ಮೃತ ವ್ಯಕ್ತಿ ನಿರ್ಗತಿಕನಾಗಿದ್ದು, ಪ್ರತಿ ದಿನ ರಾತ್ರಿ ಗುಜರಿ ಯಾರ್ಡ್‌ನಲ್ಲಿ ನಿಲ್ಲುವ ವಾಹನಗಳಲ್ಲಿ ಆತ ಮಲಗುತ್ತಿದ್ದ. ಅಂತೆಯೇ ಭದ್ರಾಪ್ಪ ಲೇಔಟ್‌ನಲ್ಲಿ ಅನಾಥವಾಗಿ ನಿಂತಿದ್ದ ಕಾರಿನಲ್ಲಿ ಆತ ನಿದ್ರೆಗೆ ಜಾರಿದ್ದಾಗ ಈ ಅವಘಡ ಸಂಭವಿಸಿದೆ. 

ಬೆಂಗಳೂರು(ಮಾ.30):  ಬಹಳ ದಿನಗಳಿಂದ ರಸ್ತೆ ಬದಿ ನಿಂತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ಅಪರಿಚಿತ ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ದಾರುಣ ಘಟನೆ ಕೊಡಿಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಹಲವು ತಿಂಗಳಿಂದ ಭದ್ರಪ್ಪ ಲೇಔಟ್‌ನಲ್ಲಿ ಅನಾಥವಾಗಿ ನಿಂತಿದ್ದ ಕಾರಿನಲ್ಲಿ ರಾತ್ರಿ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು, ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಭಾಗಶಃ ಅಗ್ನಿಗೆ ಆಹುತಿಯಾಗಿತ್ತು. ಬೆಂಕಿ ನಂದಿಸಿದ ಬಳಿಕ ಕರಕಲಾದ ಕಾರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಕಸ್ಮಿಕ ಬೆಂಕಿ ಅವಘಡ: ಪೊಲೀಸರು ಜಪ್ತಿ ಮಾಡಿದ್ದ 58 ಬೈಕ್‌ ಸುಟ್ಟು ಭಸ್ಮ

ಮೃತ ವ್ಯಕ್ತಿ ನಿರ್ಗತಿಕನಾಗಿದ್ದು, ಪ್ರತಿ ದಿನ ರಾತ್ರಿ ಗುಜರಿ ಯಾರ್ಡ್‌ನಲ್ಲಿ ನಿಲ್ಲುವ ವಾಹನಗಳಲ್ಲಿ ಆತ ಮಲಗುತ್ತಿದ್ದ. ಅಂತೆಯೇ ಭದ್ರಾಪ್ಪ ಲೇಔಟ್‌ನಲ್ಲಿ ಅನಾಥವಾಗಿ ನಿಂತಿದ್ದ ಕಾರಿನಲ್ಲಿ ಆತ ನಿದ್ರೆಗೆ ಜಾರಿದ್ದಾಗ ಈ ಅವಘಡ ಸಂಭವಿಸಿದೆ. ಬಹಳ ದಿನಗಳಿಂದ ವಾರಸುದಾರರಿಲ್ಲದೆ ನಿಲ್ಲಿಸಿದ್ದ ಈ ಕಾರಿನ ಬಗ್ಗೆ ವಿಚಾರಿಸಿದಾಗ ಅದರ ಮೂಲ ಮಾಲಿಕರು ಹಾಸನ ವ್ಯಕ್ತಿ ಎಂಬ ಮಾಹಿತಿ ಸಿಕ್ಕಿತು. ಆದರೆ ನಾಲ್ಕು ವರ್ಷಗಳ ಹಿಂದೆಯೇ ಬೇರೊಬ್ಬರಿಗೆ ಅವರು ಕಾರು ಮಾರಾಟ ಮಾಡಿದ್ದರು. ಹೀಗಾಗಿ ಕಾರಿನ ವಾರಸುದಾರರು ಹಾಗೂ ಮೃತ ವ್ಯಕ್ತಿಯ ಸಂಬಂಧಿಕರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.