Asianet Suvarna News Asianet Suvarna News

ದಸರಾ ಆಹಾರ ಮೇಳದಲ್ಲಿ 90ಕ್ಕೂ ಹೆಚ್ಚು ಮಳಿಗೆ..! ಬಾಯಲ್ಲಿ ನೀರೂರಿಸುವಂತಿದೆ ಮೆನು..!

ಮೈಸೂರು ಹೆಸರನ್ನು ಖ್ಯಾತಿಗೊಳಿಸಿರುವ ಮೈಸೂರು ವಿಳ್ಯದೆಲೆ, ಮಲ್ನಾಡ್‌ ಅಡಿಕೆ, ಮೈಸೂರು ಪಾಕ್‌ ಹಾಗೂ ನಂಜನಗೂಡು ರಸಬಾಳೆ ಒಳಗೊಂಡ ವಿಶೇಷ ಮಳಿಗೆಯು ಜನರನ್ನು ತನ್ನತ್ತ ಸೆಳೆಯುತ್ತಿದೆ. ಹಸುಗೂಸಿಗೆ ಹಾಲುಣಿಸಲು ಈ ಬಾರಿ ಪ್ರತ್ಯೇಕ ಟೆಂಟ್‌ ಹಾಕಲಾಗಿದೆ. ಮಗುವಿಗೆ ಹಾಲುಣಿಸುವಿಕೆ ಕೇಂದ್ರ ತೆರೆಯಲಾಗಿದೆ. ಇದು ಈ ಬಾರಿಯ ಹೊಸ ವ್ಯವಸ್ಥೆಯಾಗಿದೆ.

96 canteens open in mysore dasara food court
Author
Bangalore, First Published Sep 30, 2019, 12:17 PM IST
  • Facebook
  • Twitter
  • Whatsapp

ಮೈಸೂರು(ಸೆ.30): ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಆಹಾರ ಮೇಳದಲ್ಲಿ ಸ್ವಾದಿಷ್ಟರುಚಿಕರ ಊಟದೊಂದಿಗೆ ಈ ಬಾರಿ ‘ಮೈಸೂರು’ ಸೇರಿಕೊಂಡಿದೆ!

ಹೇಗೆ ಅಂತೀರಾ, ಮೈಸೂರು ಹೆಸರನ್ನು ಖ್ಯಾತಿಗೊಳಿಸಿರುವ ಮೈಸೂರು ವಿಳ್ಯದೆಲೆ, ಮಲ್ನಾಡ್‌ ಅಡಿಕೆ, ಮೈಸೂರು ಪಾಕ್‌ ಹಾಗೂ ನಂಜನಗೂಡು ರಸಬಾಳೆ ಒಳಗೊಂಡ ವಿಶೇಷ ಮಳಿಗೆಯು ಊಟದ ಮಳಿಗೆಗಳೊಂದಿಗೆ ಸೇರಿಕೊಂಡು ಜನರನ್ನು ತನ್ನತ್ತ ಸೆಳೆಯುತ್ತಿದೆ.

96 ಮಳಿಗೆಗಳು:

ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದಲ್ಲಿ ಆಯೋಜಿಸಿರು ಆಹಾರ ಮೇಳದಲ್ಲಿ ಒಟ್ಟು 96 ಮಳಿಗೆಗಳು ಸ್ಥಾಪಿತವಾಗಿದ್ದು, ಮಧ್ಯಾಹ್ನದಿಂದ ಬಹುತೇಕ ಮಳಿಗೆಗಳು ತೆರೆದಿವೆ. ಈ ನಡುವೆ ವೇದಿಕೆ ಹಿಂಭಾಗ ಈ ಬಾರಿ ಹೆಚ್ಚುವರಿಯಾಗಿ 12 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ದಸರಾ ಮಹೋತ್ಸವದ ಮೊದಲ ದಿನವಾದ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕೃತವಾಗಿ ಆಹಾರ ಮೇಳಕ್ಕೆ ಚಾಲನೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಆದಿವಾಸಿ ಜನರ ಸಾಂಪ್ರದಾಯಿಕ ಅಡುಗೆಗಳು ಜನರನ್ನು ಕೈಬೀಸಿ ಕರೆಯುತ್ತಿದೆ. ಬ್ಯಾಂಬೂ ಬಿರಿಯಾನಿ, ಏಡಿ ಕರಿ (ನಳ್ಳಿ ಕರಿ) ಮತ್ತು ಮುದ್ದೆ, ಬಿದಿರಕ್ಕಿ ಪಾಯಸ ಸಿಗುತ್ತಿದೆ. ಸಂಜೆಯತನಕ 300 ಪ್ಲೇಟು ಹೆಚ್ಚು ಬಿರಿಯಾನಿ ಮಾರಾಟವಾಗಬಹುದು ಎನ್ನುತ್ತಾರೆ ಆಯೋಜಕ ಪಿ. ಕೃಷ್ಣಯ್ಯ.

ನಾಟಿಕೋಳಿ ಸಾರು..!

ಸಿರಿಧಾನ್ಯಗಳ ಖಾದ್ಯ, ಬುಡಕಟ್ಟು ಜನಾಂಗದ ಖಾದ್ಯ ಹಾಗೂ ಹೊರರಾಜ್ಯಗಳ ಖಾದ್ಯ ಸೇರಿದಂತೆ ದೇಶ-ವಿದೇಶ ಖಾದ್ಯಗಳು ಸಿದ್ಧಗೊಂಡಿವೆ. ಹೊರ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ರಾಜಾಸ್ಥಾನ ಹಾಗೂ ಟಿಬೆಟ್‌ ಚೈನೀಸ್‌ ಅಡುಗೆ ತಯಾರಾಕರು ಆಗಮಿಸಿ ಜನರಿಗೆ ಸ್ವಾದಿಷ್ಟರುಚಿಕರ ಅಡುಗೆ ತಯಾರಿಸಿ ನೀಡುತ್ತಿದ್ದಾರೆ. ನಾಟಿಕೋಳಿ ಸಾರು ಹಾಗೂ ಅವರೆಕಾಳು ಸಾರು ಮುದ್ದೆ ಮಳಿಗೆಯತ್ತ ಜನರು ದಾಂಗುಡಿಯಿಟ್ಟಿದ್ದರು.
ಮಂಡ್ಯ: KRS ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಿ

ಶಾಸಕರಾದ ಎಲ್‌. ನಾಗೇಂದ್ರ, ಬಿ. ಹರ್ಷವರ್ಧನ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್‌, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಎಂಡಿಎ ಆಯುಕ್ತ ಪಿ.ಎಸ್‌. ಕಾಂತರಾಜ್‌, ಆಹಾರ ಸಮಿತಿ ಕಾರ್ಯದರ್ಶಿ ಶಿವಣ್ಣ, ಎಚ್‌.ವಿ.ರಾಜೀವ್‌, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಆಹಾರ ಇಲಾಖೆ ಉಪನಿರ್ದೇಶಕ ಪಿ. ಶಿವಣ್ಣ ಇದ್ದರು.

ಹತ್ತೆನ್ನೆರಡು ಮಳಿಗೆಯವರಿಗೆ ಭಾರೀ ಮೋಸ!

ಆಹಾರ ಮೇಳದಲ್ಲಿ 96 ಮಳಿಗೆಗಳನ್ನು ಸ್ಥಾಪಿಸಿದ್ದು, ಈ ಸಲ ಮುಖ್ಯ ವೇದಿಕೆ ಹಿಂಭಾಗ 12 ಮಳಿಗೆಗಳನ್ನು ಸ್ಥಾಪಿಸಿದ್ದು, ಮೊದಲ ದಿನವೇ ಯಾವೊಂದು ಅಂಗಡಿಗೂ ವ್ಯಾಪಾರವಾಗಿಲ್ಲ. ಇದನ್ನರಿತ ಮಾಲೀಕರು ಮಧ್ಯಾಹ್ನದೊತ್ತಿಗೆ ಆಯೋಜಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ದಸರಾ ವಸ್ತುಪ್ರದರ್ಶನ ಖಾಲಿ ಮಳಿಗೆ ಉದ್ಘಾಟಿಸಿದ ಸಿಎಂ

ಮಳಿಗೆ ಕ್ರಮ ಸಂಖ್ಯೆ 35 ರಿಂದ 42 ರವರೆಗಿನ ಮಳಿಗೆಗಳಿಗೆ ಜನರೇ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಮಳಿಗೆಗಳನ್ನು ಹಿಂಭಾಗ ಸ್ಥಾಪಿಸಲಾಗಿದೆ. ಯಾರೊಬ್ಬರಿಗೂ ಅಲ್ಲಿ ಮಳಿಗೆ ಇದೆ ಅನ್ನಿಸದಷ್ಟುಮೂಲೆ ತಳ್ಳಲಾಗಿದೆ. ದೂರದ ಹುಬ್ಬಳ್ಳಿಯಿಂದ ಬೀದರ್‌ನಿಂದ ರೊಟ್ಟಿಮಾಡುವ 3 ಮಳಿಗೆಗಳು ಬಂದಿವೆ. ಅದರ ಮಾಲೀಕರಾದ ಐಶ್ವರ್ಯ ಬಸವರಾಜ್‌, ಮಂಜುಳಾ ಅವರು ತಮ್ಮ ಅಳಲು ತೋಡಿಕೊಂಡರು.

ಕೆಲವರಿಗೆ ನಷ್ಟ:

ಮೈಸೂರಿನವರೇ ಆದ ಗೋಬಿ ಮಂಚೂರಿ, ಪಾನೀಪುರಿ ಅಂಗಡಿಯವರಿಗೂ ವ್ಯಾಪಾರವಾಗದೆ ತುಂಬಾ ನಷ್ಟಅನುಭವಿಸುವಂತಾಗಿದೆ. ಪ್ರತಿ ಮಳಿಗೆಗೆ ಸರ್ಕಾರ 20 ಸಾವಿರ ರು. ಠೇವಣಿ ಪಡೆದಿದ್ದು, ಮಾಲೀಕರು ಲಕ್ಷಾಂತರ ಬಂಡವಾಳ ಹಾಕಿ ಬಂದಿದ್ದರೂ ವ್ಯಾಪಾರವಾಗದೆ ಕೈಸುಟ್ಟುಕೊಂಡಂತಾಗಿದೆ. ಆಹಾರ ಮೇಳ ಉಪಸಮತಿಯವರು ಮಾಲೀಕರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಮಾಲೀಕರಾದ ಐಶ್ವರ್ಯ ಬಸವರಾಜ್‌, ಮಂಜುಳಾ, ಲೋಕೇಶ್‌, ಸೈಯದ್‌ ಹುಸೇನ್‌ ದೂರಿದರು.

ಸ್ವಚ್ಛತೆಗೆ ಆದ್ಯತೆ ನೀಡಿ- ವಿ. ಸೋಮಣ್ಣ

ಆಹಾರ ಮೇಳದಲ್ಲಿ ಅಂಗಡಿ ಮಾಲೀಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಣವನ್ನು ಹೇಗೆ ಬೇಕಾದರೂ ಸಂಪಾದಿಸಬಹುದು. ಆದರೆ ನ್ಯಾಯ ರೀತಿಯಿಂದ ಇರಲಿ. ಕಲಬೆರಕೆ ಪದಾರ್ಥಗಳನ್ನು ಬಳಸಬೇಡಿ. ಜನರು ಕೂಡ ಮಸಾಲೆ ಪದಾರ್ಥಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಆಹಾರ ಮೇಳ ಅತ್ಯುತ್ತಮವಾಗಿ ನಡೆಯುತ್ತಿದ್ದು, ನನಗಂತೂ ಖುಷಿಯಾಗುತ್ತಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ಆಯೋಜಕರಿಂದಲೇ ನೃತ್ಯ!

ಆಹಾರ ಮೇಳ ಉಪಸಮಿತಿಯ ಪದಾಧಿಕಾರಿಯಲ್ಲೊಬ್ಬರಾದ ಅರ್ಮದಾ ಪ್ರಸಾದ್‌ ಅವರು ತಮಿಳುನಾಡಿನಿಂದ ಬಂದಿದ್ದ ಕಲಾ ತಂಡದೊಂದಿಗೆ ಹೆಜ್ಜೆ ಹಾಕಿದರು. ತಲೆಯ ಮೇಲೆ ಗಡಿಗೆ ಹೊತ್ತು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರಂಜಿಸಿದರು.

ಮಗುವಿಗೆ ಹಾಲುಣಿಸುವಿಕೆಗೆ ಕೇಂದ್ರ

ಆಹಾರ ಮೇಳಕ್ಕೆ ಆಗಮಿಸುವ ತಾಯಂದಿರು ತಮ್ಮ ಹಸುಗೂಸಿಗೆ ಹಾಲುಣಿಸಲು ಈ ಬಾರಿ ಪ್ರತ್ಯೇಕ ಟೆಂಟ್‌ ಹಾಕಲಾಗಿದೆ. ಮಗುವಿಗೆ ಹಾಲುಣಿಸುವಿಕೆ ಕೇಂದ್ರ ತೆರೆಯಲಾಗಿದೆ. ಇದು ಈ ಬಾರಿಯ ಹೊಸ ವ್ಯವಸ್ಥೆಯಾಗಿದೆ.

- ಉತ್ತನಹಳ್ಳಿ ಮಹದೇವ

Follow Us:
Download App:
  • android
  • ios