ಬೆಂಗಳೂರು: ಮತದಾರರ ಮಾಹಿತಿ ಕದ್ದ ಚಿಲುಮೆ ಕಪ್ಪು ಪಟ್ಟಿಗೆ ಸೇರ್ಪಡೆ
ಮತದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮೆ.ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್.
ಬೆಂಗಳೂರು(ಡಿ.28): ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮತದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮೆ.ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಮತ್ತು ಮತದಾರರ ಸಹಾಯವಾಣಿ ಆ್ಯಪ್(ವೋಟರ್ ಹೆಲ್ಪ್‌ಲೈನ್ ಆ್ಯಪ್) ಮೂಲಕ ಆನ್‌ಲೈನ್‌ನಲ್ಲಿ ಆಧಾರ್ ಲಿಂಕ್ ಮಾಡಲು ಹಾಗೂ ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಬಿಬಿಎಂಪಿ ಚಿಲುಮೆ ಸಂಸ್ಥೆಗೆ ಅನುಮತಿ ಪತ್ರ ನೀಡಿತ್ತು. ಅದನ್ನು ಚಿಲುಮೆ ಸಂಸ್ಥೆಯು ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಮೆ.ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಮತದಾನದ ಜಾಗೃತಿಗೆಂದು ಪಾಲಿಕೆ ನೀಡಿದ್ದ ಅನುಮತಿ ಪತ್ರದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ನೈಜ ಬಿಎಲ್‌ಓಗಳೆಂಬ(ಮತಗಟ್ಟೆಮಟ್ಟದ ಅಧಿಕಾರಿ) ಸೋಗು ಹಾಕಿ ಸಾರ್ವಜನಿಕರನ್ನು ಮೋಸಗೊಳಿಸಿರುವುದು ದಾಖಲೆ ಹಾಗೂ ವರದಿಗಳಿಂದ ದೃಢಪಟ್ಟಿದೆ. ಆದ್ದರಿಂದ ಸದರಿ ಸಂಸ್ಥೆಯಾಗಲೀ, ಸಂಸ್ಥೆಯಲ್ಲಿನ ನಿರ್ದೇಶಕರಿಂದ ಅಥವಾ ಸಂಸ್ಥೆಯ ನಿರ್ದೇಶಕರು ಸಹಭಾಗಿಯಾಗಿ ನಡೆಸಲ್ಪಡುತ್ತಿರುವ ಇತರೇ ಯಾವುದೇ ಸಂಸ್ಥೆಗೆ ಪಾಲಿಕೆ ವತಿಯಿಂದ ಉಚಿತ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಪಾಲಿಕೆಯ ಸೇವೆ ಮತ್ತು ಸಂಗ್ರಹ ಗುತ್ತಿಗೆಗಳಲ್ಲಿ ಭಾಗವಹಿಸುವುದು ಹಾಗೂ ಇನ್ನಿತರೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆ ನಿರ್ಬಂಧವನ್ನು ವಿಧಿಸಿ, ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚಿಲುಮೆ ಕೇಸ್‌ನಲ್ಲಿ ಮಾಜಿ ಡೀಸಿಗೆ ಇಲ್ಲ ಬೇಲ್: ಬಂಧನ ಭೀತಿ ಶುರು
ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣ ಸಂಬಂಧ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2023 ಕಾರ್ಯಚಟುವಟಿಕೆಗಳ ಕುರಿತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಸಂಸ್ಥೆಗೆ ಷರತ್ತುಬದ್ಧ ಅನುಮತಿಯನ್ನು ಬಿಬಿಎಂಪಿ ನೀಡಿತ್ತು.
ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಮೆ.ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪ್ರತಿನಿಧಿಗಳು ಮತಗಟ್ಟೆಮಟ್ಟದ ಸಮನ್ವಯ ಅಧಿಕಾರಿ ಎಂದು ನೀಡಲಾಗಿದ್ದ ಗುರುತಿನ ಚೀಟಿಯನ್ನು ಮತಗಟ್ಟೆಮಟ್ಟದ ಅಧಿಕಾರಿ ಎಂದು ತಿದ್ದುಪಡಿ ಮಾಡಿಕೊಂಡಿದ್ದರು. ಅಲ್ಲದೇ ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರೊಂದಿಗೆ ಸಮನ್ವಯ ಸಾಧಿಸಿದೆ ಮನೆ ಮನೆಗೆ ತೆರಳಿ ಕಾರ್ಯ ನಿರ್ವಹಿಸುತ್ತಿದ್ದ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.