Asianet Suvarna News Asianet Suvarna News

ಕಾಲುಬಾಯಿ ಜ್ವರ ನಿರ್ಮೂಲನೆ ಕೇಂದ್ರದ ಗುರಿ

ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರವನ್ನು 2030 ರೊಳಗೆ ದೇಶದಿಂದಲೇ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ. ಪಿ.ಟಿ. ಶ್ರೀನಿವಾಸ್ ಹೇಳಿದರು.

Aim of the Foot and Mouth Fever Eradication Centre snr
Author
First Published Sep 23, 2023, 9:24 AM IST

  ತುಮಕೂರು :  ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರವನ್ನು ೨೦೩೦ ರೊಳಗೆ ದೇಶದಿಂದಲೇ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕ ಡಾ. ಪಿ.ಟಿ. ಶ್ರೀನಿವಾಸ್ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ವಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ, ಜಿಲ್ಲಾ ಶಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ತಾಂತ್ರಿಕ ವಿಚಾರ ಸಂಕಿರಣ ಹಾಗೂ ಎನ್‌ಎಡಿಸಿಪಿ ೪ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮದ ಸಿದ್ದತೆಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ೨೦೨೫ರೊಳಗೆ ಕಾಲುಬಾಯಿ ಜ್ವರ ನಿಯಂತ್ರಣ ಮಾಡುವ ಗುರಿಯೊಂದಿಗೆ, ೨೦೩೦ ರೊಳಗೆ ದೇಶದಿಂದಲೇ ಈ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಧ್ಯೇಯೋದ್ದೇಶವನ್ನು ಹೊಂದಿದೆ. ಕೇಂದ್ರ ಸರ್ಕಾರದಿಂದ ಶೇ. ೧೦೦ ರಷ್ಟು ಅನುದಾನದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ ೩ ಸುತ್ತುಗಳ ಲಸಿಕಾ ಕಾರ್ಯಕ್ರಮ ನಡೆಸಲಾಗಿದೆ. ಕಳೆದ ಅವಧಿಯಲ್ಲಿ ಈ ಲಸಿಕಾ ಕಾರ್ಯಕ್ರಮ ಶೇ. ೯೭ ರಷ್ಟು ಗುರಿ ಸಾಧಿಸಲಾಗಿತ್ತು. ಹಾಗೆಯೇ ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ಗುರಿ ಸಾಧಿಸಲು ಶ್ರಮ ವಹಿಸಿ ಕೆಲಸ ಮಾಡುವಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿ ಬಾರಿಯಂತೆ ಈ ಬಾರಿಯೂ ಕೆಎಂಎಫ್‌ನವರು ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ರೈತರು ಸಹ ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಗಿರೀಶ್‌ಬಾಬು ರೆಡ್ಡಿ ಮಾತನಾಡಿ, ಪಶುವೈದ್ಯರಿಗೆ ತಾಂತ್ರಿಕ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಇರುವ ೩೨ ಸಾವಿರ ನಾಯಿಗಳಿಗೆ ಹುಚ್ಚುನಾಯಿ ರೋಗದ ವಿರುದ್ಧ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸೆ. ೨೮ ರಿಂದ ಅ. ೨೭ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ. ವೈ.ಜಿ. ಕಾಂತರಾಜು ಮಾತನಾಡಿ, ಪಶು ವೈದ್ಯರಿಗೆ ಲಸಿಕೆ ಹಾಕುವ ಸಂಬಂಧ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ಪಶು ವೈದ್ಯರೇ ಹೆಚ್ಚಿನ ಒಡನಾಟ ಹೊಂದಿರುತ್ತಾರೆ. ಹಾಗಾಗಿ ಜಾನುವಾರುಗಳಿಗೆ ಲಸಿಕೆ ನೀಡಲು ಅರಿವು ಮೂಡಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಘ ಕಾರ್ಯೋನ್ಮುಖವಾಗಿದೆ ಎಂದರು.

ಈ ಸಂದರ್ಭದಲ್ಲಿ ಪಶುವೈದ್ಯಕೀಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಎನ್.ಎಸ್. ಬಾಲಚಂದ್ರ, ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ.ಜಿ. ಕಾಂತರಾಜು, ಪ್ರಧಾನ ಕಾರ್ಯದರ್ಶಿ ಡಾ. ಎಸ್.ಬಿ. ಪುರುಷೋತ್ತಮ್, ಪಶು ವೈದ್ಯರಾದ ಡಾ. ಸುನೀಲ್‌ಕುಮಾರ್ ಕೆ.ಎಂ., ಜಿಲ್ಲಾ ಪ್ರತಿನಿಧಿ ಡಾ. ಎಸ್. ಶಶಿಕಲಾ, ಜಂಟಿ ಕಾರ್ಯದರ್ಶಿ ಡಾ. ದೇವರಾಜಪ್ಪ ಪಿ., ಖಜಾಂಚಿ ಡಾ. ಮಂಜುನಾಥ್ ಜಿ., ಡಾ. ವಿನೋದ್‌ಕುಮಾರ್ ವಿ. ಮತ್ತಿತರರು ಉಪಸ್ಥಿತರಿದ್ದರು.

26 ರಿಂದ ಅ. 26ರವರೆಗೆ ಲಸಿಕಾ ಕಾರಕ್ರಮ

4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಸೆ26 ರಿಂದ ಅ. 26ರ ವರೆಗೆ ನಡೆಯಲಿದೆ. ರಾಜ್ಯದಲ್ಲಿ ಇರುವ ಎಲ್ಲ ಜಾನುವಾರುಗಳಿಗೆ (ದನ ಮತ್ತು ಎಮ್ಮೆ) ಗ್ರಾಮವಾರು ಲಸಿಕೆ ಹಾಕುವಂತೆ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಡಾ. ಪಿ.ಟಿ. ಶ್ರೀನಿವಾಸ್ ತಿಳಿಸಿದರು.

5.89 ಲಕ್ಷ ಲಸಿಕೆ ಸರಬರಾಜು

ಜಿಲ್ಲೆಯಲ್ಲಿ 5,72,298 ದನ-ಎಮ್ಮೆಗಳಿವೆ. ಇವುಗಳಿಗೆ ಅಗತ್ಯ ಇರುವ 5.89 ಲಕ್ಷ ಲಸಿಕೆಗಳನ್ನು ಎಲ್ಲ ಪಶು ಆಸ್ಪತ್ರೆಗಳಿಗೆ ಈಗಾಗಲೇ ಸರಬರಾಜು ಮಾಡಲಾಗಿದೆ. ೨೩೯ ಲಸಿಕೆದಾರರು ಮತ್ತು ಕೆಎಂಎಫ್‌ನಿಂದ ೬೧ ವಾಹನಗಳನ್ನು ಸಹ ಈ ಲಸಿಕಾ ಕಾರ್ಯಕ್ರಮಕ್ಕಾಗಿ ನೀಡಲಾಗಿದೆ. ಲಸಿಕೆಗಳನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಶೇಖರಿಸಿಡಲಾಗಿದ್ದು, ಸೆ. ೨೮ ರಿಂದ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ೩೨ ಸಾವಿರ ಸಾಕು ನಾಯಿಗಳಿವೆ. ಇವುಗಳಿಗೂ ಉಚಿತವಾಗಿ ಲಸಿಕೆ ಹಾಕಲಾಗುವುದು. ಹಾಗೆಯೇ ಬೀದಿ ನಾಯಿಗಳಿಗೂ ಲಸಿಕೆ ಹಾಕಲಾಗುವುದು. ಪ್ರಾಣಿ ದಯಾ ಸಂಘ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು, ಗ್ರಾಮಸ್ಥರು ಬೀದಿ ನಾಯಿಗಳಿಗೆ ಲಸಿಕೆ ಹಾಕಲು ಸಹಕಾರ ನೀಡಬೇಕು ಎಂದು ಡಾ. ಗಿರೀಶ್‌ಬಾಬು ರೆಡ್ಡಿ ಕೋರಿದರು

Follow Us:
Download App:
  • android
  • ios