ಹುಬ್ಬಳ್ಳಿ(ಮಾ.29): ಸೈಬರ್‌ ಅಪರಾಧದಲ್ಲಿ ವಂಚನೆಗೆ ಒಳಗಾದವರನ್ನೇ ಆರೋಪಿಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಈಚೆಗೆ ಪೊಲೀಸ್‌ ಬಲೆಗೆ ಬಿದ್ದಿರುವ ಸೈಬರ್‌ ಕ್ರೈಂ ಜಾಲವೊಂದರಿಂದ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ತೊಡಗುತ್ತಿದ್ದುದು ಸ್ಥಳೀಯರು ಎಂಬ ವಿಚಾರವೂ ಹುಬ್ಬೇರಿಸುವಂತಿದೆ. ಹೌದು, ಈ ಪ್ರಕರಣದಲ್ಲಿ ಧಾರವಾಡದ ಉದ್ಯಮಿ, ಉಪನ್ಯಾಸಕ ದ್ಯಾಮನಗೌಡ ಪಾಟೀಲ ಹುಬ್ಬಳ್ಳಿ ಸೈಬರ್‌ ಸ್ಟೇಷನ್‌ನಲ್ಲಿ ವಂಚನೆಗೆ ಒಳಗಾಗಿರುವ ಸ್ಥಾನದಲ್ಲಿದ್ದರೆ, ಮೈಸೂರು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಇವರ ವಿರುದ್ಧವೆ ವಂಚನೆ ಪ್ರಕರಣ ದಾಖಲಾಗಿದೆ!

ಏನಿದು ಪ್ರಕರಣ?

‘ಕನ್ನಡಪ್ರಭ’ದ ಜತೆ ಮಾತನಾಡಿದ ದ್ಯಾಮನಗೌಡ ‘ಸ್ವ ಉದ್ಯೋಗಕ್ಕೆ ಪಿಎಂಕೆವಿವೈ ಅಡಿ 25 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಲು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದೆ. ಈ ವೇಳೆ ಅಲ್ಲಿ ಪರಿಚಿತನಾದ ವ್ಯಕ್ತಿ ಸಹಾಯ ಮಾಡುವುದಾಗಿ ಹೇಳಿ ದಾಖಲೆಗಳನ್ನು ಪಡೆದಿದ್ದ. ಮೂರು ದಿನಗಳ ಬಳಿಕ ಕರೆ ಮಾಡಿ ಸಾಲ ಮಂಜೂರಾಗಿದೆ. ಅದಕ್ಕೆ ತೆರಿಗೆ ಶುಲ್ಕವೆಂದು 40 ಸಾವಿರ ನೀಡುವಂತೆ ಕೇಳಿದ್ದಾನೆ’.

ಕಡಿಮೆ ಬೆಲೆಗೆ ಗ್ಲೌಸ್‌ ನೀಡುವುದಾಗಿ 45 ಲಕ್ಷ ದೋಚಿದ ಸೈಬರ್‌ ಕಳ್ಳರು

‘ಅಷ್ಟೆಲ್ಲ ಹಣ ಕೊಡಲು ಸಾಧ್ಯವಿಲ್ಲ ಎಂದಾಗ ಹಂತ ಹಂತವಾಗಿ 30,100 ಫೋನ್‌ಪೇ ಮೂಲಕ ಪಡೆದಿದ್ದಾನೆ. ಪುನಃ ಕರೆ ಮಾಡಿ, ಸಾಲದ ಹಣ ನಿಮ್ಮ ಖಾತೆಗೆ ಕ್ರೆಡಿಟ್‌ ಆಗಲಿದೆ. ಅದಕ್ಕಾಗಿ ಲೀಗಲ್‌ ಒಪಿನಿಯನ್‌ ಪಡೆದುಕೊಳ್ಳಲು ನಿಮ್ಮ ಎಟಿಎಂ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ಕಳಿಸಿ ಎಂದಿದ್ದಾರೆ. ಇದಕ್ಕೂ ನಾನು ಆಕ್ಷೇಪಿಸಿದೆ. ಆದರೆ, ಖಾತೆಯಲ್ಲಿ ಝಿರೊ ಬ್ಯಾಲೆನ್ಸ್‌ ಮಾಡಿಕೊಡಿ ಎಂದು ತಿಳಿಸಿದರು. ಶೀಘ್ರ ಕಳಿಸುವಂತೆ ಕೋರಿದ್ದರಿಂದ ಬಸ್ಸಿನಲ್ಲಿ ಎಟಿಎಂ, ಪಾಸ್‌ಬುಕ್‌ ಕಳಿಸಿದೆ’.

ಅದಾದ ಒಂದೆರಡು ದಿನಗಳಲ್ಲಿ, ಖಾತೆಗೆ 16 ಸಾವಿರ ಜಮೆ ಆಗಿದೆ. ಸಾಲದ ಮೊತ್ತ ಸ್ವಲ್ಪ ಜಮೆ ಆಗಿರಬಹುದು ಎಂದು ಸುಮ್ಮನಾದೆ. ಆದರೆ ವಂಚಕ ಪುನಃ ಕರೆ ಮಾಡಿ ಎಟಿಎಂ ಕಾರ್ಡ್‌ ಪಾಸ್‌ವರ್ಡ್‌ ಕೇಳಿದ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಈ ಘಟನೆಯಾದ ನಾಲ್ಕೈದು ದಿನಗಳ ಬಳಿಕ ಮೈಸೂರು ಸೈಬರ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನನಗೆ ಕರೆ ಮಾಡಿ, ವಂಚನೆ ಪ್ರಕರಣದ ಕುರಿತು ನನ್ನ ವಿರುದ್ಧವೆ ದೂರೊಂದು ಬಂದಿದೆ ಎಂದು ತಿಳಿಸಿದರು. ಗಾ​ಬರಿಗೊಂಡು ಇದರ ಬಗ್ಗೆ ವಿಚಾರಿಸಿದಾಗ ಮೈಸೂರಿನ ವ್ಯಕ್ತಿ ವಂಚಕರ ಕರೆ ನಂಬಿ ನನ್ನ ಇಂಡಸ್‌ ಬ್ಯಾಂಕ್‌ ಖಾತೆಗೆ .16 ಸಾವಿರ ವರ್ಗಾವಣೆ ಮಾಡಿದ್ದು ಗೊತ್ತಾಯಿತು. ಅವರೆ ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಯಿತು.

ಇದಾದ ಬಳಿಕ ಪೊಲೀಸರ ಸಲಹೆಯಂತೆ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ನನ್ನಿಂದ ಬ್ಯಾಂಕ್‌ ಮಾಹಿತಿ ಪಡೆದ ವಂಚಕ, ನನ್ನ ಖಾತೆ ನಂಬರ್‌ ಬೇರೆಯವರಿಗೆ ನೀಡಿ ಅದಕ್ಕೆ ಹಣ ವರ್ಗಾಯಿಸಿಕೊಂಡು ನನ್ನನ್ನೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿದ್ದು ತಿಳಿದುಬಂದಿದೆ. ಬಳಿಕ ಎಟಿಎಂ ಕಾರ್ಡ್‌ ಬ್ಲಾಕ್‌ ಮಾಡಿಸಿದ್ದೇನೆ.

ಇಷ್ಟಾದ ಬಳಿಕವೂ ಕಂಪನಿ ಕೇಳಿದಷ್ಟು ಹಣವನ್ನು ಕಟ್ಟಿಲ್ಲ. ಈಗ ಮೈಸೂರಿನಲ್ಲಿ ಪ್ರಕರಣ ದಾಖಲಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟುಕಡೆಗಳಲ್ಲಿ ನಿನ್ನ ವಿರುದ್ಧ ದೂರು ದಾಖಲಾಗುವಂತೆ ಮಾಡಿ ಕೋರ್ಟಿಗೆ ಅಲೆಸುತ್ತೇವೆ ಎಂದು ವಂಚಕರು ಹೆದರಿಸುತ್ತಿದ್ದರು’ ಎಂದು ದ್ಯಾಮನಗೌಡ ತಿಳಿಸಿದರು.

ಮೂವರ ಬಂಧ​ನ

ಪ್ರಕರಣ ಬೆನ್ನತ್ತಿದ ಹುಬ್ಬಳ್ಳಿ ಪೊಲೀಸರು ಹಳೆ ಹುಬ್ಬಳ್ಳಿಯ ಬಸವರಾಜ ಲಮಾಣಿ, ಸಹಚರರಾದ ಮಹಾಂತೇಶ ಚವ್ಹಾಣ, ಅರ್ಜುನ ಲಮಾಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 2 ಲ್ಯಾಪ್‌ಟಾಪ್‌, 7 ಸ್ಮಾರ್ಟ್‌ ಫೋನ್‌, 8 ಕೀ ಪ್ಯಾಡ್‌ ಮೊಬೈಲ್‌, ಚಿನ್ನಾಭರಣ, 1.57 ಲಕ್ಷ ನಗದು ಸೇರಿ ಒಟ್ಟು 4,97,500 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.