ಧಾರವಾಡ(ಮಾ.31): ಸರ್ಕಾರಿ ಶಾಲೆಗೆ ಪೇವರ್ಸ್‌ ಅಳವಡಿಸುವ ಕಾಮಗಾರಿಗೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಪಿಡಿಒ ಮಹಮ್ಮದ ಯೂಸುಫ್‌ ಅಬ್ದುಲ್‌ ಮುಜೀಬ ಚಕ್ಕೋಲಿ ಎಸಿಬಿ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಗ್ರಾಮದ ಶಿವಾಜಿ ಮಹದೇವಪ್ಪ ಆರೇರ ಅವರಿಂದ ಒಟ್ಟು 10,200 ಲಂಚ ಸ್ವೀಕರಿಸುವಾಗ ಪಿಡಿಒ ಎಸಿಬಿ ದಾಳಿಗೆ ಒಳಗಾಗಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪೇವರ್ಸ್‌ ಅಳವಡಿಸುವ ಕಾಮಗಾರಿಯನ್ನು ಶಿವಾಜಿ ನಿರ್ವಹಿಸಿದ್ದರು. ಈ ಕಾಮಗಾರಿಯ ಒಟ್ಟು 5.14 ಲಕ್ಷ ಬಿಲ್‌ ಮಂಜೂರಾತಿ ಕುರಿತು ಫಾರಂ ನಂಬರ್‌-16 ತುಂಬಿ, ಸಹಿ ಮಾಡಿ ಜಿಪಂನ ಪಂಚಾಯತ್‌ ರಾಜ್‌ ಎಂಜನೀಯರಿಂಗ್‌ ವಿಭಾಗಕ್ಕೆ ಕಳುಹಿಸಿಕೊಟ್ಟಿದ್ದಕ್ಕೆ 25 ಸಾವಿರ ಲಂಚವನ್ನು ಪಿಡಿಒ ಬೇಡಿಕೆ ಇಟ್ಟಿದ್ದರು. ಕೊನೆಗೆ 10 ಸಾವಿರಕ್ಕೆ ಒಪ್ಪಿಕೊಂಡಿದ್ದ ಪಿಡಿಒ ವಿರುದ್ಧ ಎಸಿಬಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 

ವಂಚಿತನಿಗೆ ವಂಚಕನ ಪಟ್ಟ ಕಟ್ಟುವ ಸೈಬರ್‌ ಕಳ್ಳರು..!

ಈ ದೂರಿನ ಅನ್ವಯ 10200 ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಮೇಲೆ ಎಸಿಬಿ ದಾಳಿ ಮಾಡಿ, ಬಲೆಗೆ ಬೀಳಿಸಿದೆ. ಈ ಕುರಿತಂತೆ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆ ತಂಡದ ನೇತೃತ್ವವನ್ನು ತನಿಖಾಧಿಕಾರಿ ಮಂಜುನಾಥ ಹಿರೇಮಠ ನಿರ್ವಹಿಸಿದರೆ, ಸಿಬ್ಬಂದಿಗಳಾದ ಬಿ.ಎ. ಜಾಧವ, ಜಿ.ಎಸ್‌. ಮನಸೂರ, ಎಸ್‌.ಎಸ್‌. ಕಾಜಗಾರ, ಎಸ್‌.ಐ. ಬೀಳಗಿ, ಶಿವಾನಂದ ಕೆಲವೆಡಿ, ಲೋಕೇಶ ಬೆಂಡಿಕಾಯಿ, ಕಾರ್ತಿಕ ಹುಯಿಲಗೋಳ, ಆರ್‌. ಬಿ. ಯರಗಟ್ಟಿ, ಎಸ್‌.ಎಸ್‌. ನರಗುಂದ, ಎಸ್‌. ವೀರೇಶ ಮತ್ತು ಗಣೇಶ ಶಿರಹಟ್ಟಿ ಕಾರ್ಯಾಚರಣೆಯಲ್ಲಿದ್ದರು.