ಪೀಣ್ಯ ಮೇಲ್ಸೇತುವೆ 3 ತಿಂಗಳಲ್ಲಿ ದುರಸ್ತಿಗೊಳಿಸಿ ದೊಡ್ಡ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ.  

ಬೆಂಗಳೂರು (ಸೆ.10): ತುಮಕೂರು ರಸ್ತೆಯ ಗೊರಗುಂಟೆಪಾಳ್ಯ-ಪೀಣ್ಯ ಮೇಲುರಸ್ತೆಯಲ್ಲಿ ಹಲವು ಲೋಪದೋಷಗಳಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ದುರಸ್ಥಿಗೊಳಿಸಿ ಮುಂದಿನ ಮೂರು ತಿಂಗಳಲ್ಲೇ ಪೂರ್ಣ ಪ್ರಮಾಣದಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೀಣ್ಯ ಮೇಲ್ಸೇತುವೆಯನ್ನು ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ನವಯುಗ ಸಂಸ್ಥೆಯು ನಿರ್ಮಿಸಿದ್ದು, ಹಲವು ಲೋಪದೋಷಗಳಿವೆ. ಹೊಸದೊಂದು ಸಂಸ್ತೆಗೆ ದುರಸ್ಥಿ ಕಾರ್ಯದ ಗುತ್ತಿಗೆ ನೀಡಲು ಸೂಚಿಸಲಾಗಿದೆ. ಆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು. ಬೆಂಗಳೂರಿನ ಗೊರಗುಂಟೆಪಾಳ್ಯದಿಂದ ಪೀಣ್ಯ 8ನೇ ಮೈಲ್‌ ಜಂಕ್ಷನ್‌ವರೆಗಿನ 3 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ-48ರಲ್ಲಿನ ಮೇಲುರಸ್ತೆಯು ದುರಸ್ಥಿಗೊಂಡಿದ್ದು, ಪರಿಣಾಮ 2021ರ ಡಿ.25ರಿಂದ ಲಾರಿ, ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚು ವಾಹನ ದಟ್ಟಣೆ ಇರುವ ಮೇಲುರಸ್ತೆಯ ಪಿಲ್ಲರ್‌ 102 ಹಾಗೂ 103 ನಡುವಿನ ಕೇಬಲ್‌ಗಳಲ್ಲಿ ದೋಷ ಕಂಡು ಬಂದಿದ್ದು, ಈವರೆಗೂ ಸಮಸ್ಯೆಯನ್ನು ಸರಿಪಡಿಸಿಲ್ಲ.

ಶುಕ್ರವಾರ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೇಲ್ಸೇತುವೆ ದುಸ್ಥಿತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಕೇಂದ್ರದಿಂದಲೇ ರಿಪೇರಿ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಸಮಸ್ಯೆ ಪರಿಹರಿಸುವ ಭರವಸೆ ಸಿಕ್ಕಿದೆ: ಸಿಎಂ

ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವರ ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸಿದ ಬಸವರಾಜ ಬೊಮ್ಮಾಯಿ, ‘ಗೊರಗುಂಟೆಪಾಳ್ಯ ಮೇಲ್ಸೇತುವೆ ಸಮಸ್ಯೆ ಸರಿಪಡಿಸುವ ಭರವಸೆ ದೊರೆತಿದ್ದು, ಹೈವೇ ಕೇಬಲ್‌ ಕೆಲಸ ಯಾವ ಏಜೆನ್ಸಿ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದು ಹೇಳಿದರು.

ಸದ್ಯ ಲಘು ವಾಹನಗಳಿಗೆ ಮಾತ್ರ ಫ್ಲೈಓವರ್‌ ಮೇಲೆ ಅವಕಾಶ ಕಲ್ಪಿಸಿದ್ದು, ಬಸ್ಸು, ಲಾರಿಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ತುಮಕೂರು ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಫ್ಲೈ ಓವರ್‌ ದುರಸ್ತಿ ಕಾರ್ಯ ಮುಗಿದರೆ ಗೊರಗೊಂಟೆ ಪಾಳ್ಯದಿಂದ ನಾಗಸಂದ್ರದವರೆಗಿನ ಭಾರೀ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಲಿದೆ ಎಂದು ಹೇಳಿದರು.

ಇನ್ನು ಬೆಂಗಳೂರು ಸಂಬಂಧ ಎಸ್‌ಟಿಆರ್‌ಆರ್‌ ರಸ್ತೆಯಲ್ಲಿ ಕೆಲವು ವಿನಾಯ್ತಿ ಕೊಡಬೇಕಿದೆ. ಆ ವಿನಾಯ್ತಿಗಳನ್ನು ಕೊಡುವ ಬಗ್ಗೆ ನಾವು ಒಪ್ಪಿಕೊಂಡಿದ್ದೇವೆ. ಇದರಲ್ಲಿ ಒಂದು ಸಣ್ಣ ಪ್ಯಾಚ್‌ ಬಾಕಿ ಇತ್ತು. ಅದನ್ನೂ ಸಂಪರ್ಕಿಸಲು ಹೇಳಿದ್ದೇವೆ. ಕೇಂದ್ರ ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಪ್ರಸ್ತಾವನೆ ಕಳುಹಿಸಲು ಹೇಳಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಟ್ರಾಫಿಕ್‌ ಸಮಸ್ಯೆ ನೀಗಲು ಹೈಬ್ರೀಡ್‌ ಮಾರ್ಗ
ಬೆಂಗಳೂರು ನಗರದ ಸಂಚಾರ ದಟ್ಟಣೆಯ ನಿರ್ವಹಣೆಗೆ ಹೈಬ್ರೀಡ್‌ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹೆಬ್ಬಾಳ ಜಂಕ್ಷನ್‌ ಸಮೀಪ ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸೂಚನೆ

ಮೆಟ್ರೋ, ಫ್ಲೈ ಓವರ್‌ ಹಾಗೂ ರಸ್ತೆಗೆ ಬಳಕೆಯಾಗುವ ಬಹುಪಯೋಗಿ ಪಿಲ್ಲರ್‌ ನಿರ್ಮಿಸುವ ತಂತ್ರಜ್ಞಾನವನ್ನು ನಗರದಲ್ಲಿ ಅಳವಡಿಕೊಂಡರೆ ಜಾಗದ ಸಮಸ್ಯೆ ಇರುವುದಿಲ್ಲ. ಈ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡರೆ ಭೂ ಸ್ವಾಧೀನ ಪ್ರಮಾಣ ಕಡಿಮೆ ಆಗುತ್ತದೆ. ಈ ಬಗ್ಗೆ ಅಂತರರಾಷ್ಟ್ರೀಯ ತಜ್ಞರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು: ಪೀಣ್ಯ ಫ್ಲೈಓವರ್‌ನಲ್ಲಿ ಸರಣಿ ಅಪಘಾತ

ಈ ಹೊಸ ತಂತ್ರಜ್ಞಾನ ಬಳಸಿ ಬೈಯಪ್ಪನಹಳ್ಳಿಯಲ್ಲಿ ರೈಲು ನಿರ್ಮಾಣ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ. ಒಂದೇ ಪಿಲ್ಲರ್‌ನ್ನು ಬಳಸಿ ಮೂರು ಅಂತಸ್ತುಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಈ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡರೆ ಭೂ ಸ್ವಾಧೀನದ ಪ್ರಮಾಣ ಕಡಿಮೆಯಾಗುವುದು ಎಂದರು.