ಮಂಗಳೂರು: ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಡಕ್ಕೆ ವೈದ್ಯಾಧಿಕಾರಿಗೆ ಗರ್ಭಪಾತ: ಪೊಲೀಸ್‌ಗೆ ದೂರು
ಗ್ರಾಮಸಭೆಯಲ್ಲಿ ಗ್ರಾಮಸ್ಥರ ಮಾನಸಿಕ ಒತ್ತಡದಿಂದ ತೀವ್ರ ಮಾನಸಿಕ ಹಿಂಸೆಗೆ ಒಳಗಾದ ವೈದ್ಯಾಧಿಕಾರಿಯೊಬ್ಬರಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪೊಲೀಸ್ ದೂರು ನೀಡಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಆ.14): ಗ್ರಾಮಸಭೆಯಲ್ಲಿ ಗ್ರಾಮಸ್ಥರ ಮಾನಸಿಕ ಒತ್ತಡದಿಂದ ತೀವ್ರ ಮಾನಸಿಕ ಹಿಂಸೆಗೆ ಒಳಗಾದ ವೈದ್ಯಾಧಿಕಾರಿಯೊಬ್ಬರಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪೊಲೀಸ್ ದೂರು ನೀಡಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾ.ಪಂ ಗ್ರಾಮಸಭೆಯಲ್ಲಿ ಘಟನೆ ನಡೆದಿದ್ದು, ಗ್ರಾಮಸಭೆಯಲ್ಲಿ ವೈದ್ಯಾಧಿಕಾರಿಗೆ ಮಾನಸಿಕ ಒತ್ತಡ ಮತ್ತು ಹಿಂಸೆ ಆರೋಪಿಸಿ ದೂರು ನೀಡಲಾಗಿದೆ. ಕಡಬ ತಾಲೂಕಿನ ನೆಲ್ಯಾಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರಾಗೆ ಗರ್ಭಪಾತವಾಗಿದೆ. ಅ.9ರಂದು ಗೋಳಿತೊಟ್ಟು ಗ್ರಾ.ಪಂ ಗ್ರಾಮ ಸಭೆ ನಡೆದಿತ್ತು. ಈ ಗ್ರಾಮ ಸಭೆಯಲ್ಲಿ ಡೀಕಯ್ಯ ಪೂಜಾರಿ ಮತ್ತು ಗಣೇಶ್ ಡಾ.ಶಿಶಿರಾಗೆ ತರಾಟೆಗೆತ್ತಿಕೊಂಡಿದ್ದರು.
ವಿದ್ಯಾರ್ಥಿನಿಯೊಬ್ಬಳು ಡಾ.ಶಿಶಿರಾ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಳು ಅಂತ ದೂರಿದ್ದರು. ಈ ವೇಳೆ ಉತ್ತರಿಸುತ್ತಲೇ ತೀವ್ರ ಒತ್ತಡಕ್ಕೆ ಒಳಗಾದ ಡಾ.ಶಿಶಿರಾ ಕುಸಿದು ಬಿದ್ದಿದ್ದರು. ಬಳಿಕ ಅವರನ್ನ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಗರ್ಭಪಾತವಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೀತಿರೋ ಡಾ.ಶಿಶಿರಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಗ್ರಾಮಸ್ಥರಾದ ಡೀಕಯ್ಯ ಪೂಜಾರಿ ಮತ್ತು ಗಣೇಶ್ ವಿರುದ್ದ ಪೊಲೀಸ್ ದೂರು ನೀಡಲಾಗಿದೆ. ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ ದ.ಕ ಜಿಲ್ಲಾ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ಸೌಜನ್ಯ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಕೊರಗಜ್ಜನ ಕ್ಷೇತ್ರಕ್ಕೆ ನಡಿಗೆ
ಗೋಳಿತೊಟ್ಟು ಗ್ರಾಮಸಭೆಯಲ್ಲಿ ನಡೆದಿದ್ದೇನು?: ಗೋಳಿತೊಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಆ.9ರಂದು ಗ್ರಾಮ ಸಭೆ ನಡೆದಿತ್ತು. ಗ್ರಾಮದ ಮಮತಾ ಎಂಬ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದವರು ಅಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಕಾರಣ ಏನು ಎಂದು ಗ್ರಾಮಸ್ಥರು ಡಾ.ಶಿಶಿರಾರನ್ನು ಪ್ರಶ್ನಿಸಿದರಲ್ಲದೇ ನೀವಿಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದರು.
ವೈದ್ಯಾಧಿಕಾರಿ ಉತ್ತರಿಸಿ, ಮಮತಾ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿತ್ತು. ತತ್‌ಕ್ಷಣವೇ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದೇನೆ. ಆ ಸಮಯಕ್ಕೆ ಆ್ಯಂಬುಲೆನ್ಸ್ ಇಲ್ಲಿರಲಿಲ್ಲ. 20 ನಿಮಿಷಗಳ ಅವಧಿಯಲ್ಲಿ ನಾನು ಆ ಹುಡುಗಿಗೆ ತತ್‌ಕ್ಷಣಕ್ಕೆ ಬೇಕಾದ ತುರ್ತು ಚಿಕಿತ್ಸೆ ನೀಡಿದ್ದೇನೆ. ಬಳಿಕ ಆಕ್ಸಿಜನ್ ಇದ್ದ ಆ್ಯಂಬುಲೆನ್ಸ್‌ನಲ್ಲಿ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ನನಗೆ ಬಂದಿದೆ. ಆಕೆ 2-3 ತಿಂಗಳ ಹಿಂದೆಯೇ ಅನಾರೋಗ್ಯದಿಂದಿದ್ದಳು.
ಸಿದ್ದರಾಮಯ್ಯ ಸರ್ಕಾರ ಮೋಸಗಾರರ ಸರ್ಕಾರ: ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ
ಇದರಿಂದಾಗಿ ಆಕೆ ಕಾಲೇಜಿಗೂ ರಜೆಯನ್ನು ಹಾಕಿದ್ದಳು ಎಂದು ತಿಳಿಸಿದ್ದರು. ಆದರೂ ಇದಕ್ಕೆ ತೃಪ್ತಿಗೊಳ್ಳದ ಗ್ರಾಮಸ್ಥ, ಆಕೆಯ ಸಾವಿನ ಕಾರಣ ನಮಗೆ ಬೇಕು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕೂಡ ಮಾಡಿಲ್ಲ. ಬಡವರೆಂದು ಈ ರೀತಿ ಮಾಡಿದ್ದೋ? ಎಂದು ಪ್ರಶ್ನೆಗಳ ಸುರಿಮಳೆಗೈದರು. ಸಮರ್ಪಕ ಉತ್ತರ ನೀಡುತ್ತಿದ್ದರೂ ತೃಪ್ತರಾಗದ ಗ್ರಾಮಸ್ಥರ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಿದ್ದಂತೆ ವಿಚಲಿತರಾದ ವೈದ್ಯಾಧಿಕಾರಿ ಟೇಬಲ್‌ನಲ್ಲಿದ್ದ ನೀರು ಕುಡಿದು, ಗ್ರಾ.ಪಂ. ಕಚೇರಿಯ ಕೊಠಡಿಯೊಳಗೆ ಹೋಗಿ ಅಲ್ಲಿ ಕುಸಿದು ಬಿದ್ದರು. ಚಿಕಿತ್ಸೆಗಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ, ಬಳಿಕ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.