35 ವರ್ಷಗಳ ಸಂಸಾರ ಮಾಡಿ ಆಕಸ್ಮಿಕವಾಗಿ ತಪ್ಪಿಸಿಕೊಂಡ ಪತ್ನಿ ಒಂಭತ್ತು ವರ್ಷಗಳ ಬಳಿಕ ಮತ್ತೆ ಸಿಕ್ಕಿದರೆ ಹೇಗಾಗಬಹುದು. ಹೌದು! ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಮಹಿಳೆ ನಾಪತ್ತೆಯಾಗಿ ಒಂಭತ್ತು ವರ್ಷಗಳಿಂದ ರಕ್ತ ಸಂಬಂಧಿಗಳಿಂದ ಸಾವಿರಾರು ಕಿಲೋಮೀಟರ್ ದೂರವಾಗಿದ್ದರು.  

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.01): 35 ವರ್ಷಗಳ ಸಂಸಾರ ಮಾಡಿ ಆಕಸ್ಮಿಕವಾಗಿ ತಪ್ಪಿಸಿಕೊಂಡ ಪತ್ನಿ ಒಂಭತ್ತು ವರ್ಷಗಳ ಬಳಿಕ ಮತ್ತೆ ಸಿಕ್ಕಿದರೆ ಹೇಗಾಗಬಹುದು. ಹೌದು! ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಮಹಿಳೆ ನಾಪತ್ತೆಯಾಗಿ ಒಂಭತ್ತು ವರ್ಷಗಳಿಂದ ರಕ್ತ ಸಂಬಂಧಿಗಳಿಂದ ಸಾವಿರಾರು ಕಿಲೋಮೀಟರ್ ದೂರವಾಗಿದ್ದರು. ಆದರೆ ತನಲ್ ಸಂಸ್ಥೆಯ ಪರಿಶ್ರಮದಿಂದ ಪತಿ, ಪತ್ನಿಯರು ಹೊಂದಾದ ಆ ಅಪೂರ್ವ ಸಂಗಮದ ದೃಶ್ಯ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಆ ದೃಶ್ಯವನ್ನು ನೋಡಿದರೆ ನಿಮ್ಮ ಕಣ್ಣಾಲಿಗಳು ಒದ್ದೆಯಾಗುತ್ತವೆ. ಪತ್ನಿಯನ್ನು ಕಂಡಿದೇ ತಡ ಹೆಗಲಿನಲ್ಲಿದ್ದ ಬ್ಯಾಗನ್ನು ಎಸೆದು ಓಡೋಡಿ ಹೋಗಿ ಪತ್ನಿಯ ಬಿಗಿದಪ್ಪಿ ಬಿಕ್ಕಿ, ಬಿಕ್ಕಿ ಅಳುತ್ತಿರುವ ವ್ಯಕ್ತಿ. 

ಮಾತೇ ಇಲ್ಲ, ಕಣ್ಣೀರೊಂದೆ ಎಲ್ಲದಕ್ಕೂ ಉತ್ತರ. ತನ್ನ ಎದೆಗೊರಗಿ ಕಣ್ಣೀರು ಸುರಿಸುತ್ತಿರುವ ಪತ್ನಿಯ ಬೆನ್ನು ತಡವಿ, ಹಣೆಗೆ ಮುತ್ತಿಕ್ಕಿ ತನ್ನನ್ನು ತಾನು ಸಂತೈಸಿಕೊಳ್ಳುತ್ತಿರುವ ಆ ಕ್ಷಣ. ಇನ್ನು ಒಂಭತ್ತು ವರ್ಷಗಳಿಂದ ತನ್ನವರೆಲ್ಲರಿಂದ ದೂರವಾಗಿ ತನ್ನಪಾಲಿಗೆ ತನಲ್ ಸಂಸ್ಥೆಯೇ ಉಳಿದ ಸಂಬಂಧವೆಂದು ಬದುಕುತ್ತಿದ್ದ ಆಕೆಗೆ ತನ್ನ ಪತಿಯನ್ನು ತೋಳಿನಿಂದ ಬಳಸಿ ಎದೆಗೊರಗಿ ಹರ್ಷಧಾರೆ ಸುರಿಸುವುದು ಬಿಟ್ಟರೆ ಬೇರೇನೂ ಇಲ್ಲ. ಈ ಕರುಣಾಮಯ ದೃಶ್ಯಗಳನ್ನು ಕಂಡು ನೆರೆದಿದ್ದವರ ಕಣ್ಣಾಲಿಗಳು ಕೂಡ ಒದ್ದೆಯಾಗಿದ್ದವು. ಇಂತಹ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದ್ದು ಮಡಿಕೇರಿ ನಗರದಲ್ಲಿರುವ ತನಲ್ ಅನಾಥ ವೃದ್ಧಾಶ್ರಮ. 

ವರ್ಷದ ಕೊನೆಯ ಸೂರ್ಯಾಸ್ತ ಕಣ್ತುಂಬಿಕೊಂಡ ಪ್ರವಾಸಿಗರು!

ಇಂತಹ ನಾಲ್ಕೈದು ಜನರನ್ನು ತಮ್ಮ ಕುಟುಂಬದವರೊಂದಿಗೆ ಮತ್ತೆ ಸೇರಿಸಿದ ಹೆಗ್ಗಳಿಕೆ ತನಲ್ ಸಂಸ್ಥೆಯದ್ದು. ಅಷ್ಟಕ್ಕೂ ತಮ್ಮ ಪಾಲಿಗೆ ಇನ್ನಿಲ್ಲ ಎಂದುಕೊಂಡಿದ್ದವರು ಒಂಭತ್ತು ವರ್ಷಗಳ ಬಳಿಕ ಹೊಂದಾದವರು ದೆಹಲಿಯ ಕೆಹರ್ ಸಿಂಗ್ ಮತ್ತು ದರ್ಶಿನಿ ದಂಪತಿ. ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ದರ್ಶಿನಿ ಒಂಭತ್ತು ವರ್ಷಗಳ ಹಿಂದೆ ದೆಹಲಿಯಿಂದ ನಾಪತ್ತೆಯಾಗಿದ್ದರು. ಅಂದಿನಿಂದ ಇವರ ಕುಟುಂಬ ಹುಡುಕಾಡದ ಊರುಗಳಿಲ್ಲ. ಎಷ್ಟೇ ಹುಡುಕಾಡಿದರೂ ದರ್ಶಿನಿ ಅವರು ಸಿಗಲೇ ಇಲ್ಲ. ಅದರಲ್ಲೂ ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಕಾಡಿದ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಇಡೀ ದೇಶವೇ ಬಂದ್ ಆದಾಗಲೂ ಮನೆಗೆ ತಿರುಗಿ ಬಾರದ ಪತ್ನಿ ಸತ್ತೇ ಹೋಗಿದ್ದಾರೆ ಎಂದುಕೊಂಡಿದ್ದ ಕೆಹರ್ ಸಿಂಗ್ ಅವರಿಗೆ ತನ್ನ ಪತ್ನಿಯನ್ನು ಕಂಡು ಆದ ಸಂತೋಷ ಅಷ್ಟಿಷ್ಟಲ್ಲ.

2018 ರಲ್ಲಿ ನಾಲ್ಕು ವರ್ಷಗಳ ಹಿಂದೆ ಕುಶಾಲನಗರ ಪಟ್ಟಣದಲ್ಲಿ ಅರೆನಗ್ನ ವ್ಯವಸ್ಥೆಯಲ್ಲಿ ಅಲೆಯುತ್ತಿದ್ದ ಮಹಿಳೆಯನ್ನು ಪೊಲೀಸರ ಸಹಕಾರದಿಂದ ತಮ್ಮ ಸೂರಿಗೆ ಕರೆದುಕೊಂಡು ಬಂದಿದ್ದ ತನಲ್ ಸಂಸ್ಥೆ, ದರ್ಶಿನಿ ಅವರ ಮಾಸಿಕ ರೋಗಕ್ಕೆ ಚಿಕಿತ್ಸೆ ಕೊಡಿಸಲು ಆರಂಭಿಸಿತ್ತು. ನಿರಂತರ ನಾಲ್ಕು ವರ್ಷಗಳ ಕಾಲ ಚಿಕಿತ್ಸೆ ಕೊಡಿಸಿದ್ದ ಪರಿಣಾಮ ಹಂತ, ಹಂತವಾಗಿ ಅವರ ಆರೋಗ್ಯ ಸುಧಾರಣೆಯಾಗುತ್ತಲೇ ಬಂದಿತ್ತು. ಬಳಿಕ ಆರು ತಿಂಗಳ ಹಿಂದೆಯಷ್ಟೇ ಮಹಿಳೆ ದರ್ಶಿನಿ ತಾನು ಯಾವ ಊರಿನವರು ಎಂದು ಹೇಳಿದ್ದರು. ತನ್ನ ತವರೂರು ಹರಿಯಾಣ ಎಂದು ಮಹಿಳೆ ಹೇಳಿದ್ದರು. 

ಒಟ್ಟಿನಲ್ಲಿ ಮಹಿಳೆ ದರ್ಶಿನಿ ನೀಡಿದ ಮಾಹಿತಿ ಆಧರಿಸಿ ಅವರ ಸಂಬಂಧಿಗಳ ಹುಡುಕಾಟಕ್ಕಾಗಿ ತನಲ್ ಸಂಸ್ಥೆ ಉತ್ತರ ಭಾರತದ 20ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ಹುಡುಕಾಟ ಶುರುಮಾಡಿತ್ತು. ಕೊನೆಗೂ ಸಂಬಂಧಿಕರೊಂದಿಗೆ ಸಂಪರ್ಕ ಸಾಧಿಸಿದ ಸಂಸ್ಥೆ ಮಹಿಳೆಯ ಪತಿ ಕೆಹರ್ ಸಿಂಗ್ ಅವರನ್ನು ಕರೆತಂದು ಕುಟುಂಬವೊಂದನ್ನು ಒಂದುಗೂಡಿಸಿ ಕಳುಹಿಸಿದೆ. ತನ್ನ ಪತಿಯೊಂದಿಗೆ ಹೊರಟ್ಟಿದ್ದ ದರ್ಶಿನಿ ಅವರು ಕಳೆದ ನಾಲ್ಕು ವರ್ಷಗಳಿಂದ ತನಗೆ ಆಶ್ರಯ ನೀಡಿದ್ದ ತನಲ್ ಸಂಸ್ಥೆ ಹಾಗೂ ಅಲ್ಲಿನ ಸಿಬ್ಬಂದಿ ಶಶಿ ಅವರನ್ನು ನೆನೆದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. 

ಹೊಸ ವರ್ಷಕ್ಕೆ ಕೊಡಗಿನ‌ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆ!

ಆ ಅಳುವ ತಡೆಯಲಾಗದೆ, ಮಗುವಿನಂತೆ ತನ್ನನ್ನು ಸಾಕಿದ್ದ ಶಶಿಯನ್ನು ತಬ್ಬಿಕೊಂಡು ದರ್ಶಿನಿ ಗೋಳಿಟ್ಟರು. ಶಶಿ ಕೂಡ ದರ್ಶಿನಿ ಅವರ ಹಣೆಗೆ ಮುತ್ತಿಟ್ಟು ಸಂತೈಸಿದರು. ಆ ಕ್ಷಣವಂತು ಎಲ್ಲರ ಹೃದಯ ಕರಗುವಂತೆ ಮಾಡಿತು ಎಂದು ತನಲ್ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಹೇಳಿದರು. ಒಟ್ಟಿನಲ್ಲಿ ಅನಾಥ ವೃದ್ಧರಿಗೆ ಆಶ್ರಯ ನೀಡಿರುವ ತನಲ್ ಸಂಸ್ಥೆ ಇದುವರಗೆ ಹಲವು ಕುಟುಂಬಗಳನ್ನು ಹೀಗೆ ಹೊಂದುಗೂಡಿಸಿದ್ದು, ಈಗ ಮತ್ತೊಂದು ಕುಟುಂಬವನ್ನು ಮತ್ತೆ ಹೊಂದುಗೂಡಿಸಿರುವುದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.