Asianet Suvarna News Asianet Suvarna News

ಅಡಕೆ ಮರ ಬಳಿಕ ಈಗ ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ

ಅಡಕೆ ಮರ ಏರುವ ಟ್ರೀ ಬೈಕ್‌ ಕಂಡು ಹುಡುಕಿದ ಯಶಸ್ಸಿನ ಬಳಿಕ ಬಂಟ್ವಾಳ ಬಳಿಯ ಕೃಷಿ ಸಂಶೋಧಕ ಕೋಮಲೆ ಗಣಪತಿ ಭಟ್‌ ಈಗ ಬಹು ಅಪೇಕ್ಷೆಯ ತೆಂಗಿನ ಮರ ಏರುವ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ ಪಡಿಸಿದ್ದು, ಬೈಕ್‌ಗೆ ಎಲ್ಲೆಡೆಯಿಂದ ಬೇಡಿಕೆ ವ್ಯಕ್ತವಾಗತೊಡಗಿದೆ.

After the areca nut tree now coconut tree is the tree bike development at mangaluru rav
Author
First Published Dec 11, 2022, 2:52 PM IST

ಆತ್ಮಭೂಷಣ್‌

ಮಂಗಳೂರು (ಡಿ.11) : ಅಡಕೆ ಮರ ಏರುವ ಟ್ರೀ ಬೈಕ್‌ ಕಂಡು ಹುಡುಕಿದ ಯಶಸ್ಸಿನ ಬಳಿಕ ಬಂಟ್ವಾಳ ಬಳಿಯ ಕೃಷಿ ಸಂಶೋಧಕ ಕೋಮಲೆ ಗಣಪತಿ ಭಟ್‌ ಈಗ ಬಹು ಅಪೇಕ್ಷೆಯ ತೆಂಗಿನ ಮರ ಏರುವ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ ಪಡಿಸಿದ್ದು, ಬೈಕ್‌ಗೆ ಎಲ್ಲೆಡೆಯಿಂದ ಬೇಡಿಕೆ ವ್ಯಕ್ತವಾಗತೊಡಗಿದೆ.

ಕರಾವಳಿಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಅಡಕೆ. ಆದರೆ ಅಡಕೆ ಕೊಯ್ಯಲು ಮರ ಏರಲು ಕೆಲಸಗಾರರ ಅಭಾವ. ಈ ಕೊರತೆ ನೀಗಿಸಲು ಬಿಎಸ್‌ಸಿ ಓದಿದ ಪ್ರಗತಿಪರ ಕೃಷಿಕ ಗಣಪತಿ ಭಟ್ಟರು ಶೋಧಿಸಿದ್ದು ಟ್ರೀ ಬೈಕ್‌ನ್ನು. ಸುಲಭ ಹಾಗೂ ಸಲೀಸಾಗಿ ಅಡಕೆ ಮರ ಏರಲು ಸಾಧ್ಯ ಎಂಬುದನ್ನು ಟ್ರೀ ಬೈಕ್‌ ಶೋಧಿಸುವ ಮೂಲಕ ತೋರಿಸಿಕೊಟ್ಟರು. 2019ರಲ್ಲಿ ಕಂಡುಕೊಂಡ ಈ ಟ್ರೀ ಬೈಕ್‌ ಸಂಶೋಧನೆ ಫಲವಾಗಿ ಇಲ್ಲಿವರೆಗೆ ಸುಮಾರು 700ಕ್ಕೂ ಅಧಿಕ ಟ್ರೀಬೈಕ್‌ ಮಾರಾಟವಾಗಿದೆ. 54 ಕೆ.ಜಿ. ತೂಕದ ಈ ಟ್ರೀ ಬೈಕ್‌ನ ಮಾರಾಟ ಬೆಲೆ 85 ಸಾವಿರ ರು. ಗಣಪತಿ ಭಟ್ಟರ ಕಲ್ಪನೆಯಲ್ಲಿ ಮೂಡಿಬಂದ ಟ್ರೀ ಬೈಕ್‌ನ್ನು ಶಿವಮೊಗ್ಗದ ಮೆಬೆನ್ಸ್‌ ಎಂಜಿನಿಯರಿಂಗ್‌ ಸೊಲ್ಯೂಷನ್ಸ್‌ ತಯಾರಿಸಿಕೊಡುತ್ತಿದೆ.

ಮರವೇರುವ ಬೈಕ್: ರೈತನ ಆವಿಷ್ಕಾರಕ್ಕೆ ಇಂಟರ್‌ನೆಟ್ ಬ್ರೇಕ್!

ತೆಂಗಿನ ಮರ ಏರಲು ಯಂತ್ರ:

ಅಡಕೆ ಮರ ಏರುವ ಟ್ರೀಬೈಕ್‌ ಶೋಧಿಸಿದಾಗ ಅನೇಕ ಮಂದಿ ತೆಂಗಿನ ಮರ ಏರುವ ಯಂತ್ರವನ್ನೂ ತಯಾರಿಸುವಂತೆ ಗಣಪತಿ ಭಟ್ಟರನ್ನು ದುಂಬಾಲು ಬಿದ್ದಿದ್ದರು. ಅಡಕೆ ಮರ ಏರುವ ಟ್ರೀ ಬೈಕ್‌ನಲ್ಲಿ ತೆಂಗಿನ ಮರ ಏರಲು ಸಾಧ್ಯವಾಗದು. ಅಡಕೆ ಮರ ನೇರವಾಗಿದ್ದರೆ, ತೆಂಗಿನ ಮರ ಬಾಗಿದ ರೀತಿಯಲ್ಲಿ ಇರುತ್ತದೆ. ಹಾಗಾಗಿ ಅಡಕೆ ಮರ ಯಂತ್ರ ಇಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಗಣಪತಿ ಭಟ್ಟರು ಅಡಕೆ ಮರ ಏರುವ ಟ್ರೀ ಬೈಕ್‌ನ್ನು ಮಾದರಿಯಾಗಿಟ್ಟುಕೊಂಡು ತೆಂಗಿನ ಮರ ಏರುವ ಟ್ರೀ ಬೈಕ್‌ನ್ನು ಅಭಿವೃದ್ಧಿಪಡಿಸಿಯೇ ಬಿಟ್ಟರು. ಅವರದೇ ಆದ ತಂತ್ರಜ್ಞಾನದಲ್ಲಿ ಅತ್ಯಂತ ಸುರಕ್ಷಿತವಾಗಿ ಈ ಟ್ರೀ ಬೈಕ್‌ ಉಪಯೋಗಿಸಿಕೊಂಡು ತೆಂಗಿನಕಾಯಿ ಕೀಳಲು ಸಾಧ್ಯ ಎಂದು ಸಾಧಿಸಿ ತೋರಿಸಿದ್ದಾರೆ.

70 ಮರಕ್ಕೆ 1 ಲೀಟರ್‌ ಇಂಧನ ಸಾಕು:

ಒಂದು ಲೀಟರ್‌ ಪೆಟ್ರೋಲ್‌ ಬಳಸಿದರೆ 70 ತೆಂಗಿನ ಮರ ಏರಲು ಸಾಧ್ಯ. ಕೆಲಸಗಾರರೇ ಮರ ಏರಬೇಕು ಎಂದೇನು ಇಲ್ಲ, ಧೈರ್ಯವಿದ್ದರೆ ನಾವೇ ಸ್ವತಃ ಮರ ಏರಿ ತೆಂಗಿನ ಕಾಯಿ ಕೀಳಬಹುದು. ಇದಕ್ಕಾಗಿ ಗಣಪತಿ ಭಟ್ಟರೇ ತಮ್ಮ ತೋಟದಲ್ಲಿ ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಡುತ್ತಿದ್ದಾರೆ. ತೆಂಗಿನ ಮರ ಏರುವ ಈ ಯಂತ್ರ ಅಭಿವೃದ್ಧಿಪಡಿಸಿ ಕೇವಲ 10 ದಿನಗಳ ಕಳೆದಿದೆ ಅಷ್ಟೆ.

ಹೊರ ರಾಜ್ಯದಿಂದ ಬೇಡಿಕೆ:

ತೆಂಗಿನಕಾಯಿ ಹೇರಳ ಪ್ರಮಾಣದಲ್ಲಿ ಬೆಳೆಯುತ್ತಿರುವ ಮಂಡ್ಯ, ಕೇರಳ, ತಮಿಳ್ನಾಡು ಪ್ರದೇಶಗಳಿಂದ ತೆಂಗಿನ ಮರ ಏರುವ ಯಂತ್ರಕ್ಕೆ ಬೇಡಿಕೆ ಬಂದಿದೆ. ಈ ಒಂದು ಯಂತ್ರಕ್ಕೆ 95 ಸಾವಿರ ರು. ವೆಚ್ಚ ತಗಲುತ್ತಿದ್ದು, 20 ಮಿಷಿನ್‌ ಮಾರಾಟವಾಗಿದೆ. ಇನ್ನೂ 20 ಮಿಷಿನ್‌ಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಗಣಪತಿ ಭಟ್ಟರು. ಕೇರಳದ ತೆಂಗು ಸಂಶೋಧನಾ ಕೇಂದ್ರಕ್ಕೆ ಈ ಯಂತ್ರವನ್ನು ಗಣಪತಿ ಭಟ್ಟರು ನೀಡಿದ್ದಾರೆ.

ಟೂ-ಇನ್‌ ವನ್‌ ಯಂತ್ರ ಅಭಿವೃದ್ಧಿ ಗುರಿ...

ಈಗಲೇ ಅಡಕೆ ಮತ್ತು ತೆಂಗು ಮರ ಏರುವ ಯಂತ್ರ ಮಾರುಕಟ್ಟೆಗೆ ಪರಿಚಯಿಸಿದ ಗಣಪತಿ ಭಟ್ಟರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎರಡಕ್ಕೂ ಒಂದೇ ಯಂತ್ರ ಆವಿಷ್ಕಾರದತ್ತ ಚಿಂತನೆ ನಡೆಸುತ್ತಿದ್ದಾರೆ.

ಅಡಕೆ ಹಾಗೂ ತೆಂಗಿನ ಮರ ಏರಲು ಒಂದೇ ಯಂತ್ರ ಬಳಕೆಯಾಗಬೇಕು. ಇದರಿಂದ ಒಂದೇ ಯಂತ್ರದಲ್ಲಿ ಅಡಕೆ ಹಾಗೂ ತೆಂಗಿನ ಮರ ಏರಲು ಸುಲಭವಾಗಬೇಕು. ಇದೇ ತಂತ್ರಜ್ಞಾನದಲ್ಲಿ ತುಸು ಸುಧಾರಣೆ ತಂದು ಟೂ-ಇನ್‌ ವನ್‌ ಯಂತ್ರ ಆವಿಷ್ಕರಿಸಲು ಮುಂದಾಗಿದ್ದಾರೆ. ಇದು ಕಾರ್ಯಗತಗೊಂಡರೆ ಅಡಕೆ ಹಾಗೂ ತೆಂಗು ಬೆಳೆಗಾರರಿಗೆ ಯಂತ್ರ ಬಳಕೆ ಮತ್ತಷ್ಟುಸುಲಭ ಹಾಗೂ ಪರಿಣಾಮಕಾರಿಯಾಗಲಿದೆ. ಅಷ್ಟಕ್ಕೂ ಗಣಪತಿ ಭಟ್ಟರು ಎಂಜಿನಿಯರಿಂಗ್‌ ಓದಿಲ್ಲ, ಕೇವಲ ಬಿಎಸ್‌ಸಿ ಕಲಿತದ್ದು.

ಅಡಕೆ ಮರ ಏರುವ ಗಣಪತಿ ಭಟ್ಟರ ಟ್ರೀ ಬೈಸಿಕಲ್‌ 25 ಸೆಕೆಂಡ್‌ನಲ್ಲಿ 80 ಅಡಿ ಎತ್ತರಕ್ಕೆ ಏರಲು ಸಾಧ್ಯವಾಗಿರುವುದು ವಿಶ್ವ ದಾಖಲೆ ಬರೆದಿದೆ. ಕ್ಯಾಂಪ್ಕೋ ಹಾಗೂ ಕೃಷಿ ಮೇಳಗಳಲ್ಲಿ ಗಣಪತಿ ಭಟ್ಟರು ಅಡಕೆ ಮರ ಏರುವ ಯಂತ್ರದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಮುಂದೆ ತೆಂಗಿನ ಮರ ಏರುವ ಯಂತ್ರವೂ ಈ ಸಾಲಿಗೆ ಸೇರ್ಪಡೆಯಾಗಲಿದೆ. ಸೂಪರ್‌ ಸ್ಟಾರ್‌ ರೈತ ಸೇರಿದಂತೆ ಅನೇಕ ಪ್ರಶಸ್ತಿಗಳು ಗಣಪತಿ ಭಟ್ಟರ ಸಂಶೋಧನೆಗೆ ದೊರೆತಿದೆ.

ಬಂದಿದೆ, ಕಡ್ಡಿರಹಿತ ಅಗರಬತ್ತಿ ತಯಾರಿ ಯಂತ್ರ: ಗಂಟೆಗೆ 100 ಕೆಜಿ ಅಗರಬತ್ತಿ ತಯಾರಿ

ಅಡಕೆ ಮರ ಏರುವ ಟ್ರೀ ಬೈಕ್‌ ಮಾದರಿಯಲ್ಲೇ ತುಸು ಬದಲಾವಣೆ ಮಾಡಿ ತೆಂಗಿನ ಮರ ಏರುವ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದೆ ಇವೆರಡನ್ನು ಸೇರಿಸಿ ಟು-ಇನ್‌ ವನ್‌ ಯಂತ್ರ ಆವಿಷ್ಕರಿಸಲು ತೀರ್ಮಾನಿಸಿದ್ದೇನೆ. ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಿದರೆ, ಸಬ್ಸಿಡಿ ದರದಲ್ಲಿ ಕೃಷಿಕರಿಗೆ ಯಂತ್ರ ಪೂರೈಕೆ ಸಾಧ್ಯವಿದೆ.

-ಗಣಪತಿ ಭಟ್‌ ಕೋಮಲೆ, ಟ್ರೀ ಬೈಕ್‌ ಆವಿಷ್ಕರಿಸಿದ ಕೃಷಿಕ

Follow Us:
Download App:
  • android
  • ios