ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅವರ ಮಗಳು ನಟಿ ರನ್ಯಾ ರಾವ್ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಕಳೆದ ವರ್ಷವೇ ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ರನ್ಯಾ, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಸದ್ಯ ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆಯ ವಿಡಿಯೋಗಳು ಹಲ್​ಚಲ್​ ಸೃಷ್ಟಿಸುತ್ತಿದೆ. ಮೂವರು ಮಹಿಳೆಯರ ಜೊತೆ ಪೊಲೀಸ್​ ಸಮವಸ್ತ್ರದಲ್ಲಿಯೇ ಕಚೇರಿಯ ಅವಧಿಯಲ್ಲಿಯೇ ರಾಸಲೀಲೆ ಮಾಡ್ತಿರೋ ವಿಡಿಯೋ ಇದಾಗಿದ್ದು, ಈ ವಿಡಿಯೋಗಳು ತಮ್ಮದಲ್ಲ ಎಂದು ರಾಮಚಂದ್ರ ರಾವ್​ ಸಮಜಾಯಿಷಿ ಕೊಟ್ಟಿದ್ದಾರೆ. ಆದರೆ ಇದಾಗಲೇ ಅವರನ್ನು ಕೆಲಸದಿಂದ ವಜಾಗೊಳಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಇನ್ನೇನು ಬರುವ ಮೇ ತಿಂಗಳಿನಲ್ಲಿ ಇವರು ನಿವೃತ್ತರಾಗಬೇಕಿತ್ತು. ಈ ಸಮಯದಲ್ಲಿಯೇ ರಂಗಿನಾಟದ ಆರೋಪದ ಮೇಲೆ ಸಿಕ್ಕಾಕಿಕೊಂಡಿದ್ದಾರೆ.

ಮಗಳಿಗಾಗಿ ಹುಡುಕಾಟ

ಇದರ ಬೆನ್ನಲ್ಲೇ ಇವರ ಪುತ್ರಿ (ಮಲಮಗಳು), ಸ್ಯಾಂಡಲ್​ವುಡ್​ ಬ್ಯೂಟಿ ರನ್ಯಾ ರಾವ್​ಗಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಯುತ್ತಿದೆ. ಅಷ್ಟಕ್ಕೂ ಕಳೆದ ವರ್ಷ, ನಟಿ ರನ್ಯಾ ರಾವ್​ ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ಸಿಕ್ಕಿಬಿದ್ದಿದ್ದು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಡಿಜಿಪಿ ರಾಮಚಂದ್ರ ರಾವ್‌ ಅವರ ಪ್ರಭಾವ ಬಳಸಿ, ವಿಮಾನ ನಿಲ್ದಾಣದಲ್ಲಿಯೂ ತಮಗೆ ಸೆಕ್ಯುರಿಟಿ ಚೆಕ್​ ಮಾಡದಂತೆ ನೋಡಿಕೊಂಡಿದ್ದ ಈಕೆ, ಕೊನೆಗೆ ಗೆಳೆಯನ ಜೊತೆ ಸಿಕ್ಕಾಕಿಕೊಂಡಿದ್ದಾರೆ. ನಟಿ ರನ್ಯಾ ರಾವ್‌ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಲು ನಗರದಲ್ಲಿ ತನ್ನ ಒಡೆತನದ ಕಂಪನಿಗಳನ್ನೇ ಬಳಸಿಕೊಂಡಿರುವ ಆರೋಪವಿದೆ. ಈಕೆ ‘ವೈರಾ ಡೈಮಂಡ್ಸ್ ಟ್ರೇಡಿಂಗ್‌’ ಹೆಸರಿನಲ್ಲಿ ಅಧಿಕೃತವಾಗಿ ದುಬೈನಲ್ಲಿ ಕಂಪನಿ ತೆರೆದಿರುವುದು ಇ.ಡಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. 2023ರಲ್ಲಿ ದುಬೈನಲ್ಲಿ ‘ವೈರಾ ಡೈಮಂಡ್ಸ್ ಟ್ರೇಡಿಂಗ್‌’ ಹೆಸರಿನಲ್ಲಿ ಕಂಪನಿ ತೆರೆದು ಆ ಕಂಪನಿಯನ್ನು ನೋಂದಣಿ ಸಹ ಮಾಡಿದ್ದಾರೆ.

ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಣೆ?

ರನ್ಯಾ ರಾವ್‌ ಬಳಿ ದುಬೈ ರೆಸಿಡೆಂಟ್‌ ವೀಸಾ ಪತ್ತೆಯಾಗಿತ್ತು. ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಈ ರೆಸಿಡೆಂಟ್‌ ವೀಸಾ ಪಡೆದಿದ್ದಾರೆ. ಅಂತೆಯೇ ಆಕೆ ದುಬೈನಲ್ಲಿ ಫ್ಲ್ಯಾಟ್‌ ಸಹ ಹೊಂದಿದ್ದಾರೆ. ಅಂದರೆ, ದುಬೈನಲ್ಲಿ ರೆಸಿಡೆಂಟ್‌ ವೀಸಾ, ನೋಂದಾಯಿತ ಕಂಪನಿ, ಫ್ಲ್ಯಾಟ್‌ ಇರುವುದನ್ನು ನೋಡಿದರೆ, ರನ್ಯಾ ಕೆಲ ವರ್ಷಗಳಿಂದ ದುಬೈನಿಂದ ಭಾರತಕ್ಕೆ ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಣೆ ಮಾಡಿರುವುದು ತಿಳಿದು ಬಂದಿತ್ತು.

ಎಲ್ಲಿದ್ದಾರೆ ಈಗ ರನ್ಯಾ ರಾವ್​?

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ರನ್ಯಾ ರಾವ್​ ಮತ್ತು ಆಕೆಯ ಸ್ನೇಹಿತರಿಗೆ ಒಂದು ವರ್ಷದ ಶಿಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ಜಾಮೀನು ನೀಡದಂತೆ ಕೋರ್ಟ್​ ಆದೇಶಿಸಿರುವ ಹಿನ್ನೆಲೆಯಲ್ಲಿ, ಜೈಲಿನಲ್ಲಿಯೇ ಸದ್ಯ ಇದ್ದಾರೆ. ಇವರ ಮೇಲೆ ಇರುವ ಇತರ ಆರೋಪಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ, ತಂದೆಯೂ ರಾಸಲೀಲೆ ಕೇಸ್​ನಲ್ಲಿ ಸಿಕ್ಕಾಕಿಕೊಂಡಿದ್ದಾರೆ!