Asianet Suvarna News Asianet Suvarna News

Rail Line: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಮತ್ತೆ ಸಂಕಷ್ಟ

*  ಪಶ್ಚಿಮ ಘಟ್ಟದ ವನ್ಯಜೀವಿಗಳ ಮೇಲಾಗುವ ಪರಿಣಾಮ ಏನು?
*  ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ವರದಿ ಕೇಳಿದ ಹೈಕೋರ್ಟ್‌
*  ಸಾಧಕ-ಬಾಧಕ ಅಧ್ಯಯನಕ್ಕೆ ನಿರ್ದೇಶನ-ಸ್ವಾಗತ
 

Again Hardship to Hubballi-Ankola Rail Line grg
Author
Bengaluru, First Published Dec 2, 2021, 7:51 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.02): ಹುಬ್ಬಳ್ಳಿ-ಅಂಕೋಲಾ(Hubballi-Ankola) ನಡುವಿನ ಬ್ರಾಡ್‌ಗೇಜ್‌ ರೈಲು ಮಾರ್ಗ(Rail Line) ಯೋಜನೆಯಿಂದ ಪಶ್ಚಿಮ ಘಟ್ಟಗಳಲ್ಲಿನ(Western Ghat) ಅಪರೂಪದ ವನ್ಯಜೀವಿಗಳ ಮೇಲಾಗಲಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್‌(High Corut) ನಿರ್ದೇಶಿಸಿದೆ.

ಯೋಜನೆಗೆ ಕರ್ನಾಟಕ ವನ್ಯಜೀವಿ ಮಂಡಳಿ(Karnataka Wildlife Board) ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್‌ ಮತ್ತು ಗಿರಿಧರ್‌ ಕುಲಕರ್ಣಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದವು.

ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು!

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯಿಂದ ಪಶ್ಚಿಮ ಘಟ್ಟಗಳಲ್ಲಿನ ಅಪರೂಪದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂಬುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಆದರೆ, ಅದರಿಂದ ವನ್ಯಜೀವಿ ಸಂಪತ್ತಿಗೆ ತೊಂದರೆ ಆಗಬಾರದು. ಆದ್ದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು(National Wildlife Board) ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮೌಲ್ಯಮಾಪನ ನಡೆಸಿ ವರದಿ ಸಲ್ಲಿಸಬೇಕು. ಅದಕ್ಕಾಗಿ ಈಗಾಗಲೇ ಲಭ್ಯವಿರುವ ಸಮೀಕ್ಷೆ(Survey) ಹಾಗೂ ವರದಿ ಪರಿಶೀಲಿಸಬೇಕು. ಅಗತ್ಯಬಿದ್ದರೆ ತಜ್ಞರ ನೆರವು ಪಡೆದುಕೊಳ್ಳಬಹುದು ಎಂದು ನಿರ್ದೇಶಿಸಿತು. ಹುಬ್ಬಳ್ಳಿ-ಅಂಕೋಲಾ ನಡುವೆ 164.44 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ 2020ರ ಮಾ.20ರಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಸಾಧಕ-ಬಾಧಕ ಅಧ್ಯಯನಕ್ಕೆ ನಿರ್ದೇಶನ-ಸ್ವಾಗತ

ಅಂಕೋಲಾ: ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿ ಹಿನ್ನೆಲೆಯಲ್ಲಿ ವನ್ಯಜೀವಿಗಳ(Wildlife) ಮೇಲೆ ಆಗಬಹುದಾದ ಸಾಧಕ-ಬಾಧಕಗಳ ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿರುವುದನ್ನು ಹುಬ್ಬಳ್ಳಿ ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಸ್ವಾಗತಿಸಿದೆ.

ರಾಜ್ಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ನೀಡಿದ್ದರೂ ವಿನಾಕಾರಣ ವನ್ಯಜೀವಿ ಮಂಡಳಿಯ ನಿರ್ಧಾರದ ವಿರುದ್ಧ ಕೆಲವರು ಕೋರ್ಟ್‌ ಮೆಟ್ಟಿಲು ಏರಿದ್ದರು. ಈಗ ಹೈಕೋರ್ಟ್‌ ನೀಡಿರುವ ತೀರ್ಪು ಯೋಜನೆಯನ್ನು ಜಾರಿಗೊಳಿಸುವ ವಿಷಯದಲ್ಲಿ ನಮ್ಮ ಸಮಿತಿ ನಡೆಸಿದ್ದ ಸುದೀರ್ಘ ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಿದೆ. ಈ ವಿಷಯದಲ್ಲಿ ಚರ್ಚಿಸಲು ಮುಖ್ಯಮಂತ್ರಿ ಸಮಯ ಕೇಳಿದ್ದು ಅವರನ್ನು ಭೇಟಿಯಾಗಿ ಸರ್ಕಾರದ ವತಿಯಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಯೋಜನೆಗೆ ಪೂರಕವಾಗಿ ಇರುವ ವಿವಿಧ ಅಧ್ಯಯನದ ಮಾಹಿತಿಯನ್ನು ಒದಗಿಸುವ ಮೂಲಕ ಯೋಜನಾ ಪರ ನಿರ್ಣಯ ಬರುವಂತೆ ಕ್ರಮ ತೆಗೆದುಕೊಳ್ಳಲು ವಿನಂತಿ ಮಾಡಲಿದ್ದೇವೆ. ವಿವಿಧ ಪಕ್ಷದ ಸಂಸದರು, ಶಾಸಕರು ಮತ್ತು ಪ್ರಮುಖರನ್ನು ಭೇಟಿಯಾಗಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲ ಪಡೆಯಲಿದ್ದೇವೆ ಎಂದು ಹುಬ್ಬಳ್ಳಿ ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ರಮಾನಂದ ಬಿ. ನಾಯಕ, ಕಾರ್ಯದರ್ಶಿ ವಿಠ್ಠಲದಾಸ ಕಾಮತ್‌, ಸಂಚಾಲಕ ಉಮೇಶ ನಾಯ್ಕ ಮತ್ತು ಸಮಿತಿಯ ಎಲ್ಲ ಪದಾಧಿಕಾರಿಗಳು ತಿಳಿಸಿದ್ದಾರೆ.

2 ಲಕ್ಷ ಮರಗಳ ಮಾರಣಹೋಮಕ್ಕೆ ಬ್ರೇಕ್: ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಸ್ಥಗಿತ!

ಸಚಿವ ಹೆಬ್ಬಾರ್‌ ಸ್ವಾಗತ:

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿ ಹಿನ್ನೆಲೆಯಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌(Shivaram Hebbar) ಸ್ವಾಗತಿಸಿದ್ದಾರೆ.

ವನ್ಯಜೀವಿಗಳ ಮೇಲೆ ಆಗಬಹುದಾದ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿರುವುದು ನಮಗೆ ಸಿಕ್ಕ ಮಹತ್ವದ ಗೆಲುವು. ರಾಜ್ಯ ಸರ್ಕಾರವೂ ತಡೆಯಾಜ್ಞೆ ತೆರವಿಗಾಗಿ ವಿಶೇಷ ವಕೀಲರನ್ನು ನೇಮಕ ಮಾಡಿತ್ತು. ಈಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೂ ಯೋಜನೆಯಿಂದ ಆಗುವ ಲಾಭದ ಬಗ್ಗೆ ಮತ್ತು ಯೋಜನೆ ಹೇಗೆ ಪರಿಸರಕ್ಕೆ ಪೂರಕ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದಿದ್ದಾರೆ.

ರೂಪಾಲಿ ನಾಯ್ಕ ಸ್ವಾಗತ

ಕಾರವಾರ: ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ(Roopali Naik) ಸ್ವಾಗತಿಸಿದ್ದಾರೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿ, ಈ ರೈಲು ಮಾರ್ಗದಿಂದ ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಶಿಫಾರಸು ಮಾಡಿರುವುದು ಈ ರೈಲು ಮಾರ್ಗ ನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ದೊರೆತ ಮಹತ್ವದ ಗೆಲುವಾಗಿದೆ. ಈ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೆ ತಾವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ನಿರಂತರವಾಗಿ ಆಗ್ರಹಿಸುತ್ತಿದ್ದು, ಉಭಯ ಸರ್ಕಾರಗಳೂ ಯೋಜನೆಗೆ ಪೂರಕವಾಗಿವೆ. ಇನ್ನು ಮುಂದೆಯೂ ಈ ರೈಲು ಮಾರ್ಗ ಯೋಜನೆಯ ಪರವಾಗಿ ಅವಿರತವಾಗಿ ಪ್ರಯತ್ನಿಸುವುದಲ್ಲದೆ, ಹೋರಾಟದಲ್ಲಿ ತೊಡಗಿಕೊಂಡ ಎಲ್ಲರನ್ನೂ ಅಭಿನಂದಿಸುವುದಾಗಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
 

Follow Us:
Download App:
  • android
  • ios