ಕ್ಷೇತ್ರದಲ್ಲಿ ಜೇನುಗೂಡಿನಂತೆ ಕಟ್ಟಿರುವ ರೈತರ ಕುಟುಂಬವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

 ಮದ್ದೂರು (ಅ.18): ಕ್ಷೇತ್ರದಲ್ಲಿ ಜೇನುಗೂಡಿನಂತೆ ಕಟ್ಟಿರುವ ರೈತರ ಕುಟುಂಬವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ತಾಲೂಕಿನ ನಗರಕೆರೆ ಗ್ರಾಮದಲ್ಲಿ (Village) ಯುವ ಮುಖಂಡ ಎನ್‌.ಡಿ.ಸಂದೀಪ್‌ ನೇತೃತ್ವದಲ್ಲಿ ರಾಜಕೀಯ (politics) ಮುಖಂಡ ದಿ.ಎನ್‌ಎಂಆರ್‌ ಬಳಗದ ಕಾರ್ಯಕರ್ತರನ್ನು ಜೆಡಿಎಸ್‌ ಪಕ್ಷಕ್ಕೆ ಮರು ಸೇರ್ಪಡೆಗೊಳಿಸಿ ಮಾತನಾಡಿದರು.

ವಾಮ ಮಾರ್ಗದಿಂದ ಹಣ ಸಂಪಾದನೆ ಮಾಡಿರುವ ಕೆಲ ಉದ್ಯಮಿಗಳು ಮದ್ದೂರು ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ನಾನು ಕಟ್ಟಿರುವ ಜೇನುಗೂಡಿನಂತಹ ರೈತರ ಕುಟುಂಬಗಳನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಇದರಿಂದ ಭವಿಷ್ಯದಲ್ಲಿ ಕುಟುಂಬಗಳು ನಾಶವಾಗಬಾರದು ಎಂಬ ಉದ್ದೇಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇನೆ ಎಂದರು.

ಮದ್ದೂರು ಕ್ಷೇತ್ರಕ್ಕೆ ಶಾಸಕನಾಗಿ ಬಂದ ನಂತರ ಸೋಲು ಗೆಲುವಿನ ರುಚಿಯ ನಡುವೆಯೂ ರೈತರು ಹಾಗೂ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ, ಕೇವಲ ರಾಜಕೀಯ ಉದ್ದೇಶಕ್ಕಾಗಿ ಯಾವುದೇ ಕುಟುಂಬಗಳು ಇಬ್ಭಾಗವಾಗದಂತೆ ಮುತುವರ್ಜಿ ವಹಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ನಾನೆಂದೂ ಸೋತಿಲ್ಲ. ಅದನ್ನು ಕಣ್ಣು ತೆರೆದು ನೋಡುವ ಜನ ಕಡಿಮೆಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ನೋಡುವ ಬದಲಾಗಿ ನಾನು ರಾಜಕೀಯದಿಂದ ವಿಮುಖವಾಗುವ ನಿರ್ಧಾರಕ್ಕೆ ಬಂದಿದ್ದೆ. ಆದರೆ, ನಮ್ಮ ಜೆಡಿಎಸ್‌ ಪಕ್ಷದ ಮುಖಂಡರುಗಳು ಸಲಹೆ ನೀಡಿ ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಕಳೆದ 9 ವರ್ಷಗಳಿಂದ ದುಡಿದಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ ತಾವು ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರವನ್ನು ಜನತೆಯ ತೀರ್ಮಾನಕ್ಕೆ ಬಿಡುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಪಕ್ಷದ ನಾಯಕರ ಸಲಹೆಯಂತೆ ಪೂರ್ವಭಾವಿಯಾಗಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಜನ ಸಂಪರ್ಕ ಸಭೆ ನಡೆಸುವ ಮೂಲಕ ನನ್ನ ಮುಂದಿನ ರಾಜಕೀಯ ಭವಿಷ್ಯವನ್ನು ಬಿಟ್ಟಿದ್ದೇನೆ. ಮುಂದಿನ ಜನವರಿಯೊಳಗೆ ಮತ್ತೊಮ್ಮೆ ಕ್ಷೇತ್ರ ಪ್ರವಾಸ ಮಾಡಿ ಜನರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ತಮ್ಮಣ್ಣ ತಿಳಿಸಿದರು. ಜೆಡಿಎಸ್‌ ಪಕ್ಷಕ್ಕೆ ಮರು ಸೇರ್ಪಡೆಗೊಂಡ ಯುವ ಮುಖಂಡ ಎನ್‌.ಡಿ.ಸಂದೀಪ್‌ ಮಾತನಾಡಿ, ನಮ್ಮ ಕುಟುಂಬದ ಹಿರಿಯರಾದ ದಿ.ಮರಿಲಿಂಗೇಗೌಡ, ಎನ್‌.ಎಂ.ರಾಮಲಿಂಗಯ್ಯ ಹಾಗೂ ನಾನು ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೆವು. ಕೆಲವೊಂದು ರಾಜಕೀಯ ಕಾರಣದಿಂದಾಗಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದೆವು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು, ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗುವ ಮೂಲಕ ಕ್ಷೇತ್ರದ ಮತ್ತಷ್ಟುಅಭಿವೃದ್ಧಿಗೆ ಕಾರಣರಾಗಲಿ ಎಂಬ ಒಂದೇ ಉದ್ದೇಶದಿಂದ ಮತ್ತೆ ಜೆಡಿಎಸ್‌ ಪಕ್ಷಕ್ಕೆ ಮರು ಸೇರ್ಪಡೆಗೊಂಡಿರುವುದಾಗಿ ಸಂದೀಪ್‌ ಸ್ಪಷ್ಟಪಡಿಸಿದರು.

ಇದೇ ವೇಳೆ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್‌ ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಬ್ಯಾಡರಹಳ್ಳಿ ರಾಮಕೃಷ್ಣ, ತೊಪ್ಪನಹಳ್ಳಿ ಮಹೇಂದ್ರ, ಅರವಿಂದ್‌, ಎನ್‌.ಎಂ.ರಾಮಲಿಂಗಯ್ಯ ಬೆಂಬಲಿಗರಾದ ಎನ್‌.ಎಲ…. ಸೋಮಶೇಖರ್‌, ಲಿಂಗರಾಜ್‌, ನಾಗರಾಜ…, ನಿಂಗೇಗೌಡ, ಅನಿಲ… ಕುಮಾರ್‌, ರಾಮಚಂದ್ರ, ಪ್ರಮೋದ್‌, ಗ್ರಾಪಂ ಸದಸ್ಯರಾದ ಎನ್‌.ಟಿ.ರುದ್ರಯ್ಯ, ಚಂದ್ರಕಲಾ, ಶಿಲ್ಪಾ ಇತರರು ಇದ್ದರು.

ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ: ಶಾಸಕ ಡಿ.ಸಿ.ತಮ್ಮಣ್ಣ

- ಜೇನುಗೂಡಿನಂತಿರುವ ರೈತರ ಕುಟುಂಬ ರಕ್ಷಣೆ ಮಾಡಲು ಸ್ಪರ್ಧೆ ನಿರ್ಧಾರ

ಜನವರಿಯಲ್ಲಿ ಮತ್ತೊಮ್ಮೆ ಕ್ಷೇತ್ರ ಪ್ರವಾಸ

ವಾಮ ಮಾರ್ಗದಿಂದ ಹಣ ಸಂಪಾದನೆ ಮಾಡಿರುವ ಕೆಲ ಉದ್ಯಮಿಗಳು ಮದ್ದೂರು ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.

ಮದ್ದೂರು ಕ್ಷೇತ್ರಕ್ಕೆ ಶಾಸಕನಾಗಿ ಬಂದ ನಂತರ ಸೋಲು ಗೆಲುವಿನ ರುಚಿಯ ನಡುವೆಯೂ ರೈತರು ಹಾಗೂ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿದ್ದೇನೆ