ಬೆಂಗಳೂರು(ಅ.01): ಕೋಟ್ಯಂತರ ರು. ಮೌಲ್ಯದ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟನಿವೃತ್ತ ವಿಶೇಷ ತಹಸೀಲ್ದಾರ್‌ ಮತ್ತು ಕಚೇರಿಯ ರೆಕಾರ್ಡ್‌ ರೂಂನ ವಿಷಯ ನಿರ್ವಾಹಕನಿಗೆ ಸೇರಿದ ಮೂರು ಕಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ನಿವೃತ್ತ ತಹಸೀಲ್ದಾರ್‌ ಬಿ.ಆರ್‌.ನಾಗರಾಜ್‌ ಮತ್ತು ಯಲಹಂಕ ತಹಸೀಲ್ದಾರ್‌ ಕಚೇರಿಯ ರೆಕಾರ್ಡ್‌ ರೂಂನ ವಿಷಯ ನಿರ್ವಾಹಕ ಮಂಜುನಾಥ್‌ ಅಲಿಯಾಸ್‌ ವಾಲೇ ಮಂಜ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ನಾಗರಾಜ್‌ ಅವರ ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿನ ವಾಸದ ಮನೆ, ಹಿಂದೆ ಕರ್ತವ್ಯ ನಿರ್ವಹಿಸಿದ ಯಲಹಂಕ ತಹಸೀಲ್ದಾರ್‌ ಕಚೇರಿ ಹಾಗೂ ಮಂಜುನಾಥ್‌ ಅವರ ಯಲಹಂಕ ಸೋಮೇಶ್ವರ ನಗರದಲ್ಲಿನ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಸಿಬಿ ಬಲೆಗೆ ಗೃಹ ರಕ್ಷಕ ದಳದ ಕಮಾಂಡರ್‌, ತೋಟಗಾರಿಕೆ ಡಿಡಿ

ಯಲಹಂಕ ತಾಲೂಕು ಹುಣಸಮಾರನಹಳ್ಳಿ ಗ್ರಾಮದಲ್ಲಿ ಕೋಟ್ಯಂತರ ರು. ಮೌಲ್ಯದ 4 ಎಕರೆ ಸರ್ಕಾರಿ ಜಮೀನನ್ನು ಕಾನೂನು ಬಾಹಿತವಾಗಿ ಖಾಸಗಿಯವರಿಗೆ ಪರಭಾರೆ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
ನಾಗರಾಜ್‌, ಮಂಜುನಾಥ್‌ ಮತ್ತು ದ್ವೀತಿಯ ದರ್ಜೆ ಸಹಾಯಕಿ ಶಾಂತಮ್ಮ, ಭೂಮಿ ಕೇಂದ್ರದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಭೂಮಿ ಆಪರೇಟರ್‌ ಉಷಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.