ಮಂಗಳೂರು(ಫೆ.05): ಧರ್ಮಸ್ಥಳದ ಭಗವಾನ್‌ ಶ್ರೀಬಾಹುಬಲಿ ಮೂರ್ತಿಯ ಚತುರ್ಥ ಮಹಾ ಮಜ್ಜನದ ಐದನೇ ಮತ್ತು ಮಾಘ ಶುದ್ಧ ಅಷ್ಟಮಿಯ ದಿನವಾದ ಬುಧವಾರ ರತ್ನಗಿರಿಯಲ್ಲಿ ಪ್ರಾತಃಕಾಲ ಗಂಟೆ 8 ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ ನಡೆಯಿತು. 216 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ರಿಂದ ಯಜ್ಞಶಾಲೆಯಲ್ಲಿ ಜಿನ ಸಹಸ್ರನಾಮ ವಿಧಾನ, ಸಂಜೆ ಧ್ವಜಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿ ನಡೆಯಿತು.

ಸಂಜೆ 7 ಗಂಟೆಯಿಂದ ನಾದ ವೈವಿಧ್ಯ ಪ್ರಸ್ತುತಗೊಂಡಿತು. ಈ ಕಾರ್ಯಕ್ರಮದಲ್ಲಿ ಕದ್ರಿ ಗೋಪಾಲನಾಥ್‌ ಅವರ ಸ್ಯಾಕ್ಸೋಫೋನ್‌ ಹಾಗೂ ಪ್ರವೀಣ್‌ ಗೋಡ್ಕಿಂಡಿ ಅವರಿಂದ ಬಾನ್ಸುರಿ ಜುಗಲ್‌ಬಂದಿ ಅಪಾರ ಜನಸ್ತೋಮವನ್ನು ಆಕರ್ಷಿಸಿತು.

ರಾಜಬೀದಿಯಲ್ಲಿ ಸಾಗಿದ ರಥಯಾತ್ರೆ:

ಪಂಚಮಮಹಾ ವೈಭವದಲ್ಲಿ ಅಯೋಧ್ಯಾಧಿಪತಿ ಭರತ ಚಕ್ರವರ್ತಿಯ ದಿಗ್ವಿಜಯ ಯಾತ್ರೆ ನಡೆಯಿತು. ಅಯೋಧ್ಯೆಯ ಸರ್ವೋಭದ್ರ ಅರಮನೆಯಿಂದ ಹೊರಟ ಭರತ ಚಕ್ರವರ್ತಿಯ ದಿಗ್ವಿಜಯ ಯಾತ್ರೆ ಧರ್ಮಸ್ಥಳ ರಾಜಬೀದಿಯಲ್ಲಿ ಸಾಗಿತು. ಸುಮಾರು ಎರಡು ಕಿ.ಮೀ. ದೂರದ ಶಾಂತಿವನವರೆಗೆ ಸಾಗಿತು.

ಅದ್ಧೂರಿಯಿಂದ ನಡೆದ ದಿಗ್ವಿಜಯ ಯಾತ್ರೆಯಲ್ಲಿ ನಾನಾ ಬಿರುದಾವಳಿಗಳು, ಯುದ್ಧ ತಾಲೀಮು ನಡೆಸುತ್ತಿರುವ ಸೈನಿಕರು, ಮಹಿಳಾ ಸೈನ್ಯ, ಗೆರಿಲ್ಲಾ ಸೈನಿಕರು, ಈಟಿ ಭರ್ಚಿ ಹಿಡಿದ ಭಟರು, ಭರತನ ಆಸ್ಥಾನದ ಸಂಸ್ಕೃತಿಯನ್ನು ಸಾರುವ ಸಾಂಸ್ಕೃತಿಕ ಹೆಗ್ಗುರುತಿನ ತಂಡಗಳು ದಿಗ್ವಿಜಯ ಯಾತ್ರೆಗೆ ಆರಂಭಿಕ ಮೆರುಗನ್ನು ಹೆಚ್ಚಿಸಿದವು.

'ಮಂಗ್ಳೂರು ಗೋಲಿಬಾರ್ ಸಂಬಂಧ ಬಂದ ದೂರುಗಳೆಷ್ಟು..'?

ದಿಗ್ವಿಜಯ ಯಾತ್ರೆಯನ್ನು ಡಾ.ಹೆಗ್ಗಡೆ ಕುಟುಂಬ, ದಿಗಂಬರ ಮುನಿಗಳು, ಆರ್ಯಿಕಾ ಮಾತಾಜಿಗಳು, ಅಸಂಖ್ಯ ಶ್ರಾವಕ, ಶ್ರಾವಕಿಯರು, ಮಾಣಿಲ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಹೊಂಬುಜ ಶ್ರೀದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ವೀಕ್ಷಿಸಿದರು.

ವಿಶೇಷ ವಸ್ತು ಪ್ರದರ್ಶನ:

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಜನರಿಗೆ ಮಾಹಿತಿ-ಮಾರ್ಗದರ್ಶನ ನೀಡುವ ಉದ್ದೇಶದಿಂದ ವಿಶೇಷ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದು ಭಕ್ತರನ್ನು ಆಕರ್ಷಿಸುತ್ತಿದೆ.

ಕ್ಷೇತ್ರದ ವಿವಿಧ ಸೇವಾ ಚಟುವಟಿಕೆಗಳ ಮಳಿಗೆಗಳ ಜತೆಗೆ ವಾರ್ತಾ ಇಲಾಖೆ ಮಳಿಗೆ, ಅರಣ್ಯ ಇಲಾಖೆ ಪ್ರದರ್ಶನ, ರುಡ್‌ಸೆಟ್‌, ಸಿರಿ ಗ್ರಾಮೋದ್ಯೋಗ ಮಳಿಗೆ, ಶ್ರವಣಬೆಳಗೊಳ ಭಿತ್ತಿ ಚಿತ್ರಗಳ ಪ್ರತಿಕೃತಿ ಪ್ರದರ್ಶನ, ಸಿಂಡಿಕೇಟ್‌ ಬ್ಯಾಂಕ್‌, ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಅಖಿಲ ಕರ್ನಾಟಕ ಜನ ಜಾಗೃತಿ ಕೇಂದ್ರ, ಮಂಜುವಾಣಿ, ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಪ್ರಾಚ್ಯ ಹಸ್ತ ಪ್ರತಿ ಗ್ರಂಥಾಲಯ ಸೇರಿ ಒಟ್ಟು 31 ಸ್ಟಾಲ್‌ಗಳಿವೆ. ವಾರ್ತಾ ಇಲಾಖೆ ಮಳಿಗೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಪರಿಚಯಿಸಲಾಗುತ್ತಿದೆ.