ಹುಬ್ಬಳ್ಳಿ(ಫೆ.08): ಕೇಂದ್ರ ಬಜೆಟ್‌ನಲ್ಲಿ ಅಸ್ತು ಎಂದಿರುವ ಧಾರವಾಡ - ಬೆಳಗಾವಿ ರೈಲು ಮಾರ್ಗಕ್ಕೆ 988 ಕೋಟಿ ರು. ವೆಚ್ಚ ತಗುಲಲಿದೆ. ಕಿತ್ತೂರು ಮಾರ್ಗವಾಗಿ ಸಂಚರಿಸಲಿರುವ ಈ ಮಾರ್ಗದ ನಡುವೆ 11 ನಿಲ್ದಾಣಗಳು ಬರಲಿವೆ.
ಬಹುವರ್ಷಗಳ ಬೇಡಿಕೆಯಾಗಿದ್ದ ಧಾರವಾಡ- ಬೆಳಗಾವಿ ರೈಲು ಮಾರ್ಗಕ್ಕೆ ಈ ಸಲದ ಕೇಂದ್ರ ಬಜೆಟ್‌ನಲ್ಲಿ ಅಸ್ತು ಎನ್ನಲಾಗಿದೆ. ಯೋಜನೆ ಕುರಿತು ಇದೀಗ ನೈರುತ್ಯ ರೈಲ್ವೆ ವಲಯ ವಿವರವಾದ ವರದಿಯನ್ನು ಬಿಡುಗಡೆ ಮಾಡಿದೆ.

ವರದಿಯಲ್ಲಿ ಏನಿದೆ?

2013-14ರಲ್ಲಿ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲಾಯಿತು. ಬಳಿಕ ಮತ್ತೊಮ್ಮೆ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು. ಅದರಂತೆ 2019ರಲ್ಲಿ ಕೆ- ರೈಡ್‌ ಸಂಸ್ಥೆಯೂ ಈ ಸಮೀಕ್ಷೆಯನ್ನು ಕೈಗೊಂಡಿತ್ತು. 2 ವರ್ಷಗಳ ಕಾಲ ಈ ಸಮೀಕ್ಷೆಯನ್ನೂ ಕೆ- ರೈಡ್‌ ಸಂಸ್ಥೆಯೂ ಕೈಗೊಂಡು ವರದಿಯನ್ನು ನವೆಂಬರ್‌ 2019ರಲ್ಲಿ ಸಲ್ಲಿಸಿತ್ತು. ಆ ವರದಿ ಅನ್ವಯ ಇದೀಗ ಕೇಂದ್ರ ಬಜೆಟ್‌ನಲ್ಲಿ ಅನುಮತಿ ಸಿಕ್ಕಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧಾರವಾಡ- ಬೆಳಗಾವಿ ಮಾರ್ಗ ಒಟ್ಟು 90 ಕಿಲೋ ಮೀಟರ್‌ ಅಂತರದ್ದು. ಕಿತ್ತೂರು, ಎಂ.ಕೆ. ಹುಬ್ಬಳ್ಳಿ, ಬಾಗೇವಾಡಿ ಮಾರ್ಗವಾಗಿ ಇದು ಸಂಚರಿಸಲಿದೆ. ಈ ಮಾರ್ಗದ ಮಧ್ಯೆ ಈಗಿರುವ ನಾಲ್ಕು ರೈಲ್ವೆ ನಿಲ್ದಾಣಗಳು ಸೇರಿದಂತೆ 11 ನಿಲ್ದಾಣಗಳು ಬರಲಿವೆ. ಧಾರವಾಡ, ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೆಗೂರು, ಕಿತ್ತೂರು, ಹುಲಿಕಟ್ಟಿ, ಎಂ.ಕೆ. ಹುಬ್ಬಳ್ಳಿ, ಬಾಗೆವಾಡಿ, ಕಣವಿಕರವಿನಕೊಪ್ಪ, ದೇಸೂರು, ಬೆಳಗಾವಿ ಹೀಗೆ 11 ನಿಲ್ದಾಣಗಳು ಬರಲಿವೆ. ಈ ಮಾರ್ಗವಾದರೆ ಹುಬ್ಬಳ್ಳಿ-ಧಾರವಾಡ- ಬೆಳಗಾವಿ ನೇರ ಸಂಪರ್ಕ ಸಾಧ್ಯವಾಗಲಿದ್ದು, ಅಭಿವೃದ್ಧಿಗೆ ಪೂರಕವಾಗಿದೆ.

140 ಸೇತುವೆಗಳು ಈ ಮಾರ್ಗ ಮಧ್ಯೆದಲ್ಲಿ ಬರಲಿವೆ. ಅದರಲ್ಲಿ ಅತಿ ಮುಖ್ಯವಾದ ಸೇತುವೆಯೆಂದರೆ ಮಲಪ್ರಭಾ ನದಿ ಕ್ರಾಸಿಂಗ್‌ ಸೇತುವೆ, 11 ಪ್ರಮುಖ ಸೇತುವೆಗಳು, ರಸ್ತೆ ಮೇಲ್ಸೇತುವೆ 15, 71 ರಸ್ತೆ ಕೆಳಸೇತುವೆ ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.