ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ 96 ನಾಮಪತ್ರ, ಪಕ್ಷೇತರರೇ ಅಧಿಕ
ಚಿಕ್ಕಬಳ್ಳಾಪುರ ನಗರಸಭೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಮಂಗಳವಾರ ಅಶುಭ ಎಂಬ ಕಾರಣಕ್ಕೆ ಸೋಮವಾರ ಹೆಚ್ಚು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ(ಜ.28): ಇಲ್ಲಿನ ನಗರಸಭೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಮಂಗಳವಾರ ಅಶುಭ ಎಂಬ ಕಾರಣಕ್ಕೆ ಸೋಮವಾರ ಹೆಚ್ಚು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿರುವ ಒಟ್ಟು 31 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳಾಗಿ 28, ಬಿಜೆಪಿ ಅಧಿಕೃತ ಅಭ್ಯರ್ಥಿಗಳಾಗಿ 22, ಜೆಡಿಎಸ್ ಅಧಿಕೃತ ಅಭ್ಯರ್ಥಿಗಳಾಗಿ 13 ಮತ್ತು ಪಕ್ಷೇತರವಾಗಿ 33 ಮಂದಿ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು, ಒಟ್ಟು 96 ಮಂದಿ ನಾಮಪತ್ರಗಳು ಸೋಮವಾರ ಸಲ್ಲಿಕೆಯಾಗಿವೆ.
ಇಂದು ಕೊನೆಯ ದಿನ:
ನಾಮ ಪತ್ರ ಸಲ್ಲಿಸಲು ಮಂಗಳವಾರ ಅಂತಿಮ ದಿನವಾಗಿದ್ದು, ಕಾಂಗ್ರೆಸ್‌ನ 3, ಬಿಜೆಪಿಯ 9, ಜೆಡಿಎಸ್ 18 ಮಂದಿ ಇನ್ನೂ ನಾಮಪತ್ರಸಲ್ಲಿಸಲು ಬಾಕಿ ಇದೆ. ಹೆಚ್ಚು ಆಂಕಾಕ್ಷಿಗಳಿರುವ ವಾರ್ಡುಗಳಲ್ಲಿ ಇನ್ನೂ ಬಿ ಫಾರಂ ನೀಡದ ಬಿಜೆಪಿ ಒಬ್ಬರೇ ಅಭ್ಯರ್ಥಿ ಇರುವ ವಾರ್ಡುಗಳಿಗೆ ಬಿ ಫಾರಂ ವಿತರಿಸಿದೆ. ಬಿ ಫಾರಂ ಪಡೆದಿರುವ ಅಭ್ಯರ್ಥಿಗಳು ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯೇ ಇಲ್ಲದೆ ಅಧಿಸೂಚನೆ!
ಇನ್ನು ಹೆಚ್ಚು ಆಕಾಂಕ್ಷಿಗಳಿರುವ ವಾರ್ಡುಗಳಿಗೆ ಯಾರಿಗೆ ಬಿ ಫಾರಂ ನೀಡಬೇಕು ಎಂಬುದನ್ನು ಇನ್ನೂ ನಿರ್ಧರಿಸದ ಕಾರಣ ಒಟ್ಟು 9 ವಾರ್ಡುಗಳ ಬಿ ಫಾರಂಗಳನ್ನು ತಡೆ ಹಿಡಿದಿರುವ ಬಿಜೆಪಿ ಮಂಗಳವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ. ಇನ್ನು ಜೆಡಿಎಸ್ ಅತಿ ಕಡಿಮೆ ನಾಮಪತ್ರಗಳನ್ನು ಸಲ್ಲಿಸಿದ್ದು, ಮಂಗಳವಾರ ಎಲ್ಲ ವಾರ್ಡುಗಳಿಗೆ ಅಧಿಕೃತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಿದೆಯೇ ಅಥವಾ ಹಲವು ವಾರ್ಡುಗಳನ್ನು ಕೈ ಬಿಡಲಿದೆಯೇ ಎಂಬುದು ಗೊತ್ತಾಗಲಿದೆ.
29ರಂದು ನಾಮಪತ್ರ ಪರಿಶೀಲನೆ
ಇನ್ನು ಕಾಂಗ್ರೆಸ್ 28 ವಾರ್ಡುಗಳಿಗೆ ಸೋಮವಾರವೇ ಅಧಿಕೃತವಾಗಿ ಬಿ ಫಾರಂ ವಿತರಿಸಿದ್ದು, ಕೇವಲ ಮೂರು ವಾರ್ಡುಗಳಿಗೆ ಮಾತ್ರ ಪಟ್ಟಿಅಂತಿಮಗೊಳಿಸಬೇಕಿದೆ. ಒಟ್ಟಿನಲ್ಲಿ ಪ್ರಮುಖ ಪಕ್ಷಗಳಿಂದ ನಾಮಪತ್ರ ಸಲ್ಲಿಸದ ವಾರ್ಡ್‌ಗಳಿಗೆ ಮಂಗಳವಾರ ಅಧಿಕೃತ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲಿದ್ದು, ಬುಧವಾರ ನಾಮಪತ್ರ ಪರಿಶೀಲನೆ ನಡೆಯಲಿದೆ.
ಜ. 31 ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು, ಪಕ್ಷೇತರವಾಗಿ ಕಣದಲ್ಲಿರುವ 33 ಮಂದಿಯ ಜೊತೆಗೆ ಮಂಗಳವಾರ ಇನ್ನಷ್ಟುಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲಿದ್ದು, ಇದರಲ್ಲಿ ಅಂತಿಮವಾಗಿ ಎಷ್ಟುಮಂದಿ ಕಣದಲ್ಲಿ ಉಳಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಚಿಕ್ಕಬಳ್ಳಾಪುರ ನಗರಸಭೆಗೆ ಫೆ.9 ರಂದು ಚುನಾವಣೆ ನಡೆಯಲಿದ್ದು, ಫೆ.11 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.