ವರದಿ : ಕಾಗತಿ ನಾಗರಾಜಪ್ಪ.

ಚಿಕ್ಕಬಳ್ಳಾಪುರ (ಸೆ.22): ಕೊರೊನಾ ಮಹಾಮಾರಿಯಿಂದ ಸತತ ಐದುಗಳ ಕಾಲ ಜಾರಿಯಲ್ಲಿದ್ದ ಲಾಕ್‌ಡೌನ್‌ ಬಿಸಿಗೆ ಜಿಲ್ಲೆಯಲ್ಲಿ ಹೆಚ್ಚು ಬೆಂದವರು ಕುಂಬಾರರು. ತಮ್ಮ ಕೈ ಕುಶಲತೆಯಿಂದ ಬೆವರು ಸುರಿಸಿ ಕಲಾತ್ಮಕವಾಗಿ ವಿವಿಧ ಬಟ್ಟಿ, ಪಾಟು, ತರಹೇವಾರಿ ಹೂ ಕುಂಡಗಳನ್ನು ಸಿದ್ದಪಡಿಸಿ ಹೊರ ರಾಜ್ಯಗಳಿಗೂ ಕಳುಹಿಸುತ್ತಿದ್ದ ಜಿಲ್ಲೆಯ ಸುಲ್ತಾನಪೇಟೆ ಕುಂಬಾರರು ಅನ್‌ಲಾಕ್‌ ಬಳಿಕ ಉಸಿರಾಡುವಂತಾಗಿದೆ.

ಹೌದು, ನಗರದ ಹೊರ ವಲಯದ ನಂದಿ ಸಮೀಪದ ಸುಲ್ತಾನಪೇಟೆ ಕುಂಬಾರರು ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ತನ್ನ ನವೀನ್ಯ ಪೂರ್ಣ ಕುಂಬಾರಿಕೆಯಿಂದ ಹೆಚ್ಚು ಹೆಸರುವಾಸಿಯಾದವರು. ಆದರೆ ಕೊರೋನಾ ಸಂಕಷ್ಟದ ಪರಿಣಾಮ ಜಾರಿಗೊಂಡು ಲಾಕ್‌ಡೌನ್‌ ಇಲ್ಲಿನ 50 ಕ್ಕೂ ಹೆಚ್ಚು ಕುಂಬಾರಿಕೆಯ ಕುಂಟುಬಗಳ ಕೈ ಕಟ್ಟಿಹಾಕುವಂತೆ ಮಾಡಿತ್ತು. ಅನ್‌ಲಾಕ್‌ ಬಳಿಕ ಈ ಕುಟುಂಬಗಳು ತಮ್ಮ ನಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿವೆ.

ಬೆಲೆ ಏರಿದ್ರೂ ರೈತರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ...

ಇಂದಿನ ಜಾಗತಿಕಾರಣಕ್ಕೂ ಸವಾಲ್ಡೊಡುವ ರೀತಿಯಲ್ಲಿ ಸುಲ್ತಾನಪೇಟೆ ಕುಂಬಾರಿಕೆ ರಾಷ್ಟ್ರದ ಗಮನ ಸೆಳೆದಿದೆ. ಇಲ್ಲಿನ ಕುಂಬಾರ ಕುಟುಂಬಗಳು ತಮ್ಮದೇ ಆದ ಕುಂಬಾರ ಕುಶಲ ಕೈಗಾರಿಕಾ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ಸುಮಾರು 7 ದಶಕಗಳಿಂದ ಕುಂಬಾರಿಕೆಯಲ್ಲಿ ತೊಡಗಿದ್ದಾರೆ. ವಾರ್ಷಿಕ ಲಕ್ಷಾಂತರ ರು, ವಹಿವಾಟು ನಡೆಸುತ್ತಾರೆ.

ನಂದಿ ಕೆರೆ ಮಣ್ಣು ಸ್ಟ್ರಾಂಗ್‌:

ಸುಲ್ತಾನಪೇಟೆ ಕುಂಬಾರಿಗೆ ಬಲ ತಂದುಕೊಟ್ಟಿರುವುದು ಚಿಕ್ಕಬಳ್ಳಾಪುರದ ನಂದಿ ಕೆರೆಯ ಮಣ್ಣು. ಹಿಂದಿನಿಂದಲೂ ಇಲ್ಲಿನ ಕುಂಬಾರರು ನಂದಿ ಕೆರೆ ಮಣ್ಣು ಬಳಸುತ್ತಿದ್ದು ವರ್ಷಾನುಗಟ್ಟಲೇ ಮಡಿಕೆ, ಹೂ ಕುಂಡಗಳು, ಪಾಟುಗಳು ಒಂದಿಷ್ಟುಬಿರುಕು ಬಿಡದೆ ಗಟ್ಟಿಮುಟ್ಟಾಗಿರುತ್ತವೆ. ಹೀಗಾಗಿ ಸುಲ್ತಾನಪೇಟೆ ಕುಂಬಾರರು ಸಿದ್ದಪಡಿಸುವ ಪ್ರತಿಯೊಂದು ವಸ್ತುವು 2, 30 ವರ್ಷಗಳ ಗ್ಯಾರೆಂಟಿ. ಆ ಕಾರಣಕ್ಕಾಗಿ ನಾನಾ ರಾಜ್ಯಗಳಿಂದ ಇಲ್ಲಿನ ಕುಂಬಾರಿಕೆ ವಸ್ತುಗಳಿಗೆ ಹೆಚ್ಚು ಬೇಡಿಕೆ ಇದೆ.

ತಂದೂರಿ ಬಟ್ಟಿಗೆ ಹೋರ ರಾಜ್ಯಗಳಲ್ಲಿ ಬೇಡಿಕೆ

ಸುಲ್ತಾನಪೇಟೆಯಲ್ಲಿ ಕುಂಬಾರರು ತಯಾರಿಸುವ ತಂದೂರಿ ಬಟ್ಟಿ, ಟೀ ಮತ್ತು ಐಸ್‌ಕ್ರೀಂ ಕಪ್‌ಗಳು ವಿಶೇಷವಾಗಿ ಗೋವಾ, ಚೆನ್ನೈ, ಕೊಯುಮತ್ತೂರು ಹಾಗೂ ರಾಜ್ಯದ ಹುಬ್ಬಳಿ, ಬೆಳಗಾವಿ, ಬೆಂಗಳೂರಿನ ಶಿವಾಜಿನಗರ ಸೇರಿದಂತೆ ಇತರ ರಾಜ್ಯಗಳಿಗೆ ರವಾನೆ ಆಗುತ್ತವೆ. ಹೆದ್ದಾರಿ ಡಾಬಾಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ತಂದೂರಿ ರೊಟ್ಟಿಗಳನ್ನು ಹದವಾಗಿ ಮಾಡಲು ಇಲ್ಲಿನ ಬಟ್ಟಿಗಳು ತೀರಾ ಅವಶ್ಯಕ. ಇವುಗಳಿಗೆ ಹೆಚ್ಚು ಬೇಡಿಕೆ ಸಹ ಇದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಶೆಡ್‌ಗಳನ್ನು ಬಳಸಿ ಬಟ್ಟಿ, ಕುಂಡ, ತಯಾರಿಸುವ ಸ್ಥಳಗಳು ಕೇವಲ 3 ಇದ್ದು ಸುಲ್ತಾನಪೇಟೆ ಕುಂಬಾರಿಕೆ ರಾಜ್ಯದಲ್ಲಿ ಮೊದಲನೆಯದು ಎನ್ನುವುದು ವಿಶೇಷ.

ರಾಜ್ಯದಲ್ಲಿ 13 ವರ್ಷದ ಬಳಿಕ ದಾಖಲೆಯ ಬಿತ್ತನೆ ...

ಸುಮಾರು ಲಾಕ್‌ಡೌನ್‌ ಜಾರಿಯಾದ 6 ತಿಂಗಳಿಂದ ಕುಂಬಾರಿಕೆ ಕೆಲಸ ಸಂಪೂರ್ಣ ಸ್ಥಗಿತವಾಗಿದೆ. ಲಾಕ್‌ಡೌನ್‌ ಪರಿಣಾಮ ಸುಮಾರು 10 ರಿಂದ 15 ಲಕ್ಷ ರು,ಮೌಲ್ಯದ ವಸ್ತುಗಳು ಮಾರಾಟವಾಗದೇ ಶೆಡ್‌ನಲ್ಲಿಯೆ ಉಳಿದಿವೆ. ಸುಮಾರು 50 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದು ಲಾಕ್‌ಡೌನ್‌ನಿಂದ ಸಾಕಷ್ಟುಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನ್‌ಲಾಕ್‌ ಬಳಿಕ ಕೆಲಸ ಆರಂಭವಾಗಿದೆ.

ರಾಜು, ಕುಂಬಾರಿಕೆಯಲ್ಲಿ ತೊಡಗಿರುವ ಕಾರ್ಮಿಕ. ಸುಲ್ತಾನಪೇಟೆ.