ಇಂಡಿ:(ಸೆ.28) ಮಹಾರಾಷ್ಟ್ರದ ಉಜನಿ ಜಲಾಶಯದ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಗುರುವಾರ ಹಾಗೂ ಶುಕ್ರವಾರ ಸೇರಿ 1.73 ಲಕ್ಷ ಕ್ಯುಸೆಕ್ ನೀರು ಭೀಮಾನದಿಗೆ ಹರಿದು ಬರುತ್ತಿರುವುದರಿಂದ ಇಂಡಿ ತಾಲೂಕು ವ್ಯಾಪ್ತಿಯ ಭೀಮಾನದಿ ದಂಡೆ ಮೇಲಿನ ವಿವಿಧ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. 

ಇಂಡಿ ತಾಲೂಕಿನ ಹಿಂಗಣಿ, ಚಣೆಗಾಂವ ಬಾಂದಾರಗಳ ಮೇಲೆ ನೀರು ನುಗ್ಗಿ ಜಲಾವೃತಗೊಂಡು, ಬಾಂದಾರದ ಮೇಲಿನ ಸಂಚಾರ ಸ್ಥಗಿತೊಂಡಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ನೀರು ಹರಿದು ಬಿಟ್ಟಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. 

ಬೆಳೆ ಹಾನಿ ಕುರಿತು ಪರಿಹಾರಕ್ಕಾಗಿ ಸರ್ವೆ ಕಾರ್ಯವನ್ನೂ ಮಾಡಲಾಗಿತ್ತು. ಆದರೆ ಗುರುವಾರ 1  ಲಕ್ಷ, ಶುಕ್ರವಾರ 72 ಸಾವಿರ ಕ್ಯುಸೆಕ್ ನೀರನ್ನು ಮತ್ತೆ ಉಜನಿ ಹಾಗೂ ನಿರಾ (ಸಂಗಮ) ಜಲಾಶಯದಿಂದ ಭೀಮಾನದಿಗೆ ನೀರು ಹರಿದು ಬಿಟ್ಟಿರುವುದರಿಂದ ಇಂಡಿ ತಾಲೂಕು ವ್ಯಾಪ್ತಿಯಲ್ಲಿ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಾಂದಾರಗಳ ಮೇಲೆ ನೀರು ಹರಿದಿದ್ದು, ಬಾಂದಾರದ ಮೇಲಿನ ಸಂಪರ್ಕ ಸ್ಥಗಿತಗೊಂಡಿದೆ. 

ತಾಲೂಕಿನ ಚಣೆಗಾಂವ, ಹಿಂಗಣಿ ಬ್ಯಾ ರೇಜ್‌ಗಳ ಮೆಲೆ ನೀರು ಹರಿಯತೊಡಗಿದೆ. ಹೀಗಾಗಿ ಕರ್ನಾಟಕ ಭಾಗದ ಗ್ರಾಮಗಳಿಂದ ಮಹಾರಾಷ್ಟ್ರ ಭಾಗದ ಗ್ರಾಮಗಳಿಗೆ ತೆರಳುವ ಸಂಪರ್ಕ ಕಡಿತಗೊಂಡಿದೆ. ಉಜನಿ ಜಲಾಶಯದ ಭಾಗದಲ್ಲಿ ಮತ್ತೆ ಮಳೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭೀಮಾನದಿಗೆ ಹೆಚ್ಚು ನೀರು ಬಿಡುವ ಸಾಧ್ಯತೆ ಇದೆ ಎಂದು ಉಜನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಭೀಮಾನದಿಗೆ 2  ಲಕ್ಷ ಕ್ಯುಸೆಕ್‌ಕ್ಕಿಂತ ಅಧಿಕ ನೀರು ಹರಿದು ಬಿಟ್ಟರೆ ತಾಲೂಕಿನ ಖೇಡಗಿ, ಭುಯ್ಯಾರ, ಮಿರಗಿ, ರೋಡಗಿ, ನಾಗರಳ್ಳಿ, ಗುಬ್ಬೇವಾಡ, ಚಿಕ್ಕಮಣೂರ ಸೇರಿದಂತೆ 12  ಗ್ರಾಮಗಳಿಗೆ ನೆರೆ ಉಂಟಾಗುವ ಸಾಧ್ಯತೆ ಇದೆ. ಬ್ಯಾರೇಜ್‌ಗಳ ಮೇಲೆ ನೀರು ತಾಲೂಕಿನ ವ್ಯಾಪ್ತಿಯಲ್ಲಿ ಹರಿದಿರುವ ಭೀಮಾನದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿ 8  ಬ್ಯಾರೇಜ್ ನಿರ್ಮಿಸಲಾಗಿದೆ. ಹಿಂಗಣಿ, ಚಣೆಗಾಂವ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದ್ದು, ಬುಯ್ಯಾರ ಬ್ಯಾರೇಜ್ ಮೇಲೆ ನೀರು ಹರಿಯಲು ಕೇಲವ ಒಂದು ಫೂಟ್ ಬಾಕಿ ಇದೆ. 

ಭೀಮಾನದಿಯಲ್ಲಿನ ಗೋವಿಂದಪೂರ, ಉಮರಾಣಿ, ಚಣೆಗಾಂವ, ಹಿಂಗಣಿ, ಕಡ್ಲೇ ವಾಡ, ಶಿರನಾಳ, ಧೂಳಖೇಡ, ಹಿಳ್ಳಿ ಬ್ಯಾ ರೇಜ್‌ಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಬ್ಯಾರೇಜ್‌ಗಳ ಮೇಲಿನ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭೀಮಾನದಿಗೆ ಹರಿಯುತ್ತಿರುವ ನೀರಿನಿಂದ ಸೊನ್ನ ಬಳಿ ನಿರ್ಮಿಸಿದ ಅಣೆಕಟ್ಟೆ ಹಿನ್ನೀರಿನಿಂದ ಮಿರಗಿ-ರೋಡಗಿ ರಸ್ತೆ ಸ್ಥಗಿತಗೊಂಡಿದೆ. ನೀರಿನ ಆಚೆಗಿರುವ ವಸತಿ ಪ್ರದೇಶದ ಜನರು ಮಿರಗಿ ಗ್ರಾಮಕ್ಕೆ ಬರಲು ಸುಮಾರು 4 ಕಿಮೀ ಸುತ್ತಿ ಬರುತ್ತಿದ್ದಾರೆ. ನೀರು ಹೆಚ್ಚಿನ ಪ್ರಮಾಣದಲ್ಲಿ ಭೀಮಾನದಿಗೆ ಬಂದರೆ, ಸುಮಾರು 12 ಗ್ರಾಮಗಳು ಪ್ರವಾಹ ಭೀತಿ ಎದುರಿಸಬೇಕಾಗುತ್ತದೆ.   

ಮಹಾರಾಷ್ಟ್ರದಿಂದ ಭೀಮಾ ನದಿಗೆ 1. 73 ಲಕ್ಷ ಕ್ಯುಸೆಕ್ ನೀರು

ಮಹಾರಾಷ್ಟ್ರದಿಂದ ಭೀಮಾ ನದಿಗೆ ಅಪಾರ ನೀರು ಬಂದಿರುವುದರಿಂದ ಶುಕ್ರವಾರ ತಾಲೂಕಿನ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತ್ತವಾಗಿದ್ದು ಹೊರ ಸಂಪರ್ಕ ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿನ ಧಾರಾಕಾರ ಮಳೆಯಿಂದ ಕಳೆದ ತಿಂಗಳ ಸಹ ತಾರಾಪುರ ಗ್ರಾಮ ಒಂದೇ ತಿಂಗಳಲ್ಲಿ 4  ಬಾರಿ ಸಂಪರ್ಕ ಕಳೆದುಕೊಂಡಿತ್ತು. ಈಗ ಉಜನಿ ಜಲಾಶಯದಿಂದ 67 ಸಾವಿರ ಕ್ಯುಸೆಕ್ ನೀರು ಬಿಟ್ಟಿದರಿಂದ ತಾರಾಪುರ ಮತ್ತೆ ಶುಕ್ರವಾರ ಸಂಜೆ ಹೊರ ಸಂಪರ್ಕ ಕಳೆದು ಕೊಂಡಿದೆ. 

ಆಲಮೇಲ-ತಾರಾಪುರ ಸಂ ಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಗ್ರಾಮದ ಒಳಗಡೆ ಹೋಗಲು ಜನರು ಹರಸಾಹಸ ಪಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಸೊನ್ನ ಡ್ಯಾಮ್ ನಿಂದ ಮುಳಗಡೆಯಾದ ತಾರಾಪುರ ಈಗ ಸಂಪೂರ್ಣ ತನ್ನ ಅಸ್ಥತ್ವ ಕಳೆದುಕೊಂಡಿದ್ದು ಶಾಶ್ವತ ಸ್ಥಳಾಂತರಕ್ಕೆ ಬೇಡಿಕೆ ಇಟ್ಟಿದರೂ ಅವರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ.

ಸೊನ್ನ ಡ್ಯಾಮ್‌ನಲ್ಲಿ ಶುಕ್ರವಾರ 30 ಸಾವಿರ ಕ್ಯುಸೆಕ್ ನೀರು ಒಳಹರಿಯುವು- ಹೊರಹರಿವು ಇದ್ದು ಸಂಜೆ ವೇಳೆ 67  ಸಾವಿರ ಕ್ಯುಸೆಕ್ ನೀರು ಹೆಚ್ಚುವರಿಯಾಗಿ ಬಂದಿದ್ದರಿಂದ ಸಂಗ್ರಹವಾಗಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಸೊನ್ನೆ ಡ್ಯಾಮ್‌ನಲ್ಲಿ ಒಟ್ಟು 3.09 ಟಿಎಂಸಿ ನೀರು ಸಂಗ್ರಹವಾಗಿದ್ದು ಇದರಿಂದ ತಾರಾಪುರ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.