ಬೆಂಗಳೂರು [ಡಿ.20]:  ಮಹಿಳೆಯರ ಮೇಲೆ ಆ್ಯಸಿಡ್‌ ದಾಳಿ ನಡೆಸುವ ಪೈಶಾಚಿಕ ಕೃತ್ಯ ಮತ್ತೆ ರಾಜ್ಯದಲ್ಲಿ ಮರುಕಳಿಸಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬಿಎಂಟಿಸಿ ಮಹಿಳಾ ಕಂಡಕ್ಟರ್‌ ಮೇಲೆ ದುಷ್ಕರ್ಮಿಗಳು ಆ್ಯಸಿಡ್‌ ಎರಚಿ ಪರಾರಿಯಾಗಿರುವ ದಾರುಣ ಘಟನೆ ಬಾಗಲಗುಂಟೆ ಸಮೀಪದ ಹಾವನೂರು ಬಡಾವಣೆಯ ವಿಡಿಯಾ ಬಸ್‌ ನಿಲ್ದಾಣ ಬಳಿ ಗುರುವಾರ ನಡೆದಿದೆ.

ಹಾವನೂರು ಬಡಾವಣೆ ನಿವಾಸಿ ಇಂದಿರಾ ಬಾಯಿ (36) ದಾಳಿಗೆ ತುತ್ತಾಗಿದ್ದು, ಮುಂಜಾನೆ 5.30ರಲ್ಲಿ ಅವರು ಕೆಲಸಕ್ಕೆ ತೆರಳುವಾಗ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಆ್ಯಸಿಡ್‌ ಎರಚಿ ಕಾಲ್ಕಿತ್ತಿದ್ದಾರೆ. ತಕ್ಷಣವೇ ಸ್ಥಳೀಯರು, ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಇಂದಿರಾ ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಭಾಗಶಃ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಶುಶ್ರೂಷೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿರಾ ಅವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರಾಗಿದ್ದು, 18 ವರ್ಷಗಳ ಹಿಂದೆ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)ಯಲ್ಲಿ ಕೆಲಸಕ್ಕೆ ಸೇರಿದ್ದರು. ಚಾಲಕ ಬಾಲಾಜಿ ಅವರನ್ನು ಮದುವೆಯಾಗಿರುವ ಇಂದಿರಾ, ತಮ್ಮ ಪತಿ ಮತ್ತು ಮಕ್ಕಳ ಜತೆ ಹಾವನೂರು ಬಡಾವಣೆಯಲ್ಲಿ ನೆಲೆಸಿದ್ದಾರೆ. ಎಂದಿನಂತೆ ಬೆಳಗ್ಗೆ 5.30 ಗಂಟೆಗೆ ಅವರು ಬಿಎಂಟಿಸಿ ಪೀಣ್ಯ ಡಿಪೋಕ್ಕೆ ಕೆಲಸಕ್ಕೆ ತೆರಳುತ್ತಿದ್ದರು. ಮನೆಯಿಂದ 100 ಮೀಟರ್‌ ಅಂತರದಲ್ಲೇ ಅವರನ್ನು ಹಿಂಬಾಲಿಸಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಇಂದಿರಾ ಮೇಲೆ ಆ್ಯಸಿಡ್‌ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲುಗಳಿಗೆ ಬ್ಯಾಟರಿ ಆ್ಯಸಿಡ್‌ನಷ್ಟೇ ಕ್ರೂರ ಹುಳಿ ಕ್ಯಾಂಡಿಗಳು...

ತಕ್ಷಣವೇ ಗಾಯಾಳುವನ್ನು ಹತ್ತಿರದ ಸಪ್ತಗಿರಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಚಿಕಿತ್ಸೆಗೆ ಇಂದಿರಾ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡನೇ ಬಾರಿ ದಾಳಿ?:  ಬಿಎಂಟಿಸಿ ಕಂಡಕ್ಟರ್‌ ಇಂದಿರಾ ಬಾಯಿ ಮೇಲೆ ಆ್ಯಸಿಡ್‌ ದಾಳಿ ಕೃತ್ಯದಲ್ಲಿ ಅವರ ಪರಿಚಯಸ್ಥರ ಕೈವಾಡದ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

ಆರು ತಿಂಗಳ ಹಿಂದೆ ಸಹ ಕಾರು ಗುದ್ದಿಸಿ ತನ್ನ ಹತ್ಯೆಗೆ ಕೆಲವರು ಯತ್ನಿಸಿದ್ದರು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವೃತ್ತಿ ಮತ್ತು ವೈಯಕ್ತಿಕ ಸೇರಿದಂತೆ ಎಲ್ಲ ಆಯಾಮದಲ್ಲೂ ತನಿಖೆ ನಡೆದಿದೆ. ಇಂದಿರಾ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ವಿಚಾರಣೆ ನಡೆಸಿ ಹೇಳಿಕೆ ಸಹ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.