Asianet Suvarna News Asianet Suvarna News

ಬೆಲೆ ಏರಿಕೆಯ ಮಧ್ಯೆ ಇದೀಗ ಮತ್ತೊಂದು ಹೊರೆ: ಕಂಗಾಲಾದ ಜನತೆ..!

ನಗರಸಭೆಯ ಆಸ್ತಿ ತೆರಿಗೆ ಸಲ್ಲಿಕೆ ವಿಭಾಗದಲ್ಲಿ ಹಿಂದಿನ ವರ್ಷದ ಆಸ್ತಿ ತೆರಿಗೆಯ ನಮೂನೆಯನ್ನು ನೀಡಿದರೆ ಅದರಲ್ಲಿರುವ ಮನೆ, ವಾಣಿಜ್ಯ ಕಟ್ಟಡ, ನಿವೇಶನದ ಅಳತೆಗೆ ಅನುಗುಣವಾಗಿ ಆನ್‌ಲೈನ್‌ನಲ್ಲಿ ನಮೂದಿಸಿ ಬಿಲ್ ನೀಡುತ್ತಾರೆ. ಒಮ್ಮೊಮ್ಮೆ ಇವರು ನೀಡುವ ಬಿಲ್ ನೋಡಿದರೆ ಆಘಾತವಾಗುತ್ತದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ 6 ರಿಂದ 7 ಸಾವಿರ ರು. ಹೆಚ್ಚಾಗಿರುತ್ತದೆ. ಅದನ್ನು ತಕ್ಷಣವೇ ಪರಿಶೀಲಿಸಿಕೊಳ್ಳದಿದ್ದರೆ ಸ್ಮಶಾನಕ್ಕೆ ಹೋದ ಹೆಣ, ಸರ್ಕಾರಕ್ಕೆ ಹೋದ ಹಣ ಎರಡೂ ವಾಪಸ್ ಬರುವುದಿಲ್ಲ ಎಂಬಂತಾಗುತ್ತದೆ.

Additional Tax Burden on Consumers in Mandya grg
Author
First Published Oct 20, 2023, 9:45 PM IST

ಮಂಡ್ಯ ಮಂಜುನಾಥ

ಮಂಡ್ಯ(ಅ.20):  ನಗರ ವ್ಯಾಪ್ತಿಯ ಮನೆಗಳು, ವಾಣಿಜ್ಯ ಕಟ್ಟಡಗಳು, ನಿವೇಶನಗಳ ಮೇಲಿನ ತೆರಿಗೆ ಈಗಾಗಲೇ ದುಬಾರಿಯಾಗಿದೆ. ಅದನ್ನು ಕಟ್ಟುವಷ್ಟರಲ್ಲೇ ಜನರು ಸುಸ್ತೆದ್ದು ಹೋಗಿದ್ದಾರೆ. ಇದರ ನಡುವೆ ತೆರಿಗೆಯ ಹೆಚ್ಚುವರಿ ಹೊರೆ ಗ್ರಾಹಕರ ಮೇಲೆ ಬೀಳಲಾರಂಭಿಸಿದೆ. ಇದೇನು ಸಾಫ್ಟ್‌ವೇರ್ ದೋಷವೋ, ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯವೋ ತಿಳಿಯದಂತಾಗಿದೆ.

ನಗರಸಭೆಯ ಆಸ್ತಿ ತೆರಿಗೆ ಸಲ್ಲಿಕೆ ವಿಭಾಗದಲ್ಲಿ ಹಿಂದಿನ ವರ್ಷದ ಆಸ್ತಿ ತೆರಿಗೆಯ ನಮೂನೆಯನ್ನು ನೀಡಿದರೆ ಅದರಲ್ಲಿರುವ ಮನೆ, ವಾಣಿಜ್ಯ ಕಟ್ಟಡ, ನಿವೇಶನದ ಅಳತೆಗೆ ಅನುಗುಣವಾಗಿ ಆನ್‌ಲೈನ್‌ನಲ್ಲಿ ನಮೂದಿಸಿ ಬಿಲ್ ನೀಡುತ್ತಾರೆ. ಒಮ್ಮೊಮ್ಮೆ ಇವರು ನೀಡುವ ಬಿಲ್ ನೋಡಿದರೆ ಆಘಾತವಾಗುತ್ತದೆ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ ೬ ರಿಂದ ೭ ಸಾವಿರ ರು. ಹೆಚ್ಚಾಗಿರುತ್ತದೆ. ಅದನ್ನು ತಕ್ಷಣವೇ ಪರಿಶೀಲಿಸಿಕೊಳ್ಳದಿದ್ದರೆ ಸ್ಮಶಾನಕ್ಕೆ ಹೋದ ಹೆಣ, ಸರ್ಕಾರಕ್ಕೆ ಹೋದ ಹಣ ಎರಡೂ ವಾಪಸ್ ಬರುವುದಿಲ್ಲ ಎಂಬಂತಾಗುತ್ತದೆ.

ಕುರಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ಬಿತ್ತು ಧರ್ಮದೇಟು

ಚಲನ್ ಕೊಡುವುದಷ್ಟೇ ಕೆಲಸ:

ಆಸ್ತಿ ತೆರಿಗೆ ಅರ್ಜಿ ಸ್ವೀಕಾರ ವಿಭಾಗದಲ್ಲಿರುವವರು ಹಿಂದಿನ ಸಾಲಿನ ನಮೂನೆಯಲ್ಲಿರುವ ಅಳತೆಗೆ ಅನುಗುಣವಾಗಿ ಲೆಕ್ಕ ಹಾಕಿ ಬ್ಯಾಂಕ್ ಚಲನ್ ಕೊಡುವುದಷ್ಟೇ ಕೆಲಸ. ಮತ್ತೆ ಅವರನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಕಳೆದ ಸಾಲಿಗಿಂತ ಆರೇಳು ಸಾವಿರ ಹೆಚ್ಚು ಹಣ ಬಂದಿರುವುದಾಗಿ ಹೇಳಿದರೆ, ಅದಕ್ಕೂ ನಮಗೂ ಸಂಬಂಧವಿಲ್ಲ. ಕಂದಾಯಾಧಿಕಾರಿಯವರನ್ನು ಕೇಳಿ ಎಂದು ಕೈತೊಳೆದುಕೊಳ್ಳುತ್ತಾರೆ. ಆ ನಂತರ ಕಂದಾಯಾಧಿಕಾರಿಯನ್ನು ಹುಡುಕಿಕೊಂಡು ಹೋಗುವುದು ಜನರ ಕೆಲಸವಾಗಿದೆ.

ಕಂದಾಯಾಧಿಕಾರಿಯನ್ನು ಭೇಟಿಯಾಗಿ ತೆರಿಗೆ ಹಣ ಹಿಂದಿನ ಸಾಲಿಗಿಂತ ೬ ರಿಂದ ೭ ಸಾವಿರ ರು. ಹೆಚ್ಚುವರಿ ಬಂದಿರುವುದಾಗಿ ಹೇಳಿದರೆ ಈಗೆಲ್ಲಾ ತೆರಿಗೆ ಹೆಚ್ಚಳವಾಗಿದೆ. ವಸತಿ ಬಡಾವಣೆಗಳ ಮೌಲ್ಯ ಹೆಚ್ಚಾಗಿದೆ ಎಂದು ಹೇಳಿ ಜನರನ್ನು ಕಳುಹಿಸುವುದಕ್ಕೇ ಏನೋ ಉತ್ತರ ನೀಡುತ್ತಾರೆ. ಆದರೆ, ಕಂದಾಯಾಧಿಕಾರಿಗಳನ್ನು ಒತ್ತಾಯಿಸಿ ಕೇಳಿದರೆ ಆಗ ನಮೂನೆ-೩ನ್ನು ಆಧಾರವಾಗಿಟ್ಟುಕೊಂಡು ತೆರಿಗೆ ಮೌಲ್ಯವನ್ನು ನಿರ್ಧರಿಸಿಕೊಂಡಾಗ ಮೊದಲಿದ್ದ ತೆರಿಗೆಯ ಹೊರೆ ಕಡಿಮೆಯಾಗುತ್ತದೆ.

ಜನರಲ್ಲಿ ಗೊಂದಲ:

ತೆರಿಗೆ ಮೌಲ್ಯ ನಿರ್ಧರಣೆ ಮಾಡುವಾಗ ಈ ಲೋಪಗಳು ಏಕಾಗುತ್ತವೆ. ಸಾಫ್ಟ್‌ವೇರ್ ಸಮಸ್ಯೆಯಿಂದ ತೆರಿಗೆ ಹಣದಲ್ಲಿ ವ್ಯತ್ಯಾಸವಾಗುವುದೋ ಅಥವಾ ನಗರಸಭೆ ನೌಕರರು ಮತ್ತು ಸಿಬ್ಬಂದಿ ಸರಿಯಾಗಿ ಅಳತೆಯನ್ನು ನಮೂದಿಸದಿರುವುದರಿಂದ ಇಂತಹ ದೋಷಗಳು ಎದುರಾಗುತ್ತಿವೆಯೋ ಎನ್ನುವುದು ತಿಳಿಯದೆ ಜನರು ಗೊಂದಲಕ್ಕೆ ಸಿಲುಕಿದ್ದಾರೆ.

ತೆರಿಗೆ ಪಾವತಿಸುವುದಕ್ಕೆ ಜನರು ಉತ್ಸಾಹ ತೋರುತ್ತಿದ್ದರೂ ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವುದಕ್ಕೆ ನಗರಸಭೆಯವರು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿಲ್ಲ. ತೆರಿಗೆ ಪಾವತಿಸಲು ನಮೂನೆಯೊಂದಿಗೆ ಬರುವವರಿಗೆ ಸರಿಯಾದ ಮಾರ್ಗದರ್ಶನ ನೀಡುವುದಿಲ್ಲ. ಲೋಪ ಎಲ್ಲಿ ಆಗಿದೆ, ಎಲ್ಲಿ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಸಮಾಧಾನದಿಂದ ಉತ್ತರ ನೀಡುವವರಿಲ್ಲ. ಸಮಸ್ಯೆಯನ್ನು ಸಮಸ್ಯೆಯಾಗಿಡುವುದಕ್ಕೆ ನಗರಸಭೆಯ ಬಹುತೇಕ ನೌಕರರು-ಸಿಬ್ಬಂದಿ ಬಯಸುವರೇ ವಿನಃ ಪರಿಹಾರ ಸೂಚಿಸುವುದಕ್ಕೆ ಬಯಸುವುದೇ ಇಲ್ಲ. ಇದರಿಂದ ಜನರು ನಿತ್ಯ ಕಚೇರಿಗೆ ಅಲೆದಾಡುವುದು ಸರ್ವೇಸಾಮಾನ್ಯವಾಗಿದೆ.

ತೆರಿಗೆ ಹೊರೆಯಿಂದ ತಲ್ಲಣ:

ನಗರಸಭೆ ತೆರಿಗೆ ವ್ಯವಸ್ಥೆಯೂ ಅವೈಜ್ಞಾನಿಕವಾಗಿದೆ. ಇದನ್ನು ಸರಿಪಡಿಸುವುದಕ್ಕೆ ಸರ್ಕಾರವೂ ಆಸಕ್ತಿ ತೋರಿಸುತ್ತಿಲ್ಲ. ಗ್ರಾಹಕರು ನಿಯಮಾನುಸಾರ ಕಟ್ಟಿರುವ ಕಟ್ಟಡದಲ್ಲಿ ಹೆಚ್ಚುವರಿಯಾಗಿ ಒಂದೇ ಒಂದು ಚದರಡಿ ಕಟ್ಟಿದ್ದರೂ ಇಡೀ ಕಟ್ಟಡವನ್ನೇ ಅನಧಿಕೃತ ಎಂದು ಘೋಷಿಸಿ ದಂಡ ವಿಧಿಸಲಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಗ್ರಾಹಕರು ಈಗಾಗಲೇ ತಲ್ಲಣಿಸಿಹೋಗಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ ಅವೈಜ್ಞಾನಿಕ ತೆರಿಗೆ ವಿಧಿಸುವುದನ್ನು ಸರಿಪಡಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿದರೂ ಆಳುವವರು ಅದನ್ನು ಮೂಲೆಗುಂಪು ಮಾಡಿದ್ದಾರೆ.
ಇದರ ನಡುವೆ ತೆರಿಗೆ ಪಾವತಿಸುವ ರಸೀದಿ ತೆಗೆಯುವ ಸಮಯದಲ್ಲಿ ಬರುತ್ತಿರುವ ಹೆಚ್ಚುವರಿ ಶುಲ್ಕದ ಹೊರೆ ಗ್ರಾಹಕರನ್ನು ಮತ್ತಷ್ಟು ಹೈರಾಣಾಗುವಂತೆ ಮಾಡುತ್ತಿದೆ. ಇದರ ಬಗ್ಗೆ ಅಧಿಕಾರಿಗಳಿಂದ ಹಿಡಿದು ಎಲ್ಲರೂ ಜಾರಿಕೆ ಉತ್ತರವನ್ನೇ ನೀಡುತ್ತಾ ಬರುತ್ತಿದ್ದಾರೆ.

ಅಧ್ಯಕ್ಷರಿಲ್ಲ, ಸದಸ್ಯರಿಗೆ ಅಧಿಕಾರವೂ ಇಲ್ಲ

ನಗರಸಭೆಯಲ್ಲಿ ಅಧ್ಯಕ್ಷ ಹುದ್ದೆ ಖಾಲಿಯಾಗಿ ಐದು ತಿಂಗಳಾಯಿತು. ಇದುವರೆಗೂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಕಾಲ ಕಾಲಕ್ಕೆ ನಡೆಯಬೇಕಾದ ಸಭೆಗಳೂ ನಡೆಯುತ್ತಿಲ್ಲ. ನಗರಸಭೆಯ ಕಾರ್ಯವೈಖರಿಯನ್ನು ಪರಿಶೀಲನೆ ಮಾಡುವವರೇ ಇಲ್ಲದಂತಾಗಿದೆ. ಅಧಿಕಾರಿಗಳು, ನೌಕರರು, ಸಿಬ್ಬಂದಿ ದರ್ಬಾರ್‌ನಲ್ಲಿ ನಗರಸಭೆ ಆಡಳಿತ ಅವ್ಯವಸ್ಥೆಯಿಂದ ಮುಂದುವರೆದಿದೆ.

ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಅಧಿಕಾರವಿದ್ದರೆ ಅಧಿಕಾರಿಗಳು, ನೌಕರರು, ಸಿಬ್ಬಂದಿ ಮೇಲೆ ಹಿಡಿತವಿಟ್ಟುಕೊಂಡು ಕೆಲಸ ಮಾಡಿಸುತ್ತಾರೆ. ಈಗ ಅವರ್ಯಾರೂ ಇಲ್ಲದ ಕಾರಣ ನಗರ ಸಭೆಯೊಳಗಿನ ಸಮಸ್ಯೆಗಳ ಬಗ್ಗೆ ಯಾರೂ ಸಹ ಗಮನಸೆಳೆಯದಂತಾಗಿದೆ. ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತಾಧಿಕಾರಿಯಾಗಿದ್ದರೂ ಅವರಿಗಿರುವ ಒತ್ತಡದ ನಡುವೆ ಇತ್ತ ಗಮನ ಹರಿಸುವುದಕ್ಕೆ ಪುರುಸೊತ್ತಿಲ್ಲ. ಹೀಗಾಗಿ ನಗರಸಭೆ ಆಡಳಿತ ಸೂತ್ರ ಹರಿದ ಗಾಳಿಪಟದಂತಾಗಿ ದಿಕ್ಕು-ದಿಸೆಯಿಲ್ಲದೆ ಎತ್ತೆತ್ತಲೋ ಹಾರಾಡುತ್ತಿದೆ. ಜನರು ಅದರ ಬಾಲಂಗೋಚಿಯಾಗಿ ಗಿರಕಿ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ.

ಕೆಆರ್ ಎಸ್ ಬೃಂದಾವನದಲ್ಲಿ ಸಂಗೀತ ನೃತ್ಯಕಾರಂಜಿಗೆ ಚಾಲನೆ

ನಗರಸಭೆ ಆಸ್ತಿ ತೆರಿಗೆ ರಸೀದಿ ಕೊಡುವ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಕಳೆದ ಸಾಲಿನಲ್ಲಿ ಹಾಕಿದ್ದ ತೆರಿಗೆ ಹಣಕ್ಕಿಂತ ಈ ಸಾಲಿನಲ್ಲಿ ಗರಿಷ್ಠ ಮಟ್ಟದಲ್ಲಿ ಹಣದ ಹೊರೆ ಬೀಳುತ್ತಿದೆ. ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕಂದಾಯಾಧಿಕಾರಿಯನ್ನು ಸಂಪರ್ಕಿಸಿ ಮತ್ತೊಮ್ಮೆ ಪರಿಶೀಲಿಸಿದರೆ ತೆರಿಗೆ ಹೊರೆ ಕಡಿಮೆಯಾಗುತ್ತಿದೆ. ಎಲ್ಲಿ ದೋಷಗಳಾಗುತ್ತಿದೆ ಎನ್ನುವುದನ್ನು ಪತ್ತೆ ಮಾಡಿ ಕೂಡಲೇ ಸರಿಪಡಿಸುವುದು ಗ್ರಾಹಕರ ದೃಷ್ಟಿಯಿಂದ ಒಳ್ಳೆಯದು ಎಂದು ನಗರಸಭೆ ಮಾಜಿ ಸದಸ್ಯ ಚಂದ್ರಕುಮಾರ ಹೇಳಿದ್ದಾರೆ. 

ಆಸ್ತಿ ತೆರಿಗೆ ನಮೂನೆಯಲ್ಲಿರುವ ಅಳತೆಗೆ ತಕ್ಕಂತೆ ಶುಲ್ಕ ರಸೀದಿ ಬರುತ್ತದೆ. ಏರು-ಪೇರಾಗುವುದಕ್ಕೆ ಸಾಧ್ಯವಿಲ್ಲ. ಆದರೂ ಈ ರೀತಿಯ ದೂರುಗಳಿವೆ ಎಂದಾದರೆ ಈ ಸಂಬಂಧ ಅಧಿಕಾರಿಗಳು, ನೌಕರರೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಲೋಪಗಳು ಎದುರಾಗದಂತೆ ತಡೆಯುತ್ತೇನೆ ಎಂದು ನಗರಸಭೆ ಆಯುಕ್ತ ಆರ್.ಮಂಜುನಾಥ್ ತಿಳಿಸಿದ್ದಾರೆ. 

Follow Us:
Download App:
  • android
  • ios