ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಬಡ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಮಾರ್ಗಮಧ್ಯೆಯೇ ಈ ದುರಂತ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಣೆಬರಹದ ಕ್ರೂರ ಆಟಕ್ಕೆ ಒಂದು ಪೊಲೀಸ್ ಕುಟುಂಬ ತತ್ತರಿಸಿಹೋಗಿದೆ. ಒಂದೆಡೆ ದಶಕಗಳ ಸೇವೆಯ ನಂತರ ಸಿಕ್ಕ ಬಡ್ತಿಯ ಸಂಭ್ರಮ, ಇನ್ನೊಂದೆಡೆ ಆ ಸಂಭ್ರಮದ ಮನೆಯನ್ನೇ ಆವರಿಸಿದ ಕತ್ತಲೆ. ಕರ್ತವ್ಯದ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಹೊರಟಿದ್ದ ಅಧಿಕಾರಿಯೊಬ್ಬರನ್ನು ಮಾರ್ಗಮಧ್ಯೆಯೇ ಸಾವು ಹೆಡೆಮುರಿ ಕಟ್ಟಿದೆ. ಬಡ್ತಿಯ ಆದೇಶ ಕೈಸೇರಿದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಸಹಾಯಕ ಪೊಲೀಸ್ ಉಪನಿರೀಕ್ಷಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬೀಳಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ!

ಬಡ್ತಿಯ ಖುಷಿ ತಂದ ತಲ್ಲಣಮೃತ ಅಧಿಕಾರಿಯನ್ನು ಅಲ್ಲಾಭಕ್ಷ ಖರೋಷಿ (೫೦ ವರ್ಷ) ಎಂದು ಗುರುತಿಸಲಾಗಿದೆ. ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯಲ್ಲಿ ದೀರ್ಘಕಾಲ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಇಲಾಖೆಯು ಅವರಿಗೆ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಈ ಸುದ್ಧಿ ಕೇಳಿ ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಹೋದ್ಯೋಗಿಗಳು ಮತ್ತು ಹಿತೈಷಿಗಳು ಫೋನ್ ಮಾಡಿ ಶುಭಾಶಯಗಳನ್ನು ಕೋರುತ್ತಿದ್ದರು.

ಮಾರ್ಗಮಧ್ಯೆ ಎರಗಿದ ಕಂಟಕ!

ಬಡ್ತಿ ಪಡೆದ ಹೊಸ ಹುದ್ದೆಗೆ ಅಧಿಕೃತವಾಗಿ ಹಾಜರಾಗಲು ಅಲ್ಲಾಭಕ್ಷ ಅವರು ಇಂದು ಸಿದ್ಧರಾಗಿದ್ದರು. ಗದ್ದನಕೇರಿಯಿಂದ ಬಾಗಲಕೋಟೆ ಮುಖ್ಯ ಕಚೇರಿಗೆ ತೆರಳಲು ಅವರು ಅತ್ಯಂತ ಉತ್ಸಾಹದಿಂದ ವಾಹನ ಏರಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪ್ರಯಾಣದ ಮಾರ್ಗಮಧ್ಯೆ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಕಣ್ಣೀರಲ್ಲಿ ಮುಳುಗಿದ ಶೋಕತಪ್ತ ಕುಟುಂಬ!

ಬಾಳಿನ ಹೊಸ ಹೆಜ್ಜೆ ಇಡಬೇಕಾಗಿದ್ದ ಯಜಮಾನನ ಅಗಲಿಕೆಯಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ. ಯಾವ ಮನೆಯಲ್ಲಿ ಬಡ್ತಿಯ ಸಿಹಿ ಹಂಚಬೇಕಿತ್ತೋ, ಅದೇ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ಸ್ಟಾರ್ ಧರಿಸಿ ಸಲ್ಯೂಟ್ ಹೊಡೆಯಬೇಕಾಗಿದ್ದ ಅಧಿಕಾರಿ ಶವವಾಗಿ ಮನೆಗೆ ಮರಳಿದ್ದನ್ನು ಕಂಡು ಕುಟುಂಬಸ್ಥರು ಮತ್ತು ಸಾರ್ವಜನಿಕರ ಕಣ್ಣಾಲಿಗಳು ತೇವಗೊಂಡಿವೆ. ಬೀಳಗಿ ಠಾಣೆಯ ಸಹೋದ್ಯೋಗಿಗಳು ತಮ್ಮ ಆತ್ಮೀಯ ಅಧಿಕಾರಿ ಕಳೆದುಕೊಂಡು ಸಂತಾಪ ಸೂಚಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.