ನಿರ್ಮಾಪಕಿ ಪುಷ್ಪಾ ಅವರ ಮೇಲೆ ಹಾಸನದಲ್ಲಿ ಸೈಟ್ ಒತ್ತುವರಿ ಆರೋಪ ಕೇಳಿಬಂದಿದೆ. ವೃದ್ಧೆಯೊಬ್ಬರ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ, ಎರಡೂ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ.
ಹಾಸನ: ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರ ವಿರುದ್ಧ ಸೈಟ್ ಒತ್ತುವರಿ ಆರೋಪದ ಪ್ರಕರಣ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವೃದ್ಧೆ ಲಕ್ಷ್ಮಮ್ಮ ಅವರಿಗೆ ಸೇರಿದ ಸೈಟ್ ಅನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪರಸ್ಪರ ದೂರು–ಪ್ರತಿದೂರುಗಳು ದಾಖಲಾಗಿವೆ. ಪುಷ್ಪಾರ ಪರವಾಗಿ ದುರ್ಗಾಪ್ರಸಾದ್ ಎಂಬುವವರಿಂದ ಬಡಾವಣೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ದುರ್ಗಾಪ್ರಸಾದ್ ಅವರು ಪುಷ್ಪಾರವರ ಮನೆಯ ಕೆಲಸಗಾರರಾಗಿದ್ದು, ಪುಷ್ಪಾರವರು ಪ್ರಸ್ತುತ ಬೆಂಗಳೂರಿನಲ್ಲಿ ಇದ್ದು, ಅವರ ಸೂಚನೆಯಂತೆ ದೂರು ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೇವರಾಜ್ ಅವರಿಂದ ತೆರವು
ವಿದ್ಯಾನಗರದಲ್ಲಿ ಇರುವ ಲಕ್ಷ್ಮಮ್ಮ ಅವರಿಗೆ ಸೇರಿದ ಸೈಟ್‌ಗೆ ಸಂಬಂಧಿಸಿದಂತೆ ಅವರ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಹೋಲ್ಡರ್ ದೇವರಾಜ್ ಅವರು ಭಾನುವಾರ ಬೆಳಗ್ಗೆ ಜೆಸಿಬಿ ಬಳಸಿ ಕಾಂಪೌಂಡ್ ಹಾಗೂ ಶೆಡ್‌ನ್ನು ತೆರವುಗೊಳಿಸಿದ್ದಾರೆ. ಈ ಕ್ರಮದ ವಿರುದ್ಧ ಪುಷ್ಪಾರವರ ಪರವಾಗಿ ದೂರು ದಾಖಲಾಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ದುರ್ಗಾ ಪ್ರಸಾದ್ ನೀಡಿದ ದೂರಿನಲ್ಲಿ, ಪುಷ್ಪಾರವರಿಗೆ ಸೇರಿದ ಆಸ್ತಿಯೊಳಗಿನ ಕಾಂಪೌಂಡ್ ಹಾಗೂ ಶೆಡ್‌ಗಳನ್ನು ದೇವರಾಜ್ ಅವರು ಅಕ್ರಮವಾಗಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ತೆರವು ಕಾರ್ಯವನ್ನು ಪ್ರಶ್ನಿಸಿದ ವೇಳೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೆಸಿಬಿ ಬಳಸಿ ಆಸ್ತಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದು, ದೇವರಾಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಪುಷ್ಪಾರವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕೆಂದೂ ದೂರಿನಲ್ಲಿ ಆಗ್ರಹಿಸಲಾಗಿದೆ.
ಇದಕ್ಕೆ ಪ್ರತಿಯಾಗಿ, ದೇವರಾಜ್ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಸೈಟ್‌ನಲ್ಲಿದ್ದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿರುವ ಲಕ್ಷ್ಮಮ್ಮ ಅವರು ನಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ದೇವರಾಜ್ ವಾದಿಸಿದ್ದಾರೆ.
ಕಾನೂನಿನ ಪ್ರಕಾರ ಪುಷ್ಪಾ ಖರೀದಿ ಎಂದು ವಾದ
ಆದರೆ, ಪುಷ್ಪಾರವರ ಪರವಾಗಿ ಮಾತನಾಡುತ್ತಿರುವವರು, ವಿವಾದಿತ ಆಸ್ತಿಯನ್ನು ಗಿರೀಶ್ ಎಂಬುವವರಿಂದ ಪುಷ್ಪಾರವರು ಕಾನೂನಿನ ಪ್ರಕಾರ ಕ್ರಯಕ್ಕೆ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಆಸ್ತಿಯ ಮಾಲೀಕತ್ವ ನಮ್ಮದೇ ಆಗಿದ್ದು, ಕಾಂಪೌಂಡ್ ಹಾಗೂ ಶೆಡ್ ತೆರವುಗೊಳಿಸಿರುವುದು ಕಾನೂನು ವಿರೋಧಿ ಎಂದು ಪುಷ್ಪಾ ಕಡೆಯವರು ವಾದಿಸುತ್ತಿದ್ದಾರೆ.
ಒಟ್ಟಿನಲ್ಲಿ, ನಟನ ತಾಯಿಯನ್ನು ಒಳಗೊಂಡಿರುವ ಈ ಸೈಟ್ ಒತ್ತುವರಿ ಪ್ರಕರಣದಲ್ಲಿ ಎರಡೂ ಕಡೆಯಿಂದ ಪರಸ್ಪರ ಆರೋಪಗಳು ಮುಂದುವರೆದಿದ್ದು, ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬೀಳಬೇಕಿದೆ. ಪ್ರಕರಣ ಇದೀಗ ಪೊಲೀಸ್ ತನಿಖೆಯ ಹಂತದಲ್ಲಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಪುಷ್ಪ ಅವರ ವಕೀಲ ಸಂಜಯ್, ಅಕ್ರಮವಾಗಿ ಬಂದು ಕಾಂಪೌಂಡ್ ಒಡೆಯಲಾಗಿದೆ. ಕೋರ್ಟ್‌ನಲ್ಲಿ ಇಂತಹ ಯಾವುದೇ ಆದೇಶ ಇಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗಲೇ ಈ ರೀತಿ ಅತಿಕ್ರಮಣ ಮಾಡಿದ್ದಾರೆ ಎಂದು ದೂರಿದ್ದಾರೆ.


