ಬೆಂಗಳೂರು(ಫೆ.09):  ಇತ್ತೀಚೆಗೆ ಖಾಸಗಿ ಕಂಪನಿಯ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ(ಓಸಿ) ನೀಡಲು 20 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ ಬೊಮ್ಮನಹಳ್ಳಿ ಬಿಬಿಎಂಪಿ ಯೋಜನಾ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆಯಲ್ಲಿ ‘ಮದ್ಯ ಖಜಾನೆ ಹಾಗೂ ಕಡತಗಳ ರಾಶಿ’ ಬಯಲಾಗಿದೆ.

ಲಂಚ ಪ್ರಕರಣದಲ್ಲಿ ಬಂಧನ ಬಳಿಕ ಕೋಡಿಗೆಹಳ್ಳಿಯಲ್ಲಿರುವ ದೇವೇಂದ್ರಪ್ಪ ಮನೆಯನ್ನು ಶೋಧಿಸಲಾಯಿತು. ಈ ದಾಳಿ ವೇಳೆ 10ಕ್ಕೂ ಹೆಚ್ಚಿನ ಬ್ಯಾಂಕ್‌ ಖಾತೆಗಳು, ಎಫ್‌ಡಿ ನಗದು, ಸುಮಾರು 120 ಲೀಟರ್‌ ಮದ್ಯದ ಬಾಟಲ್‌ಗಳು, ಬಿಬಿಎಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ ಸುಮಾರು 430ಕ್ಕೂ ಹೆಚ್ಚು ಕಡತಗಳು, ಬಿಬಿಎಂಪಿಯ ಮುಖ್ಯ ಅಭಿಯಂತರ, ಕಾರ್ಯನಿರ್ವಾಹಕ ಅಭಿಯಂತರ, ಸಹಾಯಕ ಅಭಿಯಂತರ ಹಾಗೂ ಜಂಟಿ ಆಯುಕ್ತರ ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ಹೆಸರಿನ ಸೀಲುಗಳು ಹಾಗೂ ಕಚೇರಿ ಸೀಲುಗಳು ಪತ್ತೆಯಾಗಿವೆ. ಹಾಗೆಯೇ ಆರೋಪಿ ಬಳಿ ಫಾರ್ಚೂನರ್‌ ಸೇರಿದಂತೆ ದುಬಾರಿ ಮೌಲ್ಯದ ಕಾರುಗಳು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಎಸ್ಪಿ ಕುಲದೀಪ್‌ ಕುಮಾರ್‌ ಜೈನ್‌ ಮಾಹಿತಿ ನೀಡಿದ್ದಾರೆ.

ಆರೋಪಿ ಬಳಿ ಲಭಿಸಿರುವ ಬೆಲೆ ಬಾಳುವ ಕಾರುಗಳು, ಬ್ಯಾಂಕ್‌ ಖಾತೆಗಳು, ಎಫ್‌ಡಿ ಹಾಗೂ ಹಣದ ಕುರಿತಂತೆ ಪ್ರತ್ಯೇಕ ತನಿಖೆ ಕೈಗೊಳ್ಳಲಾಗಿದೆ. ಅಲ್ಲದೆ ಮದ್ಯದ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿ ಮತ್ತು ಕಚೇರಿಯ ಸೀಲುಗಳ ಕುರಿತು ಬಿಬಿಎಂಪಿ ವಿಚಾರಣೆ ನಡೆಸಲಿದೆ ಎಂದು ಎಸ್ಪಿ ಹೇಳಿದ್ದಾರೆ.

ಎಸಿಬಿ ಬಲೆಗೆ ಬಿದ್ದ ಟೌನ್‌ ಪ್ಲಾನಿಂಗ್ ಅಧಿಕಾರಿ; ಕಂತೆ ಕಂತೆ ಹಣ

2009ರಲ್ಲಿ ಬಿಬಿಎಂಪಿ ಸೇವೆಗೆ ದೇವೇಂದ್ರಪ್ಪ ಸೇರಿದ್ದು, ವಿವಿಧೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಶಂಕೆ ಇದೆ. ಈವರೆಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಆರೋಪಿ ಮನೆ ದಾಳಿ ವೇಳೆ ಪತ್ತೆಯಾದ ಕಡತಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

ಏನಿದು ಪ್ರಕರಣ?

ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ನಗರ ಯೋಜನೆ ಕಚೇರಿಯಲ್ಲಿ ನಕ್ಷೆ ಮಂಜೂರಾತಿ ಪಡೆದು ಹುಳಿಮಾವು ಸಮೀಪ ಕಟ್ಟಡವನ್ನು ಸಿಗ್ಮೀಸ್‌ ಬ್ರಿವರೀಸ್‌ ಕಂಪನಿ ನಿರ್ಮಿಸಿತ್ತು. ಬಳಿಕ ಪೂರ್ಣಗೊಂಡ ಕಟ್ಟಡದ ಕಾಮಗಾರಿಗೆ ಓಸಿ (ನಿರಪೇಕ್ಷಣಾ ಪ್ರಮಾಣ ಪತ್ರ) ಅನ್ನು ಪಡೆಯಬೇಕಿದ್ದುದರಿಂದ ಮತ್ತೆ ನಗರ ಯೋಜನೆ ಕಚೇರಿ (ಎಡಿಟಿಪಿ)ಗೆ ಆ ಕಂಪನಿ ವ್ಯವಸ್ಥಾಪಕರು ಅರ್ಜಿ ಸಲ್ಲಿಸಿದ್ದರು. ಆಗ ಎಡಿಟಿಪಿ ದೇವೇಂದ್ರಪ್ಪ ಅವರು, ಓಸಿ ನೀಡಲು 40 ಲಕ್ಷ ಲಂಚದ ಹಣಕ್ಕಾಗಿ ಒತ್ತಾಯಿಸಿದ್ದರು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಗ್ಮೀಸ್‌ ಬ್ರಿವರೀಸ್‌ ಕಂಪನಿ ದೂರು ಸಲ್ಲಿಸಿದೆ. ಅಂತೆಯೇ ಕಂಪನಿಯ ವ್ಯವಸ್ಥಾಪಕರಿಂದ ಆರೋಪಿ ಫೆ.5 ರಂದು ಮೆಜೆಸ್ಟಿಕ್‌ ಸಮೀಪ 27.40 ಲಕ್ಷ ಲಂಚ ಹಣವನ್ನು ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಹಠಾತ್‌ ಕಾರ್ಯಾಚರಣೆ ನಡೆಸಿ ಎಸಿಬಿ ಬಂಧಿಸಿತ್ತು.

ಕಚೇರಿಯಿಂದ ಹೊರಗೆ ಕಡತ ತೆಗೆದುಕೊಂಡು ಹೋದ್ರೆ ಕೇಸ್‌

ಬಿಬಿಎಂಪಿ ಕಡ​ತ​ಗ​ಳನ್ನು ಕಚೇ​ರಿ​ಯಿಂದ ಹೊರಕ್ಕೆ ತೆಗೆ​ದು​ಕೊಂಡು ಹೋದರೆ ಕ್ರಿಮಿ​ನಲ್‌ ಕೇಸ್‌ ದಾಖ​ಲಿ​ಸ​ಲಾ​ಗು​ವುದು ಎಂದು ಬಿಬಿ​ಎಂಪಿ ಆಯಕ್ತ ಎನ್‌. ಮಂಜು​ನಾಥ್‌ ಪ್ರಸಾದ್‌ ಅವರು ಪಾಲಿಕೆ ಸಿಬ್ಬಂದಿಗೆ ಎಚ್ಚ​ರಿಕೆ ನೀಡಿ​ದ್ದಾರೆ.
ಪಾಲಿ​ಕೆಯ ಆಡ​ಳಿ​ತ ಹಾಗೂ ವ್ಯವ​ಹಾ​ರಕ್ಕೆ ಸಂಬಂಧಿ​ಸಿದ ಯಾವುದೇ ಕಡ​ತ​ಗ​ಳನ್ನು ಪಾಲಿ​ಕೆಯ ಅಧಿ​ಕಾ​ರಿ​ಗಳು ಅಥವಾ ಸಿಬ್ಬಂದಿ ಅವರ ಮನೆಗೆ ಅಥವಾ ಅನ್ಯ ಸ್ಥಳಕ್ಕೆ ತೆಗೆ​ದು​ಕೊಂಡು ಹೋಗು​ವಂತಿಲ್ಲ. ಇಂತಹ ಪ್ರಕ​ರ​ಣ​ಗ​ಳ​ನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸ​ಲಾ​ಗು​ವು​ದು ಎಂದು ತಿಳಿಸಿದ್ದಾರೆ.

ಬೊಮ್ಮ​ನ​ಹಳ್ಳಿ ವಲ​ಯದ ಪಾಲಿ​ಕೆಯ ಸಹಾ​ಯಕ ನಿರ್ದೇ​ಶಕ (ಯೋ​ಜ​ನೆ) ದೇವೇಂದ್ರಪ್ಪ ಅವರ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಎಸಿಬಿ ತನಿಖೆ ನಡೆ​ಸು​ತ್ತಿದ್ದು, ತನಿಖಾ ವರ​ದಿಯ ಆಧಾ​ರದ ಮೇಲೆ ಮುಂದೆ ಪಾಲಿ​ಕೆ​ಯಿಂದಲೂ ಕ್ರಿಮಿ​ನಲ್‌ ಪ್ರಕ​ರಣ ದಾಖ​ಲಿ​ಸ​ಲಾ​ಗು​ವುದು. ಕಡ​ತ​ಗಳನ್ನು ಪಾಲಿ​ಕೆಯ ಕಚೇ​ರಿ​ಯಿಂದ ಹೊರಕ್ಕೆ ತೆಗೆ​ದು​ಕೊಂಡು ಹೋಗು​ವು​ದನ್ನು ಗಂಭೀ​ರವಾಗಿ ಪರಿ​ಗ​ಣಿ​ಸಿ ಕ್ರಮ ತೆಗೆ​ದು​ಕೊ​ಳ್ಳ​ಲಾ​ಗು​ವುದು ಎಂದು ಹೇಳಿದ್ದಾರೆ.