Asianet Suvarna News Asianet Suvarna News

JDS Politics in Mandya : ನಿಖಿಲ್‌ ರಾಜಕೀಯ ನೆಲೆಗೆ ಮತ್ತೊಂದು ಹಿನ್ನಡೆ : ಎಚ್‌ಡಿಕೆಗೆ ಆಘಾತ

 

  • ಮಂಡ್ಯದಲ್ಲಿ ನಿಖಿಲ್‌ ರಾಜಕೀಯ ನೆಲೆಗೆ ಹಿನ್ನಡೆ : ಎಚ್‌ಡಿಕೆಗೆ ಆಘಾತ
  • ಸರಣಿ ಸೋಲುಗಳಿಂದ ಎಚ್‌ಡಿಕೆಗೆ ಆಘಾತ
  •  ಸಂಘಟನಾತ್ಮಕ ಹೋರಾಟವಿದ್ದರೂ ಬೆನ್ನುಬಿಡದ ಸೋಲು
After Nikhil Kumaraswamy defeat JDS Faces Another Setback in Mandya   snr
Author
Bengaluru, First Published Dec 18, 2021, 1:12 PM IST

ವರದಿ : ಮಂಡ್ಯ ಮಂಜುನಾಥ

  ಮಂಡ್ಯ (ಡಿ.18):  ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC election) ಪರಾಭವಗೊಂಡಿರುವ ಜೆಡಿಎಸ್‌ (JDS) ತನ್ನ ಭದ್ರಕೋಟೆಯಲ್ಲಿ ಸುಭದ್ರವಾಗಿಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದು, ಈ ಸೋಲು ಜೆಡಿಎಸ್‌ (JDS) ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರು ಮಂಡ್ಯ (Mandya) ನೆಲದಲ್ಲಿ ನೆಲೆ ಕಂಡುಕೊಳ್ಳುವ ಪ್ರಕ್ರಿಯೆಗೆ ಹಿನ್ನಡೆ ಉಂಟುಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (MLC election) ಭರ್ಜರಿ ಜಯ ಸಾಧಿಸಿ ದಾಖಲೆ ಸೃಷ್ಟಿಸಿದ್ದ ಜೆಡಿಎಸ್‌ (JDS) ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಿತ್ತು. ಆ ಮೂಲಕ ಮಂಡ್ಯ (Mandya) ಜೆಡಿಎಸ್‌ ಭದ್ರಕೋಟೆ ಎನ್ನುವುದನ್ನು ಸಾರಿ ಹೇಳಿತ್ತು. ಆದರೆ, ಸರಣಿ ಸೋಲುಗಳು ಜೆಡಿಎಸ್‌ನೊಳಗೆ ಕಳವಳವನ್ನು ಸೃಷ್ಟಿಸಿವೆ.

ಸೋಲಿನ ಹಿಂದೆ ಅನುಮಾನಗಳು:  ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯಸಾಧಿಸಿದ್ದ ಜೆಡಿಎಸ್‌ (JDS) 6 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದ್ದು, ಇಬ್ಬರು ವಿಧಾನ ಪರಿಷತ್‌ ಸದಸ್ಯರನ್ನು ಹೊಂದಿದ್ದರೂ ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿ ಗೌಡರ (Appaji Gowda) ಸೋಲು ಪಕ್ಷದೊಳಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರತಿ ಚುನಾವಣೆಯಲ್ಲೂ ಜೆಡಿಎಸ್‌ (JDS) ಗೆಲುವಿನ ವಿಶ್ವಾಸದೊಡನೆಯೇ ಸಂಘಟನಾತ್ಮಕ ಹೋರಾಟ ಆರಂಭಿಸುತ್ತದೆಯಾದರೂ ಅಂತಿಮವಾಗಿ ಪರಾಭವಗೊಳ್ಳುವುದು ಪಕ್ಷದ ಹಿನ್ನಡೆಗೆ ಕಾರಣವೆಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ (MLC Election) ಬಳಿಕ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ (JDS-  Congress) ಸರ್ಕಾರ ಅಧಿಕಾರದಲ್ಲಿದ್ದರೂ ಸ್ಥಳೀಯವಾಗಿ ಅಷ್ಟದಿಕ್ಕುಗಳಲ್ಲಿ ಜೆಡಿಎಸ್‌ ಶಾಸಕರೇ ವಿಜೃಂಭಿಸುತ್ತಿದ್ದರೂ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರ ಸೋಲು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿತ್ತಲ್ಲದೆ, ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ (HD Kumataswamy) ಅವರನ್ನು ಆಘಾತಗೊಳಿಸಿತ್ತು. ನಂತರ 2020ರಲ್ಲಿ ನಡೆದ ಕೆ.ಆರ್‌.ಪೇಟೆ(KR Pete) ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಗೆಲುವಿನ ಸಾಧ್ಯತೆ ಇತ್ತು. ಆದರೆ, ಜಿಲ್ಲೆಯಲ್ಲಿ ರಾಜಕೀಯ (Politics) ಹಿನ್ನೆಲೆಯೇ ಇಲ್ಲದ ಬಿಜೆಪಿ ಗೆಲುವು ಸಾಧಿಸುವುದರೊಂದಿಗೆ ಜೆಡಿಎಸ್‌ನ್ನು ಇನ್ನಷ್ಟು ದುರ್ಬಲಗೊಳಿಸಿತ್ತು.

ವರವಾಗದ ವಿಧಾನಪರಿಷತ್‌ ಚುನಾವಣೆ:  ಈ ಎರಡೂ ಸೋಲುಗಳ ಪ್ರತೀಕಾರವಾಗಿ ಆರಂಭಿಸಿದ ವಿಧಾನ ಪರಿಷತ್‌ ಚುನಾವಣೆ ಕೂಡ ಜೆಡಿಎಸ್‌ಗೆ ವರವಾಗಲಿಲ್ಲ. 2400ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವುದಾಗಿ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದ ಜೆಡಿಎಸ್‌ ಲೋಕಸಭಾ ಚುನಾವಣೆ (Loksabha election) ಸೋಲನ್ನು ತೀರಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿತ್ತು. ಆದರೆ, 97 ಮತಗಳ ಅಂತರದಿಂದ ಸೋತು ಕಾಂಗ್ರೆಸ್‌ಗೆ ಶರಣಾಗಿದ್ದು ಜೆಡಿಎಸ್‌ನ ಮತ್ತೊಂದು ಹಿನ್ನಡೆಯಾಗಿದೆ.

ಎಚ್‌ಡಿಕೆ ಪ್ರಯೋಗಕ್ಕೆ ಹಿನ್ನಡೆ:  ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂದು ಹೇಳುತ್ತಲೇ ತ್ರಿವಳಿ ಸೋಲುಗಳನ್ನು ಅನುಭವಿಸಿರುವ ಜೆಡಿಎಸ್‌ ಮುಂದೇನು ಮಾಡುತ್ತದೆ ಎನ್ನುವುದು ಒಂದು ಕುತೂಹಲವಾದರೆ, ಜೆಡಿಎಸ್‌ನ ಗೆಲುವಿಗೆ ಅತ್ಯಂತ ಸುರಕ್ಷಿತ ಭಾವಿಸಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಯೋಗಕ್ಕೆ ಹಿನ್ನಡೆ ಉಂಟುಮಾಡಿದೆ.

ಕ್ಷೇತ್ರ ಸುರಕ್ಷಿತವಾಗಿಲ್ಲ:  ಈಗಾಗಲೇ ಹಾಸನ ಜಿಲ್ಲೆಯಲ್ಲಿ ಎಚ್‌.ಡಿ.ರೇವಣ್ಣ ಅವರು ತಮ್ಮ ಇಡೀ ಕುಟುಂಬಕ್ಕೆ ರಾಜಕೀಯ ಅಧಿಕಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಯಾವುದೇ ರಾಜಕೀಯ ಅಧಿಕಾರ ಕಲ್ಪಿಸಲಾಗದೆ ಹತಾಶರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜೆಡಿಎಸ್‌ ಪರಾಭವಗೊಂಡಿದ್ದು, ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar), ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪ್ರಾಬಲ್ಯ ಜೆಡಿಎಸ್‌ಗೆ ಅಷ್ಟಾಗಿ ಸುರಕ್ಷತೆಯನ್ನು ತಂದುಕೊಡಲು ಸಾಧ್ಯವಾಗಿಲ್ಲ.

ಪ್ರಯತ್ನ ಮುಂದುವರಿಕೆ:  ಜೆಡಿಎಸ್‌ನ (JDS) ಭದ್ರಕೋಟೆ ಎಂಬ ಹಿರಿಮೆಗೆ ಪಾತ್ರವಾಗಿರುವ ಮಂಡ್ಯ ಮೂಲಕವೇ ಪುತ್ರ ನಿಖಿಲ್‌ಗೆ ರಾಜಕೀಯ ನೆಲೆ ಕಲ್ಪಿಸುವ ಪ್ರಯತ್ನ ಆರಂಭಿಸಿದ್ದರು. ಈ ಕಾರಣದಿಂದಲೇ ವಿಧಾನ ಪರಿಷತ್‌ ಚುನಾವಣೆಯ ಜಿಲ್ಲಾ ಸಾರಥ್ಯವನ್ನು ನಿಖಿಲ್‌ಗೆ ವಹಿಸಿದ್ದರು. ಜೆಡಿಎಸ್‌ನ ಅನಿರೀಕ್ಷಿತ ಸೋಲು ಜೆಡಿಎಸ್‌ನ ಸ್ಥಳೀಯ ಶಾಸಕರು ಮತ್ತು ಪರಾಜಿತ ಅಭ್ಯರ್ಥಿ ಎನ್‌.ಅಪ್ಪಾಜಿಗೌಡರನ್ನಷ್ಟೇ ಅಲ್ಲದೇ, ಕುಮಾರಸ್ವಾಮಿ ಅವರನ್ನೂ ಕಂಗೆಡಿಸಿದೆ. ನಿಖಿಲ್‌ ಕುಮಾರಸ್ವಾಮಿಗೆ ಸುರಕ್ಷಿತ ಕ್ಷೇತ್ರ ಕಲ್ಪಿಸುವತ್ತ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.

Follow Us:
Download App:
  • android
  • ios