2025ರೊಳಗೆ ವಾರಾಹಿ ಯೋಜನೆ ಪೂರ್ಣಕ್ಕೆ ಯತ್ನ: ಡಿ.ಕೆ.ಶಿವಕುಮಾರ್
ಯೋಜನೆಯಡಿ ಉಡುಪಿ ಹಾಗೂ ಕುಂದಾಪುರ ತಾಲ್ಲೂಕಿನ ಸುಮಾರು 15,702 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ವಿಧಾನ ಪರಿಷತ್(ಜು.08): ವಾರಾಹಿ ನೀರಾವರಿ ಯೋಜನೆಯನ್ನು 2025ರೊಳಗೆ ಪೂರ್ಣಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 1979ರಲ್ಲಿ 9.43 ಕೋಟಿ ರು. ವೆಚ್ಚದ ಯೋಜನೆ ಇಷ್ಟು ವರ್ಷವಾದರೂ ನಾನಾ ಕಾರಣಗಳಿಂದ ಪೂರ್ಣ ಮಾಡಲು ಆಗಲಿಲ್ಲ. 2014-15ನೇ ಸಾಲಿನ ದರ ಪಟ್ಟಿ ಅನ್ವಯ 1789.50 ಕೋಟಿ ರು.ಗಳಿಗೆ ಪರಿಷ್ಕೃತ ಡಿಪಿಆರ್ ತಯಾರಿಸಲಾಗಿದ್ದು, ಪರಿಶೀಲಿಸಲಾಗುತ್ತಿದೆ. ಈ ಯೋಜನೆಗೆ ಈ ವರ್ಷದ ಮೇ ಅಂತ್ಯದವರೆಗೆ 1302 ಕೋಟಿ ರು. ವೆಚ್ಚ ಮಾಡಲಾಗಿದೆ. 2023-24ನೇ ಸಾಲಿಗೆ ವಾರಾಹಿ ನೀರಾವರಿ ಯೋಜನೆಗೆ ಅನುದಾನ ಹಂಚಿಕೆ ಮಾಡಬೇಕಾಗಿದೆ. ಯೋಜನೆಯಡಿ ಬರುವ ಕಾಲುವೆಗಳ ನಿರ್ಮಾಣಕ್ಕೆ ಅರಣ್ಯ ಹಾಗೂ ಅರಣ್ಯೇತರ ಭೂ ಪ್ರದೇಶಗಳ ಹಸ್ತಾಂತರಕ್ಕಾಗಿ ಆದ್ಯತೆ ಮೇಲೆ ಕ್ರಮ ಜರುಗಿಸಲಾಗುತ್ತಿದೆ. ಯೋಜನೆಯಡಿ ಉಡುಪಿ ಹಾಗೂ ಕುಂದಾಪುರ ತಾಲ್ಲೂಕಿನ ಸುಮಾರು 15,702 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ ಎಂದು ವಿವರಿಸಿದರು.
ವಾರಾಹಿ ಎಡದಂಡೆ ಕಾಮಗಾರಿ ವ್ಯಾಪ್ತಿಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ: ಉಡುಪಿ ಡಿಸಿ ಕೂರ್ಮಾರಾವ್
ಪ್ರಸ್ತುತ ಮುಗಿದಿರುವ ವಾರಾಹಿ ಬಲದಂಡೆ ಮತ್ತು ಎಡ ದಂಡೆ ಕಾಲುವೆ ಕಾಮಗಾರಿಯಡಿ 6110 ಹೆಕ್ಟೇರ್ ಪ್ರದೇಶ ಅಚ್ಚುಕಟ್ಟು ಸೃಷ್ಟಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.