ಸಿ.ಟಿ.ರವಿ ರಾಜಿನಾಮೆ : ಯಾರಿಗೆ ಸಿಗುತ್ತೆ ಅವರ ಸ್ಥಾನ?
ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವರಾದ ಸಿ.ಟಿ ರವಿ ರಾಜೀನಾಮೆ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಅವರ ಬಳಿಕ ಈ ಸ್ಥಾನ ಯಾರಿಗೆ ಸಿಗಲಿದೆ ಎನ್ನುವುದು ಪ್ರಶ್ನೆಯಾಗಿದೆ.
ವರದಿ : ಆರ್.ತಾರಾನಾಥ್
ಚಿಕ್ಕಮಗಳೂರು (ಸೆ.28): ಚಿಕ್ಕಮಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರು ಯಾರು ಆಗ್ತಾರೆ?
- ಈ ರೀತಿಯ ಪ್ರಶ್ನೆಯೊಂದು ಜಿಲ್ಲೆಯ ರಾಜಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ಮೂಡಿದೆ. ಇದಕ್ಕೆ ಕಾರಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿರುವುದು.
ಸಿ.ಟಿ. ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿನ್ನಾಗಿ ಪಕ್ಷ ನೇಮಕ ಮಾಡಿದೆ. ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಪಕ್ಷದಲ್ಲಿನ ಆಂತರಿಕ ನಿಯಮದ ಪ್ರಕಾರ ಸಚಿವರು ತಮ್ಮ ಬಳಿ ಇರುವ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಸ್ಥಾನಗಳಿಗೆ ಪಕ್ಷ ಸೂಚಿಸಿದರೆ ರಾಜಿನಾಮೆ ನೀಡುವುದಾಗಿ ಬೆಂಗಳೂರಿನಲ್ಲಿ ಭಾನುವಾರ ಹೇಳಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರಿಂದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲೇಬೇಕು. ಬಲ್ಲ ಮೂಲಗಳ ಪ್ರಕಾರ ಅಕ್ಟೋಬರ್ ಮೊದಲ ವಾರ, ತಪ್ಪಿದರೆ ಎರಡನೇ ವಾರದಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಸಹ ಅವರಿಂದ ಕೈ ತಪ್ಪಿ ಹೋಗಲಿದೆ.
'ಒಬ್ಬರಿಗೆ ಒಂದು ಹುದ್ದೆ ನೀತಿಗೆ ಬದ್ಧ, ಸಚಿವ ಸ್ಥಾನ ತೊರೆಯಲು ಸಿದ್ಧ' ...
ಒಂದೇ ವರ್ಷ ಸಚಿವ ಸ್ಥಾನ: ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು 2019ರ ಜುಲೈ 26ರಂದು ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು 2019ರ ಸೆಪ್ಟಂಬರ್ 16ರಂದು, ಅಂದರೆ ಸಿ.ಟಿ. ರವಿ ಅವರು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಒಂದೇ ವರ್ಷ. ಈ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರ ಪಟ್ಟಿಯನ್ನು ನೋಡಿದರೆ ಇಲ್ಲಿಗೆ ಹೊರ ಜಿಲ್ಲೆಯವರು ಸಚಿವರಾಗಿದ್ದವರೇ ಹೆಚ್ಚು. 1983ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಅಧಿಕಾರ ವೀಕೇಂದ್ರಿಕರಣದ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ಪದ್ಧತಿ ಜಾರಿಗೆ ತಂದರು. ಅಂದಿನಿಂದ ಇಲ್ಲಿಯವರೆಗೆ ಚಿಕ್ಕಮಗಳೂರು ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದು ಕೇವಲ ನಾಲ್ಕು ಮಂದಿ. ಅಂದರೆ, ಎಚ್.ಜಿ. ಗೋವಿಂದೇಗೌಡ, ಡಿ.ಬಿ. ಚಂದ್ರೇಗೌಡ, ಡಿ.ಎನ್. ಜೀವರಾಜ್, ಇದೀಗ ಸಿ.ಟಿ. ರವಿ ಮಾತ್ರ.
ಸಚಿವ ಸ್ಥಾನಕ್ಕೆ ಸಿ.ಟಿ. ರವಿ ರಾಜೀನಾಮೆ ನೀಡಿದರೆ ಮುಂದೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗುತ್ತಾರೆಂಬ ಕುತೂಹಲ ಸದ್ಯ ಜನರ ಮುಂದಿದೆ. ಈ ಕೊರತೆ ನೀಗಿಸಲು ಸರ್ಕಾರದ ಮುಂದೆ ಅವಕಾಶ ಇದೆ. ಅದು, ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆಯಲ್ಲಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವುದು.
ಸದ್ಯ ಬಿಜೆಪಿಯಲ್ಲಿನ ರಾಜಕೀಯ ವಿದ್ಯಮಾನದ ಪ್ರಕಾರ ಬರುವ ಅಕ್ಟೋಬರ್ ಎರಡನೇ ವಾರದಲ್ಲಿ ರಾಜ್ಯ ಸಚಿವ ಸಂಪುಟದ ವಿಸ್ತರಣೆ ನಡೆಯಲಿದೆ. ಆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಸೇರಿದಂತೆ ಪಕ್ಷದ ವರಿಷ್ಠರ ಮುಂದೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಸಮಾತೋಲನ ಕಾಪಾಡಲು ಇದೇ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಿದ್ದೆಯಾದರೆ ಜಿಲ್ಲೆಯ ಹೊಣೆ ಬೇರೆ ಜಿಲ್ಲೆಯವರ ಹೆಗಲೆರುವುದು ತಪ್ಪಲಿದೆ.