ಹಿಜಾಬ್‌-ಶಾಲು ಧರ್ಮ ದಂಗಲ್‌, ಸಾಕಪ್ಪಾ ಸಾಕು ಎನಿ​ಸು​ವಷ್ಟುಮಳೆ, ಆನೆ ದಾಳಿಗೆ ಜನರ ಸಾವು, ಗಿರಿ​ಯಲ್ಲಿ ಅರ​ಳಿದ ಕುರುಜಿ ಹೂಗಳು, ದತ್ತಪೀಠಕ್ಕೆ ಅರ್ಚಕರ ನೇಮಕ, ಹಿಂದೂ ಧಾರ್ಮಿಕ ಪದ್ಧತಿಯಂತೆ ಪೂಜಾ ವಿಧಿವಿಧಾನ, ಕೋವಿಡ್‌ ನಿಯಂತ್ರಣ ಮಧ್ಯೆ ಚಿಗು​ರಿದ ಆರ್ಥಿ​ಕತೆ.. ಒಟ್ಟಿನಲ್ಲಿ ಈ ವರ್ಷ ಕಾಫಿನಾಡಿಗೆ ಸಿಹಿಗಿಂತ ಕಹಿ ಹೆಚ್ಚು ತಂದ ವರ್ಷವಾಗಿದೆ.

ಆರ್‌. ತಾರಾನಾಥ್‌

ಚಿಕ್ಕಮಗಳೂರು (ಡಿ.31) : ಎರಡು ವರ್ಷಗಳ ಕಾಲ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡಿದ್ದ ಕೋವಿಡ್‌ನ ಕೆಟ್ಟಪರಿಸ್ಥಿತಿ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಜಿಲ್ಲೆ ಹಲವು ಸಮಸ್ಯೆ ಎದುರಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್‌ ವಿವಾದ ದೊಡ್ಡ ಸದ್ದು ಮಾಡಿತು. ಕಾಲೇಜುಗಳ ವಾತಾವರಣದಲ್ಲಿ ಹಿಜಾಬ್‌, ಕೇಸರಿ, ನೀಲಿ ಶಾಲುಗಳು ಸದ್ದು ಮಾಡಿದವು, ಇದರ ಬೆನ್ನಲೆ ಹಲಾಲ್‌ ಕಟ್‌, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂಬ ಕರೆಗಳು ಆಂತರಿಕ ಬಿಕ್ಕಟ್ಟು ಹುಟ್ಟು ಹಾಕಿತ್ತು. ಅವಧಿಗೂ ಮುನ್ನ ಎಂಟ್ರಿ ಕೊಟ್ಟಮುಂಗಾರು ಮಳೆಯ ರುದ್ರನರ್ತನಕ್ಕೆ ಮಲೆನಾಡು ಮಾತ್ರವಲ್ಲ, ಬಯಲುಸೀಮೆಯ ಜನರು ತತ್ತರಿಸಿದರು. ಮೂಡಿಗೆರೆ ಸೇರಿದಂತೆ ಕೆಲವೆಡೆ ಆನೆಗಳ ಉಪಟಳ ಹೆಚ್ಚಾಗಿ ಹಲವು ಮಂದಿ ಪ್ರಾಣ ಕಳೆದುಕೊಂಡರು, ಈ ವರ್ಷದಲ್ಲಿ ಅತಿ ಹೆಚ್ಚು ಆನೆಗಳ ಸ್ಥಳಾಂತರದ ಕಾರ್ಯಾಚರಣೆ ನಡೆಯಿತು. ದತ್ತಪೀಠಕ್ಕೆ ಅರ್ಚಕರ ನೇಮಕ, ಹಿಂದೂ ಧಾರ್ಮಿಕ ಪದ್ಧತಿಯಂತೆ ಪೂಜಾ ವಿಧಿ ವಿಧಾನ ನಡೆಸುವ ಹೋರಾಟದಲ್ಲಿ ಸಂಘಪರಿವಾರ ಯಶಸ್ವಿಯಾಯಿತು. 12 ವರ್ಷಕ್ಕೊಮ್ಮೆ ಬಿಡುವ ಕುರಂಜಿ ಹೂವು ಈ ಬಾರಿ ಅರಳಿರುವುದು ಈ ವರ್ಷದ ವಿಶೇಷ.

ಜನವರಿ

  • ಜ.4: ಬಾಲ್ಯದಲ್ಲೇ ಹೆತ್ತವರಿಂದ ದೂರವಾಗಿ ಕೇರಳ ಸೇರಿದ್ದ ಮಹಿಳೆ 22 ವರ್ಷಗಳ ಬಳಿಕ ಚೈತ್ರಾ ಅವರು ಮೂಡಿಗೆರೆಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮಡಿಲು ಸೇರಿದರು.
  • ಜ.22: ಚಿಕ್ಕಮಗಳೂರು: 2022ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಅಜ್ಜಂಪುರ ತಾಲೂಕು ಶಿವನಿಯ ತತ್ವಪದಗಳ ಕಲಾವಿದೆ ಹನುಮಕ್ಕ ಆಯ್ಕೆಗೊಂಡರು.
  • ಜ. 24: ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಎಸ್‌.ಈಶ್ವರಪ್ಪ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಈ ಹಿಂದೆ ಆರಗ ಜ್ಞಾನೇಂದ್ರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಕಂಟಕವಾದ ಅಸ್ಸಾಂ ಕಾರ್ಮಿಕರು..!

ಫೆಬ್ರವರಿ

  • ಫೆ.5: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲು ಕಾಣಿಸಿಕೊಂಡ ಹಿಜಾಬ್‌ ವಿವಾದ ಚಿಕ್ಕಮಗಳೂರು ಜಿಲ್ಲೆಗೂ ಎಂಟ್ರಿ ನೀಡಿತು. ಹಿಜಾಬ್‌, ಕೇಸರಿ ಜತೆಗೆ ನೀಲಿ ಶಾಲುಗಳು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು.
  • ಫೆ.7: ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ದರ್ಗಾಕ್ಕೆ ಸಂಬಂಧಿಸಿದಂತೆ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ನೇಮಿಸಿದ ಸಚಿವ ಸಂಪುಟ ಉಪ ಸಮಿತಿ ಸದಸ್ಯರು ಸಾರ್ವಜನಿಕರಿಂದ ಅಹವಾಲು, ಹೇಳಿಕೆ ಮತ್ತು ದಾಖಲೆಗಳನ್ನು ಸಂಗ್ರಹಿಸಿದರು.
  • ಫೆ.15: ಚಿಕ್ಕಮಗಳೂರು: ಕೋವಿಡ್‌ನಿಂದ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರಗಳು ಪುರ್ನಾರಂಭಗೊಂಡಿತು.

ಮಾರ್ಚ್:

  • ಮಾ.5: ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಮಿಲ್‌್ಕ ಯೂನಿಯನ್‌, ಮುಳ್ಳಯ್ಯನಗಿರಿ ರೂಪ್‌ವೇ ಸೇರಿದಂತೆ ಕೆಲವು ಯೋಜನೆಗಳು ಘೋಷಣೆ
  • ಮಾ.9: ರಷ್ಯಾ ಮತು ್ತಯುಕ್ರೇನ್‌ ನಡುವಿನ ಭೀಕರ ಯುದ್ಧ ನಡೆದಿದ್ದು, ಉಕ್ರೇನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ 7 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಯಿತು.
  • ಮಾ.17: ಹಿಜಾಬ್‌ ವಿವಾದ ಸಂಬಂಧ ಉಚ್ಛನ್ಯಾಯಾಲಯ ನೀಡಿದ ತೀರ್ಪಿಗೆ ಅಸಮಾಧಾನಗೊಂಡು ಮುಸ್ಲಿಂ ಸಂಘಟನೆಗಳು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಮುಸ್ಲಿಂ ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್‌ ನಡೆಸಿದರು.
  • ಮಾ.21: ಕುಡಿಯುವ ನೀರಿಗಾಗಿ ಮೂಡಿಗೆರೆ ತಾಲ್ಲೂಕು ಚಿನ್ನಿಗ ಗ್ರಾಮದ ರಾಜು ಮತ್ತು ಶಾರದ ದಂಪತಿಗಳು 55 ಅಡಿ ಆಳದ ತೆರೆದ ಬಾವಿಯನ್ನು ತೆಗೆಯುವ ಮೂಲಕ ಇಡೀ ರಾಜ್ಯ ಗಮನ ಸೆಳೆದರು.
  • ಮಾ.24: ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ದರ್ಗಾಕ್ಕೆ ತೆರಳುವ ಮಾರ್ಗದಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ 40ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

ಏಪ್ರಿಲ್‌:

  • ಏ.9: ಚಿಕ್ಕಮಗಳೂರು ತಾಲೂಕಿನ ಹಂಪಾಪುರ, ಬೀಕನಹಳ್ಳಿ, ಚುರ್ಚೆಗುಡ್ಡ ಸುತ್ತಮುತ್ತ ಜನರಿಗೆ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿ.
  • ಏ.15: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ರಾಜಿನಾಮೆಯಿಂದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ತೆರವುಗೊಂಡಿತು.

ಏ.19:

  • ಕೊಪ್ಪ ತಾಲೂಕು ಹರಿಹರಪುರ ಶ್ರೀ ಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಪಾಲ್ಗೊಂಡಿದ್ದರು.

ಮೇ ತಿಂಗಳು:

  • ಮೇ 6: ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗೆ ಬೆದರಿಕೆ ಹಾಕುವ ಮೂಲಕ ಮತ್ತೆ ವಿವಾದಕ್ಕೆ ಸಿಲುಕಿದರು.
  • ಮೇ 16: ಶ್ರೀ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದಿತ ಪ್ರದೇಶದಲ್ಲಿ ಅನ್ಯಕೋಮಿನವರು ಕಾನೂನು ಉಲ್ಲಂಘಿಸಿ ಮಾಂಸಹಾರವನ್ನು ತಯಾರಿಸುತ್ತಿದ್ದಾರೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದರು.

ಜೂನ್‌

  • ಜೂ.12: ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಯೋಧ ಎಂ.ಎನ್‌.ಗಣೇಶ್‌ (36) ಮೃತದೇಹ ಬಿಹಾರ ಕಿಶನ್‌ ಗಂಜ್‌ ಪ್ರದೇಶದಲ್ಲಿ ಪತ್ತೆಯಾಗಿತ್ತು. ಗಣೇಶ್‌ ಅಸ್ಸಾಂನ ಗುವಾಹಟಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
  • ಜೂ.26: ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ರಾಜ್ಯದಲ್ಲಿ ಮೊದಲ ಗೋ ಶಾಲೆ ಆರಂಭ. ರಾಜ್ಯ ಪಶು ಸಂಗೋಪನಾ ಸಚಿವರು ಉದ್ಘಾಟಿಸಿದರು.

ಜುಲೈ

  • ಜು.7: ಜಿಲ್ಲಾದ್ಯಂತ ಮಳೆಯ ಆರ್ಭಟ ನಡೆಸಿದ್ದು ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುವ ಮೂಲಕ ಜನರ ನಿದ್ದೆಗೆಡಿಸಿತ್ತು. ಮಳೆಯ ರುದ್ರನರ್ತನಕ್ಕೆ ಕೆಲವೆಡೆಗಳಲ್ಲಿ ಭೂ ಕುಸಿತ ಉಂಟಾಗಿ ಭೀತಿ ಮೂಡಿಸಿತ್ತು.
  • ಜು.16: ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪ ರಾಜಿನಾಮೆ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು.
  • ಜು.27: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ, ಅಪರಾಧಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ 9 ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಗರದ ಬಿಜೆಪಿ ಕಚೇರಿಗೆ ತೆರಳಿ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.

ಆಗಸ್ಟ್‌

  • ಆ.6: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಚ್‌. ಅಕ್ಷಯ್‌ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಬೆಂಗಳೂರು ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಮಾ ಪ್ರಶಾಂತ್‌ ಅವರನ್ನು ನೇಮಿಸಿ ರಾಜ್ಯ ಆದೇಶ ಹೊರಡಿಸಿತು.
  • ಆ.10: ಮನೆ ಮೇಲೆ ಮರಬಿದ್ದು ಮನೆಯಲ್ಲಿ ಮಲಗಿದ್ದ ಚಂದ್ರಮ್ಮ ಮತ್ತು ಸರಿತಾ ಮೃತಪಟ್ಟಘಟನೆ ಮೂಡಿಗೆರೆ ತಾಲ್ಲೂಕು ಕೆ.ತಲಗೂರು ಗ್ರಾಮದಲ್ಲಿ ನಡೆಯಿತು.
  • ಆ.25: ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಹಾವೇರಿ ಟಸ್ಕರ್‌ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು.

ಸೆಪ್ಪೆಂಬರ್‌

  • ಸೆ.8: ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಮೂಡಿಗೆರೆ ತಾಲ್ಲೂಕು ಊರುಬಗೆಯ ಅರ್ಜುನ್‌ ಎಂಬ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿ ಸಾಯಿಸಿತ್ತು.
  • ಸೆ.22: ರಸ್ತೆ ಅಪಘಾತದಲ್ಲಿ ತೀವ್ರ ಪೆಟ್ಟುಬಿದ್ದು ಮೆದುಳು ನಿಷ್ಕಿ್ರಯಗೊಂಡಿದ್ದ ವಿದ್ಯಾರ್ಥಿನಿ ರಕ್ಷಿತಾಬಾಯಿ ಬಹು ಅಂಗಾಂಗಗಳ ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದರು. ಪ್ರಥಮ ಬಾರಿಗೆ ಅಂಗಾಂಗ ರವಾನೆ ಕಾರ್ಯ ಯಶಸ್ವಿಯಾಗುವ ಮೂಲಕ ಜಿಲ್ಲೆ ವೈದ್ಯಲೋಕದಲ್ಲಿ ಹೊಸ ದಾಖಲೆ ಬರೆಯಿತು.

ಅಕ್ಟೋಬರ್‌

  • ಅ.2: ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ದರ್ಗಾ ಗಿರಿ ಶ್ರೇಣಿಯಲ್ಲಿ 12 ವರ್ಷಕ್ಕೊಮ್ಮೆ ಅರಳುವ ಕುರಂಜಿ ಹೂವುಗಳು ಬಿಟ್ಟಿದ್ದು ಹೂವುಗಳ ಅಂದ ಸವಿಯಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರ ದಂಡು ಕಾಫಿನಾಡಿಗೆ ಹರಿದು ಬಂದಿತ್ತು.
  • ಅ.11: ಮುಂಗಡ ಹಣ ಪಡೆದು ತೋಟ ಕೆಲಸಕ್ಕೆ ಬಾರದೇ, ಬೇರೆಯವರ ಕಾಫಿತೋಟಕ್ಕೆ ಕೆಲಸಕ್ಕೆ ತೆರಳುತ್ತೇವೆ ಎಂದಿದ್ದಕ್ಕೆ ಕೋಪಗೊಂಡ ಕಾಫಿತೋಟದ ಮಾಲೀಕ ಜಗದೀಶ್‌ಗೌಡ ಹಲ್ಲೆ ನಡೆಸಿದಲ್ಲದೇ, ಕಾರ್ಮಿಕರನ್ನು ಗೃಹ ಬಂಧನದಲ್ಲಿ ಇರಿಸಿದ ಘಟನೆ ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಜೇನುಗದ್ದೆಯಲ್ಲಿ ನಡೆಯಿತು.
  • ಅ.30: ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಂದ್ರಶೇಖರ ನಾರಾಣಪುರ ಅವರಿಗೆ ರಾಜ್ಯ ಸರ್ಕಾರ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿತು.

ನವೆಂಬರ್‌:

  • ನ.7: ಚಿಕ್ಕಮಗಳೂರು ತಾಲೂಕು ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಎಸ್‌.ಕಾವೇರಿ ಹಾಗೂ ಸಜೀದಾ ಬಾನು ಆರೋಗ್ಯ ಇಲಾಖೆಯಲ್ಲಿನ ಸೇವೆಯನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಫ್ಲಾರೆನ್ಸ್‌ ನೈಟಿಂಗೇಲ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
  • ನ.13: ಶ್ರೀರಾಮಸೇನೆ ನೇತೃತ್ವದಲ್ಲಿ ನಡೆದ 18ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ.
  • ನ.16: ವಿಧಾನ ಪರಿಷತ್ತು ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಅವರ ನಿವಾಸ, ಕಚೇರಿ ಸೇರಿದಂತೆ ಅವರ ಮಾಲೀಕತ್ವದ ಇತರೆಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿತು.
  • ನ.20: ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಶೋಭಾ ಮೃತದೇಹ ವೀಕ್ಷಿಸಲು ತಡವಾಗಿ ತೆರಳಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಜನರ ಆಕ್ರೋಶ.
  • ನ.28: ಮೂಡಿಗೆರೆ ತಾಲೂಕು ಕುಂದೂರು ಕೆಂಜಿಗೆ ಗ್ರಾಮದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಪುಂಡ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.

ಡಿಸೆಂಬರ್‌

ಚಿಕ್ಕಮಗಳೂರು: ಒಂಟಿ ಸಲಗ ಭೈರನ ಸೆರೆ ಹಿಡಿದ ಬಗ್ಗೆ ಸ್ಥಳೀಯರಿಗೆ ಅನುಮಾನ...?

  • ಡಿ.5: ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ತಾತ್ಕಾಲಿಕವಾಗಿ ಅರ್ಚಕರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಸಂದೀಪ್‌ ಶರ್ಮ ಮತ್ತು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕೆ.ಶ್ರೀಧರ್‌ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು.
  • ಡಿ.6: ಬಜರಂಗದಳ ಹಮ್ಮಿಕೊಂಡಿದ್ದ ದತ್ತಜಯಂತಿ ಅಂಗವಾಗಿ ಮಹಿಳೆಯರಿಂದ ಅನುಸೂಯ ಜಯಂತಿ ಮತ್ತು ಸಂಕೀರ್ತನಾ ಯಾತ್ರೆ ನಡೆಯಿತು.
  • ಡಿ.8: ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಶ್ರೀಗುರು ದತ್ತಾತ್ರೇಯ ಸ್ವಾಮಿ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜಾ ಹಾಗೂ ಗುಹೆ ಸಮೀಪದಲ್ಲಿನ ತುಳಸಿಕಟ್ಟೆಬಳಿ ಹೋಮಹವನಗಳು ಶಸೊತ್ರೕಕ್ತವಾಗಿ ನಡೆಯುವ ಮೂಲಕ ದತ್ತಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ತೆರೆಕಂಡಿತು.
  • ಡಿ.11: ಮೂಡಿಗೆರೆ ತಾಲೂಕು ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆ ಭೈರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ.