Murugha Mutt Administrator : ಮುರುಘಾ ಮಠ ರಕ್ಷಿಸಲೆಂದೇ ಆಡಳಿತಾಧಿಕಾರಿ: ಸರ್ಕಾರ

  • ಮುರುಘಾ ಮಠ ರಕ್ಷಿಸಲೆಂದೇ ಆಡಳಿತಾಧಿಕಾರಿ: ಸರ್ಕಾರ
  •  ಮಠದ ದೈನಂದಿನ ಪೂಜೆ, ದಾಸೋಹಕ್ಕೆ ಆಡಳಿತಾಧಿಕಾರಿಯಿಂದ ಅಡ್ಡಿ ಆಗದು
  • ಹೈಕೋರ್ಟ್‌ನಲ್ಲಿ ತನ್ನ ತೀರ್ಮಾನಕ್ಕೆ ಸರ್ಕಾರದಿಂದ ಪ್ರಬಲವಾದ ಸಮರ್ಥನೆ
Administrator to protect Muruga Math says govt of karnataka rav

ಬೆಂಗಳೂರು (ಡಿ.17) : ಚಿತ್ರದುರ್ಗ ಮುರುಘಾಮಠದ ಅಧೀನದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ 106 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸಾವಿರಾರು ನೌಕರರು ದುಡಿಯುತ್ತಿದ್ದಾರೆ. ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜೈಲು ಸೇರಿರುವ ಕಾರಣ ಈ ಸಾರ್ವಜನಿಕ ಟ್ರಸ್ಟ್‌ ಅನ್ನು ಸರ್ಕಾರ ರಕ್ಷಣೆ ಮಾಡಬೇಕಿದ್ದು ಅದಕ್ಕಾಗಿಯೇ ಆಡಳಿತಾಧಿಕಾರಿ ನೇಮಕ ಮಾಡಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ತನ್ನ ನಡೆಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಡಿ.ಎಸ್‌.ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ನಡೆಯಿತು. ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ.

ಮುರುಘಾ ಮಠ ಮಾಜಿ ಆಡಳಿತಾಧಿಕಾರಿ ಬಸವರಾಜನ್‌ ಹೊರತರಲು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ

ಸರ್ಕಾರದ ಪರ ಅಡ್ವೊಕೇಟ್‌ ಪ್ರಭುಲಿಂಗ ನಾವದಗಿ ಅವರು, ಶಿವಮೂರ್ತಿ ಮುರುಘಾ ಶರಣರು ಜೈಲಿನಿಂದಲೇ ಆಡಳಿತ ನಡೆಸಿದರೆ ಸಾವಿರಾರು ಕೋಟಿ ರುಪಾಯಿಯ ಆಸ್ತಿ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ ಎಂದು ವಾದಿಸಿದರು.

ಎಚ್‌.ಏಕಾಂತಯ್ಯ, ನವೀನ್‌ ಹಾಗೂ ಇತರರು ಸರ್ಕಾರಕ್ಕೆ ಸಲ್ಲಿಸಿದ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಂದ ಮೂರು ಭಿನ್ನ ವರದಿಗಳನ್ನು ತರಿಸಿಕೊಂಡು ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ. ಮಠದ ದೈನಂದಿನ ಪೂಜಾ ಕೈಂಕರ್ಯ, ದಾಸೋಹ ಹಾಗೂ ಇತರೆ ಚಟುವಟಿಕೆಗಳಿಗೆ ಆಡಳಿತಾಧಿಕಾರಿಯಿಂದ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ನಾವದಗಿ ತಿಳಿಸಿದರು.

ಒಂದು ವೇಳೆ ಶರಣರು ಜಾಮೀನು ಪಡೆದು ಹೊರಬಂದರೆ ಆಗ ಆಡಳಿತವನ್ನು ಬಿಟ್ಟುಕೊಡುತ್ತೀರಾ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌,ಒಂದು ವೇಳೆ ಶರಣರಿಗೆ ಜಾಮೀನು ದೊರೆತದ್ದೇ ಆದರೆ, ಆಗ ಸರ್ಕಾರ ಈ ಅಂಶವನ್ನು ಪರಿಶೀಲಿಸಲಿದೆ ಎಂದರು.

ಅರ್ಜಿದಾರರ ಪರ ವಕೀಲ ಜಯಕುಮಾರ್‌ ಎಸ್‌.ಪಾಟೀಲ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನು ಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಡಿ ಅವಕಾಶವಿಲ್ಲ. ಆದ್ದರಿಂದ ಆಡಳಿತಾಧಿಕಾರಿ ನೇಮಕ ಮಾಡಿರುವ ಆದೇಶ ರದ್ದುಗೊಳಿಸಬೇಕು. ಪ್ರತಿಯೊಂದು ಧಾರ್ಮಿಕ ಪಂಗಡಗಳಿಗೆ ಸಂವಿಧಾನದತ್ತವಾದ ಕೆಲವೊಂದು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶವಿರುತ್ತದೆ. ಇದನ್ನು ಸುಪ್ರೀಂ ಕೋರ್ಚ್‌ ಶಿರೂರು ಮಠ ಪ್ರಕರಣದಲ್ಲಿ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ, ಮುರುಘಾಮಠ ಬಸವತತ್ವ ಅನುಸರಿಸುವ ಅವೈದಿಕ ಪರಂಪರೆಯ ಲಿಂಗಾಯತ ಮಠವಾಗಿದ್ದು, ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರ ಕ್ರಮ’ ಎಂದು ವಾದಿಸಿದರು.

ಮುರುಘಾ ಮಠಕ್ಕೆ ಸರ್ಕಾರದ ನೂತನ ಆಡಳಿತಾಧಿಕಾರಿ ಎಸ್.ಬಿ ವಸ್ತ್ರದ್ ಆಗಮನ

ಇದಕ್ಕೆ ನ್ಯಾಯಪೀಠ ಪ್ರತಿಕ್ರಿಯಿಸಿ, ರಾಜ್ಯದಲ್ಲೇ ಈ ಮಠಕ್ಕೆ ಅತ್ಯಂತ ಮಹತ್ವ ಮತ್ತು ಗೌರವ, ಘನತೆಯಿದೆ. ಈ ಮಠಕ್ಕೆ ಯಾರು ಪೀಠಾಧಿಪತಿ ಎಂಬುದು ಮುಖ್ಯವಲ್ಲ. ಇದು ಅಲ್ಲಮಪ್ರಭುಗಳು ಸ್ಥಾಪಿಸಿದ ಮಠ. ಈ ಮಠಕ್ಕೆ .1,600 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದೆ ಎಂದು ನೀವೇ ಹೇಳುತ್ತಿದ್ದೀರಿ, ವಿರಕ್ತ ಮಠ ಎನ್ನುತ್ತಿದ್ದೀರಿ. ಆದರೆ ಅವಿರಕ್ತ ನಡೆ ಸರಿಯೇ, ನಿಮ್ಮ ಅರ್ಜಿಯಲ್ಲಿ ನೀವು ಕೇವಲ ಲಿಂಗಾಯತ ಮಠ ಎಂದಷ್ಟೇ ಹೇಳಿದ್ದೀರಿ, ಅದನ್ನು ಪುಷ್ಟೀಕರಿಸುವ ಯಾವುದೇ ಅಂಶಗಳಿಲ್ಲ. ಹೇಳಿಕೆಯನ್ನು ಸಾಬೀತುಪಡಿಸುವ ದಾಖಲೆ, ಪುರಾವೆಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕಲ್ಲವೇ ಎಂದು ಪ್ರಶ್ನಿಸಿತು.

ಪ್ರಶ್ನೆಗಳ ಸುರಿಮಳೆ:

ಹಾಗೆಯೇ ದೇವಸ್ಥಾನಗಳು ಮತ್ತು ಮಠಗಳ ನಡುವಿನ ವ್ಯತ್ಯಾಸವೇನು? ಮಠಗಳು ಶಾಸನಾತೀತವೇ? ಮಠವು ವಾರ್ಷಿಕವಾಗಿ ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳನ್ನು ಒದಗಿಸಿ. ಒಂದು ವೇಳೆ ಪೀಠಾಧಿಪತಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೆ ಆಗ ನೀವು ಮಠದ ಆಡಳಿತಕ್ಕೆ ರೂಪಿಸಿಕೊಳ್ಳಬಹುದಾದ ಪರ್ಯಾಯ ಮಾರ್ಗವೇನು? ಆದಾಯ ಮಿತಿಯಿಂದ ವಿನಾಯ್ತಿ ಹೊಂದಿದ ಮಠಕ್ಕೆ ಬರುವ ಆದಾಯ ಮತ್ತು ನೌಕರರ ಸಂಬಳ ಸಾರಿಗೆ ಖರ್ಚು ಎಷ್ಟು? ಮಠದ ಉತ್ತರಾಧಿಕಾರಿಯನ್ನು ನೇಮಕ ಮಾಡುವುದು ಹೇಗೆ? ಈಗಿರುವ ಉಸ್ತುವಾರಿ ಸ್ವಾಮೀಜಿಗೆ ಜಿಪಿಎ ನೀಡಿರುವುದಕ್ಕೆ ಕಾನೂನು ಮಾನ್ಯತೆ ಎಲ್ಲಿದೆ ಮತ್ತಿತರ ಪ್ರಶ್ನೆಗಳನ್ನು ಅರ್ಜಿದಾರರಿಗೆ ನ್ಯಾಯಾಲಯ ಕೇಳಿತು.

ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕಕ್ಕೆ ವೀರಶೈವ ಮಹಾಸಭಾ ಆಗ್ರಹ: 30 ಜಿಲ್ಲೆಗಳಿಂದ ಪಾದಯಾತ್ರೆ ನಿರ್ಣಯ

ಒಂದು ವೇಳೆ ಅರ್ಜಿದಾರರು ಒಪ್ಪಿಕೊಂಡರೆ ಅವರು ಸೂಚಿಸುವ ಸಲಹೆಗಾರರನ್ನು ಉಳಿಸಿಕೊಂಡು ಆಡಳಿತಾಧಿಕಾರಿ ಕಾರ್ಯ ನಿರ್ವಹಿಸಲು ಸಾಧ್ಯವೇ? ಮಠಗಳ ಮೇಲೆ ನಿಯಂತ್ರಣ ಹೊಂದುವ ಕುರಿತಂತೆ ಯಾವುದೇ ಶಾಸನಗಳಿಲ್ಲವೇ? ಈ ರೀತಿಯ ಪ್ರಕರಣ ದೇಶದ ಇನ್ನಾವುದೇ ಭಾಗದಲ್ಲಿ ನಡೆದಿದ್ದು, ಅದಕ್ಕೆ ಯಾವುದಾದರೂ ಹೈಕೋರ್ಚ್‌ ನೀಡಿರುವ ತೀರ್ಪುಗಳಿದ್ದರೆ ನ್ಯಾಯಪೀಠಕ್ಕೆ ವಿವರಿಸಿ. ಪಿ.ಎಸ್‌.ವಸ್ತ್ರದ ಅವರು ಯಾವಾಗ ಅಧಿಕಾರ ವಹಿಸಿಕೊಂಡರು? ಅವರು ಅಧಿಕಾರ ವಹಿಸಿಕೊಂಡ ವೇಳೆ ಯಾರು ಹಾಜರಿದ್ದರು? ಆ ಪ್ರಕ್ರಿಯೆಯನ್ನು ವಿಡಿಯೊ ದಾಖಲೆ ಮಾಡಿದ್ದೀರಾ? ಸ್ಥಳದಲ್ಲಿ ಹಾಜರಿದ್ದು ಮಹಜರಿಗೆ ಸಹಿ ಹಾಕಿದವರ ಹೆಸರು ವಿವರಗಳೇನು? ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳು ಹಾಜರಿದ್ದು ಮಹಜರಿಗೆ ಸಹಿ ಹಾಕಬೇಕಾದ್ದು ಅವಶ್ಯವಲ್ಲವೇ ಎಂಬ ಪ್ರಶ್ನೆಗಳನ್ನು ಸರ್ಕಾರಕ್ಕೆ ನ್ಯಾಯಾಲಯ ಕೇಳಿತು.

Latest Videos
Follow Us:
Download App:
  • android
  • ios