ಧಾರವಾಡ, (ಏ.26): ಕೊರೋನಾ ಮಹಾಮಾರಿಯ ಹಾವಳಿಯ ಮಧ್ಯೆಯೂ ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಬಸವ ಜಯಂತಿ ದಿನ ಭಾನುವಾರ ನಗರ ವಾಸಿಗಳು ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.

ಧಾರವಾಡದ ಟೋಲ್‌ನಾಕಾ ಬಳಿ ನಿತ್ಯ 30ಕ್ಕೂ ಹೆಚ್ಚು ಕಾರ್ಮಿಕರು ಒಂದು ತಿಂಗಳಿಂದ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪೌರ ಕಾರ್ಮಿಕರ ಪಾದಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. 

ಕೊರೋನಾ ಎಕ್ಸ್‌ಪ್ರೆಸ್: ಕೊರೋನಾ ವಾರಿಯರ್ಸ್‌ಗೆ ಹೂ ಮಳೆ

ವಿಜಯಪುರ ಇಂಚಗೇರಿ ಸಂಪ್ರದಾಯ ಮಠದ ಭಕ್ತರು ಆಗಿರುವ, ಕೆಎಂಎ-ನಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾಗಪ್ಪ ಅರವಾಳದ ಹಾಗೂ ಅವರ ಸಹೋದರರು ಇಂಚಗೇರಿ ಮಠದ ಶ್ರೀಗಳು ಹೇಳಿದಂತೆ ಪೌರ ಕಾರ್ಮಿಕರ ಪಾದಪೂಜೆ ನೆರವೇರಿಸಿದರು, ಅಲ್ಲದೇ ಅವರಿಗೆ ನಂದಿನಿ ತುಪ್ಪ ಹಾಗೂ ಪೇಡಾ ಸೇರಿದಂತೆ ಆಹಾರ ಕಿಟ್ ನೀಡಿದರು.

ವೈದ್ಯರು, ಆಶಾ ಕಾರ್ಯಕರ್ತರು ಮತ್ತು ಪೊಲೀಸ್ ಮಾತ್ರವಲ್ಲದೇ ಕೊರೋನಾ ವಾರಿಯರ್ಸ್‌ ಸಾಲಿನಲ್ಲಿ ಪೌರ ಕಾರ್ಮಿಕರು ಸಹ ಇದ್ದಾರೆ. ಕೊರೋನಾ ಭೀತಿ ಮದ್ಯೆಯೂ ಅವರು ಓಣಿ-ಓಣಿ ತಿರುಗಿ ಸ್ವಚ್ಛತೆ ಮಾಡುತ್ತಿದ್ದಾರೆ.

 ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಮತ್ತು ಪೊಲೀಸರಿಗೆ ಎಲ್ಲೆಡೆ  ಸ್ಥಳೀಯರು ಘೋಷಣೆ ಕೂಗುತ್ತಾ  ಹೂ ಮಳೆ ಸುರಿಸಿದ್ದಾರೆ.

ಆದ್ರೆ, ಇದೀಗ ಧಾರವಾಡದಲ್ಲಿ ಒಬ್ಬರು ಪೌರ ಕಾರ್ಮಿಕರಿಗೆ ಪಾದ ಪೂಜೆ ಮಾಡಿ ವಿಶೇಷ ಗೌರವ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.