5 ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಿದ ಕಲಾವಿದರು: ಆರ್ಥಿಕ ಸಂಕಷ್ಟಕ್ಕೆ ಬಂದ್ ಆಗಿದ್ದ ಜಗಜ್ಯೋತಿ ಬಸವೇಶ್ವರ ಬಯಲಾಟ!
ಗ್ರಾಮೀಣ ಪ್ರದೇಶಗಳಲ್ಲಿ ಸಂದೇಶದ ಜೊತೆಗೆ ಮನರಂಜನೆ ನೀಡುತ್ತಿದ್ದ ಬೈಲಾಟಗಳು ಇತ್ತೀಚೆಗೆ ಮರೆಯಾಗಿವೆ. ಪ್ರೋತ್ಸಾಹದ ಕೊರತೆಯಿಂದ, ಕಲಾವಿದರ ಆರ್ಥಿಕ ಸಂಕಷ್ಟದಿಂದಾಗಿ ಬೈಲಾಟಗಳು ಅಳಿವಿನಂಚಿಗೆ ತಲುಪಿವೆ.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್.
ಚಿಕ್ಕೋಡಿ (ಜೂ.02): ಗ್ರಾಮೀಣ ಪ್ರದೇಶಗಳಲ್ಲಿ ಸಂದೇಶದ ಜೊತೆಗೆ ಮನರಂಜನೆ ನೀಡುತ್ತಿದ್ದ ಬಯಲಾಟಗಳು ಇತ್ತೀಚೆಗೆ ಮರೆಯಾಗಿವೆ. ಪ್ರೋತ್ಸಾಹದ ಕೊರತೆಯಿಂದ, ಕಲಾವಿದರ ಆರ್ಥಿಕ ಸಂಕಷ್ಟದಿಂದಾಗಿ ಬಯಲಾಟಗಳು ಅಳಿವಿನಂಚಿಗೆ ತಲುಪಿವೆ. ಇದೆ ನಿಟ್ಟಿನಲ್ಲಿ ಐದು ದಶಕಗಳ ಕಾಲ ಪ್ರದರ್ಶನ ನೀಡಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ ಬಂದ್ ಆಗಿತ್ತು. ಆದ್ರೀಗ ಸಂತಸದ ವಿಚಾರ ಅಂದ್ರೆ ಆ ಕಲಾವಿದರಿಗ ಮತ್ತೆ ಬಣ್ಣ ಹಚ್ಚುತ್ತಿರೋದು.
5 ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಿದ ಕಲಾವಿದರು: ಗ್ರಾಮೀಣ ಕಲೆಗಳು ದಿನ ಕಳೆದಂತೆ ನಶಿಸಿ ಹೋಗ್ತಿವೆ. ಅದರಲ್ಲು ಗ್ರಾಮೀಣ ಭಾಗದ ಜನರ ಅಚ್ಚುಮೆಚ್ಚಿನ ಬಯಲಾಟಗಳು ಟಿವಿ, ಧಾರಾವಾಹಿ, ಸಾಮಾಜಿಕ ಜಾಲತಾಣಗಳ ಅಬ್ಬರ ನಡುವೆ ಕಣ್ಮರೆಯಾಗ್ತಿವೆ. ಈ ಸಾಲಿನಲ್ಲಿ ಹಿಂದೊಮ್ಮೆ ಉತ್ತರ ಕರ್ನಾಟಕ ಭಾಗದಲ್ಲಿ ಮನೆ ಮಾತಾಗಿದ್ದ ಲಿಂಗೇಶ್ವರ ನಾಟ್ಯಸಂಘದ ಶ್ರೀ ಜಗಜ್ಯೋತಿ ಬಸವೇಶ್ವ ಅರ್ಥಾತ್ ಕಲ್ಯಾಣ ಕ್ರಾಂತಿ ಎಂಬ ನಾಟಕ. ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಅಡವಯ್ಯ ಸ್ವಾಮಿ ತೋರಗಲ್‌ಮಠ ನೇತೃತ್ವದಲ್ಲಿ ಶುರುವಾದ ಈ ಬಯಲಾಟ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯ ಗಳಲ್ಲಿ ಕನ್ನಡದಲ್ಲೆ ಪ್ರದರ್ಶನಗೊಂಡಿತ್ತು. ಆದ್ರೆ ಆರ್ಥಿಕ ಸಂಕಷ್ಟ, ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಕೆಲ ಕಲಾವಿದರ ನಿಧನದಿಂದಲಾಗಿ ಬಯಲಾಟ ಪ್ರದರ್ಶನ ಕಳೆದ ಐದು ವರ್ಷಗಳಿಂದ ನಿಂತು ಹೋಗಿತ್ತು. ಆದ್ರೀಗ ಸಂಕೋನಟ್ಟಿ ಗ್ರಾಮಸ್ಥರು, ಇಂಚಗೇರಿ ಸಾಂಪ್ರದಾಯದ ಮುಖಂಡರ ಒತ್ತಾಯ, ಪ್ರೋತ್ಸಾಹದ ಮೇರೆಗೆ ಮತ್ತೆ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಕನ್ನಡದ ಅನ್ನ ಉಂಡು ಕೊನೆಗೆ ಜೈ ಮಹಾರಾಷ್ಟ್ರ ಎಂದ ಪಾಲಿಕೆ ನಿವೃತ್ತ ನೌಕರ
ಇಂಚಗೇರಿ ಮಠದಲ್ಲಿ 5 ವರ್ಷದ ಬಳಿಕ ನಾಟಕ ಪ್ರದರ್ಶನ: 5 ದಶಕಗಳಿಂದ ಬಯಲಾಟವಾಗಿ ಪ್ರದರ್ಶನಗೊಳ್ತಿದ್ದ ಜಗಜ್ಯೋತಿ ಬಸವೇಶ್ವರ ಆಟ, 8 ವರ್ಷಗಳ ಹಿಂದೆ ನಾಟಕವಾಗಿ ಪರಿವರ್ತನೆಗೊಂಡಿತ್ತು. ಉತ್ತಮ ಪ್ರದರ್ಶನವನ್ನು ಕಾಣುತ್ತಿತ್ತು. ಆದ್ರೆ ನಾಟಕದಲ್ಲಿದ್ದ ಪ್ರಮುಖ ಪಾತ್ರಧಾರಿ ಪಾರಿಸ್ ಬಸರಿಕೋಡಿ ತೀರಿಕೊಂಡ ಮೇಲೆ 5 ವರ್ಷಗಳ ಹಿಂದೆ ನಾಟಕ ಪ್ರದರ್ಶನ ನಿಂತು ಹೋಗಿತ್ತು. ಆರ್ಥಿಕ ತೊಂದರೆಯಿಂದ ನಾಟಕ ಪ್ರದರ್ಶನಕ್ಕೆ ತಂಡ ಕೈಹಾಕಲೇ ಇಲ್ಲ, ಮತ್ತೊಮ್ಮೆ ನಾಟಕ ಪ್ರದರ್ಶನ ಶುರು ಮಾಡಬೇಕು ಎನ್ನುವಾಗಲೇ ನಾಟಕದ ಹಿರಿಯ ಕಲಾವಿದ ಬುಜಬಲಿ ಬಸರಿಕೋಡಿ, ರಾಜು ಪಾಟೀಲ್ ಸೇರಿ ಕೆಲವರು ನಿಧನ ಹೊಂದಿದರು.
ಬಳಿಕ ನಾಟಕ ಪ್ರದರ್ಶಿಸುವ ಉತ್ಸಾಹವನ್ನೆ ತಂಡ ಕಳೆದುಕೊಂಡಿತ್ತು. ಆದ್ರೆ ಕಳೆದ ಮೇ ದಿನಾಂಕ 31 ರಂದು ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಇಂಚಗೇರಿ ಮಠದ ಸಪ್ತಾಹದಲ್ಲಿ ಹಲವು ಹಿರಿಯರು, ಮುಖಂಡರ ಒತ್ತಾಯ ಸಹಕಾರದೊಂದಿಗೆ ಹೊಸಬರನ್ನ ತಂಡಕ್ಕೆ ಸೇರಿಸಿಕೊಂಡು ಪುನಃ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮತ್ತೆ ಪ್ರದರ್ಶನ ಶುರುವಾದ ಜಗಜ್ಯೋತಿ ಬಸವೇಶ್ವರ ನಾಟಕ ನೋಡಲು ಜನರು ಕಿಕ್ಕಿರಿದು ಸೇರಿದ್ದು ವಿಶೇಷವಾಗಿತ್ತು. ನೂರಾರು ಜನರು 16ಸಾವಿರಕ್ಕೂ ಅಧಿಕ ಬಹುಮಾನಗಳ ನೀಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕಲೆ ಮೇಲೆಯ ಜನರಿಗಿರುವ ಪ್ರೀತಿಯನ್ನ ತೋರಿಸಿದೆ.
ವೇದಿಕೆಯಲ್ಲೆ ಬಸವೇಶ್ವರ ಪಾತ್ರಧಾರಿ ಕಣ್ಣೀರು: ನಾಟಕ ಪ್ರದರ್ಶನ ವೇಳೆ 5 ವರ್ಷ ಬಳಿಕ ಪ್ರದರ್ಶನಕ್ಕಿಳಿದ ವೇಳೆ ಕಲಾವಿದರು ಭಾವುಕರಾದರು, ಮತ್ತೆ ನಾಟಕ ಪ್ರದರ್ಶನಕ್ಕೆ ಅವಕಾಶ, ಪ್ರೋತ್ಸಾಹ ನೀಡಿದ ಗ್ರಾಮಸ್ಥರಿಗೆ ಕೃತಜ್ಞತೆ ಹೇಳುವ ವೇಳೆ ಬಸವೇಶ್ವರರ ಪಾತ್ರಧಾರಿ ಅಡವಯ್ಯ ತೋರಗಲ್‌ಮಠ ಭಾವುಕರಾಗಿ ಕಣ್ಣೀರಿಟ್ಟರು. ಕಣ್ಣೀರು ಹಾಕುತ್ತಲೇ, ಕಲಾವಿದರಿಗೆ ಪ್ರದರ್ಶನ ಸಹಾಯ ಸಹಕಾರ ಬೇಕು ಎಂದರು.
ಐದು ದಶಕಗಳ ಕಾಲದ ಇತಿಹಾಸ ಹೊಂದಿದ್ದ ಬಯಲಾಟ: ಕಳೆದ 5 ದಶಕಗಳಿಂದ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಲಿಂಗೇಶ್ವರ ನಾಟ್ಯಸಂಘದ ಜಗಜ್ಯೋತಿ ಬಸವೇಶ್ವರ ಬಯಲಾಟ ರಾಜ್ಯದಾದ್ಯಂತ ಪ್ರದರ್ಶನಗೊಳ್ತಿತ್ತು. ಸದ್ಯ ಈ ನಾಟ್ಯ ಸಂಘದಲ್ಲಿರುವ ಬಹುತೇಕ ಕಲಾವಿದರಿಗೆ 70ರ ಆಸುಪಾಸು ವಯಸ್ಸಾಗಿದೆ. ಆದ್ರೆ ಇಂಥಹ ಗ್ರಾಮೀಣ ಕಲೆಗಳಲು ನಸಿಸಬಾರದು ಅಂತಾ ಕಲೆ ಪ್ರದರ್ಶನದಲ್ಲಿ ತೊಡಗಿದ್ದರು. ಅದರಲ್ಲಿ ಈ ನಾಟ್ಯ ಸಂಘದಲ್ಲಿ ಬಸವಣ್ಣನವರ ಪಾತ್ರ ಮಾಡುವ ಅಡವಯ್ಯ ತೋರಗಲ್‌ಮಠ ಎನ್ನುವ ಹಿರಿಯ ಕಲಾವಿದರು ಬಣ್ಣ ಹಚ್ಚಿ ನಟಿಸೋಕೆ ಶುರು ಮಾಡಿದ್ರೆ ನಿಜವಾದ ಬಸವಣ್ಣನವರೇ ಧರೆಗಿಳಿದು ಬಂದರಾ ಎನ್ನುವ ಭಾಸ ಉಂಟಾಗುತ್ತಿತ್ತು ಅನ್ನೋದು ವಿಶೇಷ.
ಬಸವೇಶ್ವರರ ಪಾತ್ರಧಾರಿ ಕಂಡು ಪೂಜೆಗೆ ಮುಂದಾಗಿದ್ದ ಗ್ರಾಮಸ್ಥರು: ಇದು 10 ವರ್ಷಗಳ ಹಿಂದಿನ ಹಳೆಯ ಮಾತು, ಇದೆ ಕಲಾತಂಡದಲ್ಲಿರುವ ಹಾಸ್ಯಚಕ್ರವರ್ತಿ ಎಂದು ಕರೆಯಿಸಿಕೊಳ್ಳುವ ಹಿರಿಯ ಕಲಾವಿದ ನಾಗಪ್ಪ ಬಿಸಗುಪ್ಪಿ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಎದುರು ಹೇಳಿಕೊಂಡ ಅನುಭವ ಇದು. ವಿಜಯಪುರ ಜಿಲ್ಲೆಯ ಧೂಳಖೇಡ ಗ್ರಾಮಕ್ಕೆ ಪ್ರದರ್ಶನಕ್ಕೆ ಹೋದಾಗ ಬಸವಣ್ಣ ಪಾತ್ರಧಾರಿ ಅಡವಯ್ಯ ಸ್ವಾಮಿ ತೋರಗಲ್‌ಮಠ ನಟನೆ ಕಂಡು ಭಾವುಕಾರದ ಗ್ರಾಮಸ್ಥರು ಕೈಯ್ಯಲ್ಲಿ ನೀರು, ವಿಭೂತಿ, ಊದುಕಡ್ಡಿ ಹಿಡಿದು ಸಾಲುಗಟ್ಟಿ ಪೂಜೆಗೆ ಸೇರಿಬಿಟ್ಟಿದ್ದಂತೆ. ಆ ರೀತಿಯಲ್ಲಿ ಪಾತ್ರಕ್ಕೆ ಜೀವತುಂಬ ಶಕ್ತಿಹೊಂದಿರುವ ಕಲಾವಿದರು ಈ ತಂಡದಲ್ಲಿರೋದು ವಿಶೇಷವೇ ಸರಿ.
ನವಿರಾದ ಹಾಸ್ಯದ ಮೂಲಕ ರಂಜಿಸುವ ಕಲಾವಿದರು: ನಾಟಕದಲ್ಲಿ ನವೀರಾದ ಹಾಸ್ಯ ಮೂಲಕ ರಂಜಿವ ಶಕ್ತಿ ತಂಡದ ಕಲಾವಿದರಲ್ಲಿದೆ. ತಂಡದಲ್ಲಿರುವ ನಾಗಪ್ಪ ಬೀಸಗುತ್ತಿ ಎನ್ನುವ ಹಿರಿಯ ಕಲಾವಿದರು ತಮ್ಮ 70ನೇ ವಯಸ್ಸಿನಲ್ಲು ಒಂದೆ ನಾಟಕ, ವೇದಿಕೆಯಲ್ಲಿ ಮೂರು ಪಾತ್ರಗಳನ್ನ ನಿರ್ವಹಿಸೊ ತಾಕತ್ತು ಇಟ್ಟುಕೊಂಡಿದ್ದಾರೆ.. ಇನ್ನು ಇದೆ ವಯಸ್ಸಿನ ಹಿರಿಯ ಕಲಾವಿದ ಚರಂತಯ್ಯ ಕಾಜೀಬಿಳಗಿ ಕೂಡ ಹರಳಯ್ಯ, ಆಚಾರೀ, ಪರಮೇಶ್ವರ, ಬಸವಣ್ಣನ ತಾಯಿಯ ಗೆಳತಿ ಪಾತ್ರವನ್ನ ಒಬ್ಬರೇ ನಿರ್ವಹಿಸುತ್ತಾರೆ. ಇದೆ ತಂಡದ ಪರಮಾನಂದ ಹಿರಟ್ಟಿ ಎನ್ನುವ ಕಲಾವಿದ ಕಳೆದ 25 ವರ್ಷಗಳಿಂದ ಹೆಣ್ಣು ಪಾತ್ರಗಳನ್ನ ನಿರ್ವಹಿಸುತ್ತಿದ್ದಾರೆ. ನೋಡಿದರೇ ಪಾತ್ರ ಮಾಡ್ತಿರೋದು ಗಂಡು ಎನ್ನುವ ಗುರುತು ಸಿಗೋದಿಲ್ಲ. ಬಸವಣ್ಣನ ತಾಯಿ ಮಾದಲಾಂಬಿಕೆ ಹಾಗು ಪತ್ನಿ ಗಂಗಾಂಬಿಕೆ ಪಾತ್ರವನ್ನು 60 ವರ್ಷದ ಆಸುಪಾಸಿನಲ್ಲಿರೋ ಪರಮಾನಂದ ನಿರ್ವಹಿಸೋದು ಅಚ್ಚರಿ ಮೂಡಿಸುತ್ತೆ.
ಬೆಳಗಾವಿ ಸುವರ್ಣಸೌಧದೆದುರು ಸಂಡಿಗೆ, ಶ್ಯಾವಿಗೆ ಒಣಹಾಕಿದ್ದ ನೌಕರೆ ವಜಾ
ನಿಜವಾದ ನಾಗರಹಾವನ್ನೆ ಕೊರಳಿಹಾಕೊಂಡು ಪ್ರದರ್ಶನ: ವಿಶೇಷ ಹಾಗೂ ಅಚ್ಚರಿ ವಿಚಾರ ಅಂದ್ರೆ ಇದೆ ನಾಟಕದಲ್ಲಿ ಪರಮೇಶ್ವರನ ಪಾತ್ರ ನಿರ್ವಹಿಸುವ ಚರಂತಯ್ಯ ಕಾಜಿಬೀಳಗಿ ಎನ್ನುವ ಕಲಾವಿದರು, ಕೊರಳಲ್ಲಿ ನಿಜವಾದ ಹಾವನ್ನೆ ಹಾಕಿಕೊಂಡು ಪಾತ್ರ ಮಾಡಿದ್ದಾರೆ. ಮೊನ್ನೆ ನಡೆದ ಪ್ರದರ್ಶನದಲ್ಲು ಜೀವಂತ ನಾಗರಹಾವನ್ನೆ ಕೊರಳಲ್ಲಿ ಹಾಕಿಕೊಂಡು ಪಾತ್ರ ಮಾಡಿದ್ದಾರೆ. ಹೊಸದಾಗಿ ಪಾತ್ರನಿರ್ವಹಿಸಲು ಬಂದ ಕಲಾವಿದವರು ಚರಂತಯ್ಯ ನಿಜವಾದ ಹಾವು ತಂದು ಪಾತ್ರ ನಿರ್ವಹಿಸೋದನ್ನ ಕಂಡು ಗಾಬರಿ ಕೂಡ ಆಗಿದ್ದಾರೆ.
ವೃದಾಪ್ಯದಲ್ಲಿರೋ ಕಲಾವಿದರಿಗೆ ಬೇಕಿದೆ ಆರ್ಥಿಕ ಸಹಾಯ: 5 ದಶಕಗಳ ಇತಿಹಾಸ ಇರುವ ಲಿಂಗೇಶ್ವರ ನಾಟ್ಯ ಸಂಘದ ಕಲಾವಿದರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿತ್ಯ ಕೆಲಸಕ್ಕೆ ಹೋದರೆನೇ ಹೊಟ್ಟೆ ತುಂಬುತ್ತೆ ಎನ್ನುವ ಪರಿಸ್ಥಿತಿ ಇದೆ. ಹೀಗಿರುವಾಗ ನಾಟಕ ಪ್ರದರ್ಶನ ಮಾಡುತ್ತ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎನ್ನುವುದು ಮಂಚಣ್ಣ ಮಂತ್ರಿ ಪಾತ್ರ ಮಾಡುವ ಸಿದ್ದು ಭೋಸಲೆ ಪ್ರಶ್ನೆ. ಸರ್ಕಾರ ದಶಕಗಳಿಂದ ಕಂಪನಿ ಕಟ್ಟಿಕೊಂಡು ಆಧ್ಯಾತ್ಮಿಕ ನಾಟಕ ಪ್ರದರ್ಶಿಸುವ ನಿಷ್ಠಾವಂತ ಕಲಾವಿದರ ನೆರವಿಗೆ ಬರಬೇಕು. ಸ್ಪೆಶಲ್ ಪ್ಯಾಕೇಜ್ ಮೂಲಕ ನೆರವು ಕೊಡಬೇಕು ಎಂದು ಮನವಿ ಮಾಡಿದ್ದಾರೆ.