ಬೆಳಗಾವಿ ಸುವರ್ಣಸೌಧದೆದುರು ಸಂಡಿಗೆ, ಶ್ಯಾವಿಗೆ ಒಣಹಾಕಿದ್ದ ನೌಕರೆ ವಜಾ
* ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ
* ಇನ್ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ
* ಡಿಸಿ ಭೇಟಿ ನೀಡಿ ಎಚ್ಚರಿಕೆ
ಬೆಳಗಾವಿ(ಜೂ.02): ಇಲ್ಲಿನ ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಒಣ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡಿದ್ದು ಶ್ಯಾವಿಗೆ ಒಣಗಿಸಲು ಹಾಕಿದ್ದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಸುವರ್ಣ ವಿಧಾನಸೌಧ ಕಟ್ಟಡದ ಮುಂಭಾಗದಲ್ಲಿ ನಿರ್ವಹಣಾ ಮಹಿಳಾ ಕಾರ್ಮಿಕಳ ಅಚಾತುರ್ಯದಿಂದ ಮುಖ್ಯದ್ವಾರದ ಮುಂದೆ ಶ್ಯಾವಿಗೆ ಒಣ ಹಾಕಿದ್ದಾಳೆ. ಈ ಕುರಿತು ಗುತ್ತಿಗೆದಾರರು ನೀಡಿರುವ ಪತ್ರದ ಪ್ರಕಾರ ಅಚಾತುರ್ಯ ಮಾಡಿರುವ ಕಾರ್ಮಿಕಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇನ್ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದು ಗುತ್ತಿಗೆದಾರರು ನೋಟಿಸ್‌ಗೆ ಉತ್ತರ ನೀಡಿದ್ದಾರೆ.
Belagavi: ಸುವರ್ಣ ವಿಧಾನಸೌಧ ಎದುರು 'ಶಾವಿಗೆ' ಒಣಹಾಕಿದ ಮಹಿಳೆ: ಫೋಟೋ ವೈರಲ್
ಡಿಸಿ ಭೇಟಿ, ಎಚ್ಚರಿಕೆ:
ಸುವರ್ಣ ವಿಧಾನಸೌಧದ ಘನತೆ ಗಮನದಲ್ಲಿಟ್ಟುಕೊಂಡು ಅಲ್ಲಿನ ಭದ್ರತೆ, ಸ್ವಚ್ಛತೆ ಸೇರಿದಂತೆ ಒಟ್ಟಾರೆ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ನಗರದ ಹೊರಹೊಲಯದಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಬುಧವಾರ ಭೇಟಿ ನೀಡಿ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕರ ಜತೆ ಚರ್ಚೆ ನಡೆಸಿದರು. ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಹಾಗೂ ಸಂಡಿಗೆ ಒಣಹಾಕಿದ್ದ ಮಹಿಳಾ ಕಾರ್ಮಿಕರೊಬ್ಬರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಎಚ್ಚರಿಕೆ ನೀಡಿದರು.