ಬೆಂಗಳೂರು: ಬನ್ನೇರುಘಟ್ಟ ಪಾರ್ಕ್‌ನಲ್ಲಿ ನಿಲ್ಲದ ಪ್ರಾಣಿಗಳ ಮಾರಣ ಹೋಮ, ಮತ್ತೆ ಜಿಂಕೆಗಳು ಸಾವು
ಸಚಿವರ ಭೇಟಿ ಬಳಿಕವೂ ಜಿಂಕೆಗಳ ಸಾವಿನ ಸರಣಿ ನಿಂತಿಲ್ಲ, ಇದೀಗ ಮತ್ತೆ 6 ಜಿಂಕೆಗಳು ಜಂತು ಹುಳುಗಳ ಕಾಟದಿಂದ ಸಾವನ್ನಪ್ಪಿದ್ದು, ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಸಾವಿಗೆ ಪ್ರಾಣಿಪ್ರಿಯರ ಆಕ್ರೋಶ ಕಟ್ಟೆ ಒಡೆದಿದೆ.
ಬೆಂಗಳೂರು(ಸೆ.26): ಬನ್ನೇರುಘಟ್ಟ ಪಾರ್ಕ್‌ನಲ್ಲಿ ಪ್ರಾಣಿಗಳ ಮಾರಣ ಹೋಮ ಮುಂದುವರಿದಿದೆ. ಮತ್ತೆ 6 ಜಿಂಕೆಗಳು ಸಾವನ್ನಪ್ಪಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದೆರಡು ತಿಂಗಳಿಂದ 7 ಚಿರತೆ ಮರಿ ಮತ್ತು 16 ಜಿಂಕೆಗಳು ಸಾವನ್ನಪ್ಪಿದವು. ದೌಡಾಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಿರಿಯ ಅಧಿಕಾರಿಗಳಿಂದ ಸಮಗ್ರ ವರದಿ ಬಳಿಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಸಚಿವರ ಭೇಟಿ ಬಳಿಕವೂ ಜಿಂಕೆಗಳ ಸಾವಿನ ಸರಣಿ ನಿಂತಿಲ್ಲ, ಇದೀಗ ಮತ್ತೆ 6 ಜಿಂಕೆಗಳು ಜಂತು ಹುಳುಗಳ ಕಾಟದಿಂದ ಸಾವನ್ನಪ್ಪಿದ್ದು, ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಸಾವಿಗೆ ಪ್ರಾಣಿಪ್ರಿಯರ ಆಕ್ರೋಶ ಕಟ್ಟೆ ಒಡೆದಿದೆ.
ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಬಳಿಕ ಈಗ 13 ಜಿಂಕೆಗಳ ಸಾವು: ಪ್ರಾಣಿ ಪ್ರಿಯರ ಆಕ್ರೋಶ
ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಅರಣ್ಯ ಸಚಿವರು, ಪ್ರಾಣಿಗಳ ಆರೋಗ್ಯದ ತೀವ್ರ ನಿಗಾಕ್ಕೆ ಸೂಚಿಸಿದ್ದರು. ಸಚಿವರ ಭೇಟಿ ಬಳಿಕ ಅಧಿಕಾರಿಗಳು ಜಿಂಕೆಗಳ ಕ್ವಾರಂಟೈನ್ ಮಾಡಿದ್ದರೂ ಜಿಂಕೆಗಳ ಸಾವು ಮುಂದುವರೆದಿದೆ. ನಗರದ ಸೇಂಟ್ ಜಾನ್ ಆಸ್ಪತ್ರೆ ಉದ್ಯಾನವನದಿಂದ ತರಲಾಗಿದ್ದ 37 ಜಿಂಕೆಗಳ ಪೈಕಿ ಒಟ್ಟು 23 ಜಿಂಕೆಗಳು ಸಾವಿಗೀಡಾಗಿದ್ದು, 14 ಜಿಂಕೆಗಳು ಉಳಿದಿವೆ.
ಜಿಂಕೆಗಳ ಸಾವನ್ನು ತಡೆಯುವ ನಿಟ್ಟಿನಲ್ಲಿ ಆ್ಯಂಟಿಬಯಾಟಿಕ್ ಸೇರಿದಂತೆ ಅಗತ್ಯ ಔಷದೋಪಚಾರ ಮಾಡಲಾಗುತ್ತಿದೆ. ಸದ್ಯ ಉಳಿದಿರುವ ಜಿಂಕೆಗಳು ಆ್ಯಂಟಿಬಯಾಟಿಕ್ ಔಷಧಿಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿವೆ. ಅಲ್ಲದೆ ಚಿರತೆಗಳಿಗೆ ವೈರಸ್‌ನಿಂದ ಯಾವುದೇ ತೊಂದರೆಯಾಗದಂತೆ ಬೂಸ್ಟರ್ ಡೋಸ್ ನೀಡಿದ್ದು, ಉಳಿದ ಚಿರತೆಗಳು ಆರೋಗ್ಯವಾಗಿವೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದರೆ ಅಮಾಯಕ ಪ್ರಾಣಿಗಳ ಜೀವ ಉಳಿಸಬಹುದಿತ್ತು. ಆದರೆ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಪ್ರಾಣಿಗಳ ಸಾವಿನ ಬಳಿಕ ಸಚಿವರ ಬೇಟಿ ಬಳಿಕ ಅಗತ್ಯ ಮುಂಜಾಗ್ರತಾ ಕ್ರಮ ಎನ್ನುತ್ತಿರುವುದು ಮಾತ್ರ ಬೇಸರದ ಸಂಗತಿ ಎಂದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.