ಗಂಗಾವತಿ: ಅಂಜನಾದ್ರಿ ಪ್ರದೇಶದಲ್ಲಿ ಮತ್ತೆ ಅಕ್ರಮ ರೆಸಾರ್ಟ್‌

*  ತೆರವಿಗೆ ಹಂಪಿ ಪ್ರಾಧಿಕಾರ, ಅರಣ್ಯ ಇಲಾಖೆ ಸೂಚನೆ
*  ಸ್ವಯಂ ಪ್ರೇರಿತವಾಗಿ ತೆರವುಗೊಳಸದಿದ್ದರೆ ಕ್ರಮದ ಎಚ್ಚರಿಕೆ
*  ಸಕ್ರಮಗೊಳಿಸಲು ಜಿಲ್ಲಾಡಳಿತಕ್ಕೆ ಒತ್ತಡ 
 

Again Illegal Resort in Anjanadri Area at Gangavati in Koppal grg

ರಾಮಮೂರ್ತಿ ನವಲಿ

ಗಂಗಾವತಿ(ಸೆ.08): ಅಂಜನಾದ್ರಿ ಪ್ರದೇಶ ಹಾಗೂ ಹನುಮಹಳ್ಳಿ ಸುತ್ತಮುತ್ತ ಮತ್ತೆ ಅನಧಿಕೃತವಾಗಿ ರೆಸಾರ್ಟ್‌ಗಳು ನಿರ್ಮಾಣಗೊಂಡಿದ್ದು, ಇಂತಹ ಸುಮಾರು 25ಕ್ಕೂ ಹೆಚ್ಚು ರೆಸಾರ್ಟ್‌ ತೆರವುಗೊಳಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದ್ದು, ಅರಣ್ಯ ಇಲಾಖೆ ಸಹ ತೆರವುಗೊಳಿಸದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಎರಡು ವರ್ಷದ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸುನೀಲಕುಮಾರ ಅಕ್ರಮ ರೆಸಾರ್ಟ್‌ ತೆರವುಗೊಳಿಸಿದ್ದರು. ಇದೀಗ ಪ್ರವಾಸೋದ್ಯಮದ ಅಭಿವೃದ್ಧಿಯ ನೆಪದಲ್ಲಿ ಮತ್ತೆ 35ಕ್ಕೂ ಅಧಿಕ ರೆಸಾರ್ಟ್‌ಗಳು ತಲೆ ಎತ್ತಿವೆ. ಹಂಪಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಹನುಮಹಳ್ಳಿ, ಆನೆಗೊಂದಿ, ಚಿಕ್ಕ ರಾಂಪುರ, ರಂಗಾಪುರ, ಸಣ್ಣಾಪುರ ಸುತ್ತಲು 35ಕ್ಕೂ ಹೆಚ್ಚು ರೆಸಾರ್ಟ್‌ ಹುಟ್ಟಿಕೊಂಡಿವೆ. ಕೆಲವರು ಪಟ್ಟಾಭೂಮಿಯಲ್ಲಿ ನಿರ್ಮಿಸಿಕೊಂಡರೆ ಹಲವರು ನದಿ ತೀರದ ತಟದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ಕಂದಾಯ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ರೆಸಾರ್ಟ್‌ ಮಾಡಿಕೊಂಡಿದ್ದಾರೆ. ಪ್ರವಾಸೋದ್ಯಮದ ಅಭಿವೃದ್ಧಿ ನೆಪದಲ್ಲಿ ಮಾಲೀಕರು ರೆಸಾರ್ಟ್‌ ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ದುಂಬಾಲು ಬಿದ್ದಿದ್ದಾರೆ.

ಕಾನೂನು ಬಾಹಿರ ಚಟುವಟಿಕೆ:

ರೆಸಾರ್ಟ್‌ಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಇದಕ್ಕೆ ಪುಷ್ಟಿನೀಡುವಂತೆ ಹೊಸ ವರ್ಷಾಚರಣೆ ವೇಳೆ ಡ್ಯಾನ್ಸ್‌ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಪರಿಣಾಮ ಹಲವರು ಪೊಲೀಸ್‌ ಠಾಣೆ ಸೇರಿದ್ದಾರೆ. ವಿರೂಪಾಪುರಗಡ್ಡೆಯಲ್ಲಿ ಕಂದಾಯ, ಅರಣ್ಯ ಮತ್ತು ಹಂಪಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಈ ಹಿಂದೆ 175ಕ್ಕೂ ಹೆಚ್ಚು ರೆಸಾರ್ಟ್‌ಗಳಿದ್ದವು. ಈ ಕಾರಣಕ್ಕೆ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸುನೀಲ್‌ಕುಮಾರ ಅನಧಿಕೃತ ಮತ್ತು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದವರ ಮೇಲೆ ಕ್ರಮಕೈಗೊಳ್ಳುವ ಜತೆಗೆ ತೆರವುಗೊಳಿಸಿದ್ದರು. ವಿರೋಧಿಸಿದವರನ್ನು ಜೈಲಿಗೆ ಕಳುಹಿಸಿದ್ದರು.

ಗಂಗಾವತಿ: ವಿರೂಪಾಪುರಗಡ್ಡೆಯಲ್ಲಿ​ನ ಅಕ್ರಮ ರೆಸಾರ್ಟ್‌ ತೆರವು

ಹಂಪಿ ಪ್ರಾಧಿಕಾರ ಎಚ್ಚರಿಕೆ:

ನದಿ ತೀರ ಸೇರಿ ಕಂದಾಯ ಮತ್ತು ಅರಣ್ಯ ಇಲಾಖೆ ಪ್ರದೇಶ ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರವಾಗಿ ರೆಸಾರ್ಟ್‌ ಪ್ರಾರಂಭಿಸಿದ್ದು ಕೂಡಲೇ ತೆರವುಗೊಳಿಸಿ ಎಂದು ಹಂಪಿ ಪ್ರಾಧಿಕಾರವು ಮಾಲೀಕರಿಗೆ ತಾಕೀತು ಮಾಡಿದೆ.
ಸಕ್ರಮಕ್ಕೆ ಸಿದ್ಧತೆ:

ಆನೆಗೊಂದಿ, ಹನುಮಹಳ್ಳಿ ಸೇರಿ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಕೆಲವರು ಪಟ್ಟಾಭೂಮಿ ಹೊಂದಿದ್ದು ಅಕ್ರಮವಾಗಿ ರೆಸಾರ್ಟ್‌ ನಿರ್ಮಿಸಿದ್ದಾರೆ. ಇವುಗಳನ್ನು ಸಕ್ರಮಗೊಳಿಸುವಂತೆ ಮಾಲೀಕರು ಜಿಲ್ಲಾಡಳಿತಕ್ಕೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಸಕ್ರಮಗೊಳಿಸಲು ಪ್ರಾಧಿಕಾರದ ಅನುಮತಿ ಬೇಕು. ಅಲ್ಲದೆ ಕೃಷಿಭೂಮಿಯಾಗಿರಬೇಕು. ಪಟ್ಟಾಭೂಮಿ ಹೊಂದಿದವರ 6ರಿಂದ 7 ರೆಸಾರ್ಟ್‌ಗಳಿದ್ದು, ಇವುಗಳ ನೆಪದಲ್ಲಿ ಎಲ್ಲ ರೆಸಾರ್ಟ್‌ಗಳನ್ನು ಸಕ್ರಮಗೊಳಿಸಲು ಜಿಲ್ಲಾಡಳಿತಕ್ಕೆ ಒತ್ತಡ ಹಾಕಲಾಗುತ್ತಿದೆ.

ಅರಣ್ಯ ಇಲಾಖೆ ನೋಟಿಸ್‌:

ಹನುಮನಹಳ್ಳಿ ಸರ್ವೇ ನಂ. 20ರಲ್ಲಿ ಕೆಲವರು ಅರಣ್ಯ ಪ್ರದೇಶ ಅತಿಕ್ರಮಿಸಿ ರೆಸಾರ್ಟ್‌ ನಿರ್ಮಿಸಿದ್ದು ತಕ್ಷಣ ತೆರವುಗೊಳಿಸಬೇಕು ಎಂದು 25ಕ್ಕೂ ಹೆಚ್ಚು ಮಾಲೀಕರಿಗೆ ಅರಣ್ಯ ಇಲಾಖೆಯ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಇಲ್ಲದಿದ್ದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆನೆಗೊಂದಿ ಮತ್ತು ಹನುಮನಹಳ್ಳಿ ವ್ಯಾಪ್ತಿಯ ಕಾಯ್ದಿಟ್ಟಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರೆಸಾರ್ಟ್‌ ನಿರ್ಮಿಸಿಕೊಂಡವರಿಗೆ ನೋಟಿಸ್‌ ನೀಡಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಸೂಚಿಸಲಾಗಿದೆ. ತೆರವುಗೊಳಿಸದೆ ಇದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ  ಶಿವರಾಜ್‌ ಮೇಟಿ ತಿಳಿಸಿದ್ದಾರೆ. 

ಅನಧಿಕೃತವಾಗಿ ಪ್ರಾರಂಭಿಸಿರುವ ರೆಸಾರ್ಟ್‌ ಮಾಲೀಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೋಟಿಸ್‌ ನೀಡಿದೆ. ಕೆಲವರು ಪಟ್ಟಾಭೂಮಿಯಲ್ಲಿ ರೆಸಾರ್ಟ್‌ ನಿರ್ಮಿಸಿಕೊಂಡಿದ್ದು ಅವು ಕಾನೂನು ರೀತಿಯಲ್ಲಿ ಇದ್ದರೆ ಸಕ್ರಮಗೊಳಿಸಲು ಸರ್ಕಾರದ ಆದೇಶವಿದೆ. ಇದಕ್ಕೆ ಹಂಪಿ ಪ್ರಾಧಿಕಾರ ಅನುಮತಿ ನೀಡಬೇಕಾಗುತ್ತದೆ ಎಂದು ಗಂಗಾವತಿ ತಹಸೀಲ್ದಾರ್‌  ನಾಗರಾಜ್‌ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios