'ಒಬ್ಬರಿಗೆ ಒಂದು ಹುದ್ದೆ ನೀತಿಗೆ ಬದ್ಧ, ಸಚಿವ ಸ್ಥಾನ ತೊರೆಯಲು ಸಿದ್ಧ'
ಸಚಿವ ಸ್ಥಾನ ತೊರೆಯಲು ಸಿದ್ಧ: ರವಿ| ಪಕ್ಷ ಕೇಳಿದರೆ ರಾಜೀನಾಮೆ ನೀಡುತ್ತೇನೆ| 'ಒಬ್ಬರಿಗೆ ಒಂದು ಹುದ್ದೆ ನೀತಿಗೆ ಬದ್ಧ
ಬೆಂಗಳೂರು(ಸೆ.28): ಪಕ್ಷದ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ನಿಯಮದಂತೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧನಿದ್ದೇನೆ. ಪಕ್ಷ ಬಯಸಿದರೆ ರಾಜೀನಾಮೆ ನೀಡುತ್ತೇನೆ. ಪಕ್ಷ ಏನು ಬಯಸುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾಗುವವರೆಗೂ ಸಿ.ಟಿ.ರವಿ ಅವರು ಸಂಪುಟದಲ್ಲಿ ಮುಂದುವರಿಯಲಿದ್ದು, ಆ ವೇಳೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಪಕ್ಷದ ಶಿಸ್ತಿನ ಸಿಪಾಯಿ ಎನ್ನುವ ಮೂಲಕ ಸಚಿವ ಸ್ಥಾನ ತೊರೆಯುವುದನ್ನು ಅವರು ಖಚಿತಪಡಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಹಿನ್ನೆಲೆಯಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಯಾವಾಗ ಸೂಚಿಸುತ್ತದೆಯೋ ಮರುಗಳಿಗೆಯಲ್ಲಿಯೇ ಸಚಿವ ಸ್ಥಾನ ಬಿಡಲು ಸಿದ್ಧನಿದ್ದೇನೆ. ನನಗೆ ಇಷ್ಟುದೊಡ್ಡ ಮಟ್ಟದ ಹುದ್ದೆ ಸಿಕ್ಕಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಪಕ್ಷ ಸಂಘಟನೆ ನನ್ನ ಮೇಲಿರುವ ಮಹತ್ವದ ಜವಾಬ್ದಾರಿ ಎಂದರು.
ಚುನಾವಣೆಗೆ ನಿಲ್ಲಬೇಕೆಂದು ವರಿಷ್ಠರು ಸೂಚಿಸಿದಾಗ ಮರು ಮಾತನಾಡದೆ ಸ್ಪರ್ಧಿಸಿದೆ. ಅದರಂತೆ ಗೆದ್ದು ಬಂದಿದ್ದೇನೆ. ಎಂದಿಗೂ ಕೂಡ ನಾನು ಸಚಿವನಾಗಬೇಕೆಂದು ಲಾಬಿ ಮಾಡಿರಲಿಲ್ಲ. ಸಚಿವನಾಗುತ್ತೇನೆಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೂ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷ ಏನು ಸೂಚಿಸುತ್ತದೆಯೋ ಅದನ್ನಷ್ಟೇ ನಿಭಾಯಿಸಿದ್ದೇನೆ ಎಂದು ಹೇಳಿದರು.
ಈಗಲೂ ಅಷ್ಟೇ. ನನ್ನನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡಿ ಎಂದು ಕೇಳಿರಲಿಲ್ಲ. ಅನಿರೀಕ್ಷಿತವಾಗಿ ನನ್ನ ಮೇಲೆ ನಂಬಿಕೆ ಇಟ್ಟು ವರಿಷ್ಠರು ಜವಾಬ್ದಾರಿ ಕೊಟ್ಟಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಮುಂದಿನ ಗುರಿಯಾಗಿದೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ. ಸಚಿವ ಸ್ಥಾನ ನನಗೆ ಶಾಶ್ವತವಲ್ಲ, ಹುದ್ದೆಯೂ ಶಾಶ್ವತವಲ್ಲ. ಈಗಲೂ ನಾನು ಸಾಮಾನ್ಯ ಕಾರ್ಯಕರ್ತ ಎಂದು ಪುನರುಚ್ಚರಿಸಿದರು.
ನಾನು ರಾಷ್ಟ್ರ ರಾಜಕಾರಣಕ್ಕೆ ಹೋದರೂ ಕರ್ನಾಟಕವೇ ನನ್ನ ರಾಜಕೀಯ ಜನ್ಮಭೂಮಿ. ದೆಹಲಿಯಲ್ಲಿ ರಾಜಕೀಯ ಮಾಡದೆ ರಾಜ್ಯದಲ್ಲೇ ಇದ್ದು ಪಕ್ಷವನ್ನು ಸಂಘಟಿಸುತ್ತೇನೆ. ಕೇಂದ್ರದ ಮಾಜಿ ಸಚಿವರಾದ ದಿವಗಂತ ಅನಂತಕುಮಾರ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಅವರ ಎತ್ತರಕ್ಕೆ ನಾನು ಬೆಳೆಯಲು ಸಾಧ್ಯವಿಲ್ಲ. ಆದರೂ ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿ ಸಂಘಟನೆಗೆ ಒತ್ತು ಕೊಡುವೆ ಎಂದು ರವಿ ಹೇಳಿದರು.