ಪಕ್ಷ ಬಿಟ್ಟು ಈ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಇದೀಗ ಪಕ್ಷ ಸಂಘಟಿಸುತ್ತಿದ್ದೇವೆ. ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಎಐಎಂಐಎಂ ಪೂರ್ವ ಕ್ಷೇತ್ರದ ಅಧ್ಯಕ್ಷ ಇಮ್ತಿಯಾಜ್‌ ಬಿಳಿಪಾಸರ್‌ ಹೇಳಿದ್ದಾರೆ.  
 

Follow Us:
Download App:
  • android
  • ios