ಗದಗ ನಗರದಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಬೇಕಿದ್ದ ಆಧಾರ್ ಕಾರ್ಡ್ಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಅಂಚೆ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಾಶಿ ವಿಶ್ವನಾಥ್ ನಗರದ ನಿವಾಸಿಗಳ ಕಾರ್ಡ್ಗಳು ಗಟಾರ ಸೇರಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ (ನ.8): ಸಾರ್ವಜನಿಕರ ಮನೆ ಬಾಗಿಲಿಗೆ ಸುರಕ್ಷಿತವಾಗಿ ತಲುಪಬೇಕಿದ್ದ ಆಧಾರ್ ಕಾರ್ಡ್ಗಳು(Adhar Card) ಕಸದ ರಾಶಿಯಲ್ಲಿ ಹಾಗೂ ಗಟಾರದ ಪಕ್ಕದಲ್ಲಿ ಪತ್ತೆಯಾಗಿರುವ ಆಶ್ಚರ್ಯಕರ ಘಟನೆ ಗದಗ(Gadag) ನಗರದಲ್ಲಿ ಬೆಳಕಿಗೆ ಬಂದಿದೆ. ಅಂಚೆ ಇಲಾಖೆ(Gadag post office) ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಪ್ರಮುಖ ದಾಖಲೆಗಳು ರಸ್ತೆ ಪಾಲಾಗಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ ಕಸದ ರಾಶಿಯಲ್ಲಿ ಆಧಾರ್ ಕಾರ್ಡ್ಗಳು!
ಇಲ್ಲಿನ ಪಂಚಾಕ್ಷರಿ ನಗರದ (ಬಡಾವಣೆ) ಕಸದ ರಾಶಿ ಹಾಗೂ ಗಟಾರದ ಬಳಿ ಸುಮಾರು 20ಕ್ಕೂ ಅಧಿಕ ಆಧಾರ್ ಕಾರ್ಡ್ಗಳು ಬಿದ್ದಿರುವುದು ಪತ್ತೆಯಾಗಿದೆ. ಗಟಾರವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ಕಣ್ಣಿಗೆ ಈ ಕಾರ್ಡ್ಗಳು ಬಿದ್ದಿವೆ. ಪರಿಶೀಲಿಸಿದಾಗ, ಇವೆಲ್ಲವೂ ಸಮೀಪದ ಕಾಶಿ ವಿಶ್ವನಾಥ್ ನಗರದ ನಿವಾಸಿಗಳಿಗೆ ಸೇರಿದ ಆಧಾರ್ ಕಾರ್ಡ್ಗಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ವಿಳಾಸ ಬದಲಾವಣೆಗೆ ಅರ್ಜಿ
ಕಾಶಿ ವಿಶ್ವನಾಥ್ ನಗರದ ನಿವಾಸಿಗಳು ತಮ್ಮ ಆಧಾರ್ ಕಾರ್ಡ್ಗಳಲ್ಲಿ ವಿಳಾಸ ಸೇರಿದಂತೆ ವಿವಿಧ ತಿದ್ದುಪಡಿಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ, ತಿದ್ದುಪಡಿಯಾದ ಹೊಸ ಕಾರ್ಡ್ಗಳು ಅಂಚೆ (ಪೋಸ್ಟ್) ಮೂಲಕ ಸಂಬಂಧಪಟ್ಟವರ ಮನೆ ವಿಳಾಸಕ್ಕೆ ನೇರವಾಗಿ ತಲುಪಬೇಕಿತ್ತು. ಆದರೆ, ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ಕಾರ್ಡ್ ಕೈಸೇರದೆ ಜನರು ಕಾಯುತ್ತಿದ್ದರು. ಈಗ ಈ ಕಾರ್ಡ್ಗಳು ಗಟಾರ ಸೇರಿರುವುದು ಜನರ ಆತಂಕ ಮತ್ತು ಆಕ್ರೋಶವನ್ನು ಹೆಚ್ಚಿಸಿದೆ.
ಸಿಬ್ಬಂದಿ ಮೇಲೆಯೇ ಶಂಕೆ:
ಮನೆ ಮನೆಗೆ ತೆರಳಿ ವಿತರಿಸಬೇಕಾದ ಜವಾಬ್ದಾರಿ ಹೊಂದಿದ್ದ ಅಂಚೆ ಇಲಾಖೆಯ ಸಿಬ್ಬಂದಿಯೇ ಕೆಲಸದ ಆಲಸ್ಯದಿಂದ ಅಥವಾ ನಿರ್ಲಕ್ಷ್ಯದಿಂದ ಈ ಕಾರ್ಡ್ಗಳನ್ನು ಕಸದ ರಾಶಿಗೆ ಎಸೆದಿರಬಹುದು ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಪ್ರಮುಖ ವೈಯಕ್ತಿಕ ದಾಖಲೆಗಳನ್ನು ಈ ರೀತಿ ರಸ್ತೆ ಪಾಲಾಗುವಂತೆ ಮಾಡಿ, ದುರುಪಯೋಗಕ್ಕೆ ಅವಕಾಶ ಮಾಡಿಕೊಟ್ಟಿರುವ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಇಲಾಖಾ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಈ ಗಂಭೀರ ನಿರ್ಲಕ್ಷ್ಯದ ಕುರಿತು ಅಂಚೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಹೀಗಾಗಿ ಈ ಕಾರ್ಡ್ಗಳು ಅಂಚೆ ಕಚೇರಿಯಿಂದಲೇ ರವಾನೆಯಾಗಿ ಮಾರ್ಗ ಮಧ್ಯೆ ಎಸೆಯಲ್ಪಟ್ಟಿವೆಯೇ ಅಥವಾ ವಿತರಣಾ ಹಂತದಲ್ಲಿ ಬೇರೆ ಲೋಪವಾಗಿದೆಯೇ ಎಂಬ ಬಗ್ಗೆ ಅಧಿಕೃತ ಸ್ಪಷ್ಟತೆ ಸಿಕ್ಕಿಲ್ಲ.














