ವರದಿ : ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಸೆ.20): ದೇಶದಲ್ಲಿ ಹಲವು ದಿನಗಳಿಂದ ಅಡುಗೆಗೆ ಬಳಸುವ ಈರುಳ್ಳಿ ಬೆಲೆ ನಿಯಂತ್ರಣ ಇಲ್ಲದೇ ಗಗನಕ್ಕೇರುತ್ತಿದ್ದಂತೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಈರುಳ್ಳಿ ರಪ್ತು ಮೇಲೆ ನಿಷೇಧ ಹೇರಿದೆ. ಇದರ ಪರಿಣಾಮವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಂಪು ಈರುಳ್ಳಿ ಬೆಳೆಯುವ ರೈತರು ಕಣ್ಣೀರು ಸುರಿಸುವಂತಾಗಿದೆ.

ಕೇವಲ ರಪ್ತು ನಂಬಿಕೊಂಡೇ ಲಕ್ಷಾಂತರ ರು. ಬಂಡವಾಳ ಹಾಕಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬೆಳೆದಿರುವ ಬೆಂಗಳೂರು ಕೆಂಪು ಗುಲಾಬಿ ಈರುಳ್ಳಿ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೈ ಬೇಳೆಗಾರರು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

60ರಿಂದ 70 ಸಾವಿರ ಮೆಟ್ರಿಕ್‌ ಟನ್‌

ಇಡೀ ಭಾರತದಲ್ಲಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾತ್ರ ಬೆಂಗಳೂರು ಗುಲಾಬಿ ಈರುಳ್ಳಿಯನ್ನು ಸುಮಾರು 10 ರಿಂದ 15 ಸಾವಿರ ಹೆಕ್ಟೇರ್‌ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಕನಿಷ್ಠ 60 ರಿಂದ 70 ಸಾವಿರ ಮೆಟ್ರಿಕ್‌ ಟನ್‌ನಷ್ಟುಉತ್ಪಾದನೆ ಆಗುತ್ತದೆ. ರೈತರು ಶ್ರೀಲಂಕಾ, ಮೇಲೇಷಿಯಾ, ಥೈಲಾಂಡ್‌, ಸಿಂಗಾಪುರ ದೇಶಗಳಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ನೇರವಾಗಿ ರಪ್ತು ಮಾಡಲಾಗುತ್ತದೆ.

ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯ ಪರಿಣಾಮವಾಗಿ ಕೇಂದ್ರ ಸರ್ಕಾರ ಅಡುಗೆಗೆ ಬಳಸುವ ಈರುಳ್ಳಿ ಬೆಲೆ ತಡೆಯಲು ಈರುಳ್ಳಿ ರಪ್ತು ಮೇಲೆ ನಿಷೇಧ ಹೇರಿದೆ. ಪರಿಣಾಮ ಕೋಲಾರ, ಚಿಕ್ಕಬಳ್ಳಾಫುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು 10 ಸಾವಿರ ಮೆಟ್ರಿಕ್‌ ಟನ್‌ಷ್ಟುಈರುಳ್ಳಿ ರಪ್ತು ಆಗದೇ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ಬಳ್ಳಾರಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಡುಗೆಗೆ ಬಳಸುವುದು ಸಾಮಾನ್ಯ. ಆದರೆ ಬಯಲು ಸೀಮೆ ಜಿಲ್ಲೆಗಳಲ್ಲಿ ಬೆಳೆಯವ ಗುಲಾಬಿ ಈರುಳ್ಳಿ ವಿದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಭಾಗದಲ್ಲಿ ಈ ಈರುಳ್ಳಿಯನ್ನು ಕೇಳುವವರೇ ಇಲ್ಲ.

'ಸಾವಿರಾರು ಎಕರೆ ರೈತರ ಫಲವತ್ತಾದ ಭೂಮಿ ಸರ್ಕಾರದ ಸ್ವಾಧೀನಕ್ಕೆ'

ನಿಷೇಧ ರದ್ದಾಗದಿದ್ದರೆ ಬೆಳೆಗಾರ ಬೀದಿಗೆ

ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಪೆಂಬರ್‌ ತಿಂಗಳಲ್ಲಿ ಕೂಡ ಈರುಳ್ಳಿ ಬೆಲೆ ಗಗನಕ್ಕೇರಿದ್ದಾಗ ಈರುಳ್ಳಿ ವಿದೇಶಗಳಿಗೆ ರಪ್ತು ಆಗುವುದನ್ನು ನಿಷೇಧಿಸಿತ್ತು. ಆಗ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಈರುಳ್ಳಿ ಬೆಳೆಗಾರರು ಕೇಂದ್ರ ಸರ್ಕಾರದ ಮೇಲೆ ರಪ್ತು ನಿಷೇಧ ರದ್ದಾಗುವಂತೆ ಆಗ್ರಹಿಸಿತ್ತು. ಈಗ ಮತ್ತೆ ರಫ್ತು ನಿಷೇಧ ಬೂತ ಎದುರಾಗಿದೆ. ರಪ್ತು ನಿಷೇಧ ರದ್ದಾಗದ್ದಿರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಾಲದ ಶೂಲಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.

 ಈರುಳ್ಳಿ ರಪ್ತು ನಿಷೇಧದಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರಪ್ತುಗಾಗಿ ಬೆಳೆಯುವ ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟಎದುರಿಸುವಂತಾಗಿದೆ. ಶೇ.80 ರಷ್ಟುಮಾರಾಟವಾಗಿದ್ದು ಇನ್ನೂ ಹತ್ತು ಸಾವಿರ ಟನ್‌ ಈರುಳ್ಳಿ ಜಿಲ್ಲೆಗಳಲ್ಲಿ ಕೊಳೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ರಪ್ತು ನಿಷೇಧವನ್ನು ಹಿಂಪಡೆಯಬೇಕು.

ಈರುಳ್ಳಿ ಶಿವಣ್ಣ, ಜಿಲ್ಲಾಧ್ಯಕ್ಷ, ಈರುಳ್ಳಿ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ

 ಕೇಂದ್ರ ಸಚಿವರಿಗೆ ಮನವಿ ಸಲ್ಲಿಕೆ

ಕೇಂದ್ರ ಸರ್ಕಾರ ಈರುಳ್ಳಿ ರಪ್ತು ಮೇಲೆ ನಿಷೇಧ ಹೇರಿದ ಬೆನ್ನಲೇ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಈರುಳ್ಳಿ ಬೆಳೆಗಾರರು ಕೇಂದ್ರ ಸರ್ಕಾರ ಮುಂದೆ ತಮ್ಮ ಸಂಕಷ್ಟಹೇಳಿಕೊಳ್ಳಲು ರೈತರ ನಿಯೋಗವೊಂದು ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿಸೂರ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಅಲ್ಲದೆ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ನಿಯೋಗದ ನೇತೃತ್ವ ವಹಿಸಿ ಕೇಂದ್ರ ವಾಣಿಜ್ಯ ಹಾಗೂ ಕೃಷಿ ಸಚಿವರನ್ನು ನಿಯೋಗ ಭೇಟಿ ಮಾಡಿ ಈರುಳ್ಳಿ ರಪ್ತು ನಿಷೇಧ ಹಿಂಪಡೆಯುವಂತೆ ಮನವಿ ಮಾಡಿದೆ.

ನಿಯೋಗದಲ್ಲಿ ಕೋಲಾರ ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್‌, ಚಿಕ್ಕಬಳ್ಳಾಪುರ ಜಿಲ್ಲಾ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಈರುಳ್ಳಿ ಶಿವಣ್ಣ ಮತ್ತಿತರರು ಪಾಲ್ಗೊಂಡಿದ್ದರು. ಸಚಿವ ಸದಾನಂದಗೌಡ ಸಹ, ಈ ಬಗ್ಗೆ ಪ್ರಧಾನಿ ಹಾಗೂ ವಾಣಿಜ್ಯ ಸಚಿವರ ಗಮನ ಸೆಳೆದು ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.