ಮೈಸೂರು(ಸೆ.30): ಪ್ರತಿ ವರ್ಷದಂತೆಯೇ ಈ ವರ್ಷವೂ ಖಾಲಿ ಇರುವ ಮಳಿಗೆಗಳುಳ್ಳ ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು. ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸುವ ದಸರಾ ವಸ್ತು ಪ್ರದರ್ಶನದಲ್ಲಿ ಬಹುತೇಕ ಮಳಿಗೆ ಖಾಲಿ ಆಗಿರುತ್ತದೆ. ವಸ್ತು ಪ್ರದರ್ಶನ ಉದ್ಘಾಟನೆಗೊಂಡು, ಜಂಬೂಸವಾರಿ ಮುಗಿದ ನಂತರ ಒಂದಾಂದಾಗಿ ಸ್ಟಾಲ್‌ಗಳು ಆರಂಭವಾಗುತ್ತದೆ. ಹೆಚ್ಚಾಗಿ ಮಕ್ಕಳ ಆಟಿಕೆ, ತಿಂಡಿ ತಿನಿಸು ಮಾರಾಟ ಮಳಿಗೆಗಳು ಬೇಗನೆ ಆರಂಭವಾಗುತ್ತವೆ.

ಉಳಿದಂತೆ ಕರಕುಶಲ ವಸ್ತುಗಳು, ಬಟ್ಟೆಅಂಗಡಿ ಮತ್ತಿತರ ಅಲಂಕಾರಿಕ ವಸ್ತುಗಳ ಮಳಿಗೆಗಳು ನಿಧಾನವಾಗಿ ಆರಂಭವಾಗುತ್ತವೆ. ಅಂತೆಯೇ ಈ ಬಾರಿಯೂ ಖಾಲಿ ಇರುವ ಮತ್ತು ಇನ್ನೂ ಮಾರಾಟಕ್ಕಿಟ್ಟಉತ್ಪನ್ನಗಳನ್ನು ಜೋಡಿಸದಿರುವ ಮಳಿಗೆಗಳುಳ್ಳ ವಸ್ತು ಪ್ರದರ್ಶನ ಉದ್ಘಾಟನೆಗೊಂಡಿತು.

ದಸರಾ ವಸ್ತು ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಬಾರಿ ಮೈಸೂರು ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬೆಳಗ್ಗೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭವಾಗಿದೆ. ಮೈಸೂರು ದಸರದ ಪ್ರಮುಖ ಆಕರ್ಷಣೆಯಾದ ವಸ್ತು ಪ್ರದರ್ಶನವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. 1880ರಲ್ಲಿ 10ನೇ ಚಾಮರಾಜ ಒಡೆಯರ್‌ ಅವರಿಂದ ಕೈಗಾರಿಕೆ ಮತ್ತು ಅವುಗಳ ಉತ್ಪನ್ನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆರಂಭವಾದ ಈ ವಸ್ತು ಪ್ರದರ್ಶನ ಈಗ ದಸರಾದ ಭಾಗವಾಗಿದೆ. ಸರ್ಕಾರದ ಕಾರ್ಯಕ್ರಮದ ಪ್ರಗತಿ ತಿಳಿಸಲು ಇದು ಸಹಕಾರಿಯಾಗಿದೆ. ಈ ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಮಳಿಗೆ ಇದೆ ಎಂದರು.

100ಕ್ಕೂ ಹೆಚ್ಚು ಆಹಾರ ಮತ್ತು ವಿವಿಧ ಉತ್ಪನ್ನಗಳ ಮಳಿಗೆ

100ಕ್ಕೂ ಹೆಚ್ಚು ಆಹಾರ ಮತ್ತು ವಿವಿಧ ಉತ್ಪನ್ನಗಳ ಮಳಿಗೆ ಇದೆ. 3 ತಿಂಗಳ ಕಾಲ ಮೈಸೂರು ದಸರಾದಂತೆಯೇ ಮನೆಮಾತಾಗಿ ವಸ್ತು ಪ್ರದರ್ಶನ ನಡೆಯಲಿದೆ. ಇಲ್ಲಿ ಮಳಿಗೆ ತೆರೆದಿರುವ ಉದ್ಯಮಿಗಳು ಸ್ವಚ್ಛತೆಗೆ ಸಹಕರಿಸಿ ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕು. ಕೈ ಚೀಲ ಮನೆಯಿಂದ ತಂದು ಸ್ವಚ್ಛತೆಗೆ ಸಹಕರಿಸಿ. ಪರಿಸರ ಸ್ನೇಹಿಯಾಗಿ ನಡೆಯಲಿ. ಇಂದು ಆರಂಭಗೊಳ್ಳಬೇಕಿದ್ದರಿಂದ ವಸ್ತು ಪ್ರದರ್ಶನ ಉದ್ಘಾಟಿಸಲಾಯಿತು. ಸದ್ಯದಲ್ಲಿಯೇ ವಸ್ತು ಪ್ರದರ್ಶನಕ್ಕೆ ಪೂರ್ಣರೂಪ ದೊರೆಯಲಿದೆ ಎಂದು ಅವರು ತಿಳಿಸಿದರು.  ಸೋಮಣ್ಣ, ಪುಷ್ಪಲತಾ ಜಗನ್ನಾಥ್‌, ಜಿಪಂ ಪರಿಮಳಾ ಶ್ಯಾಂ ಇತರರು ಇದ್ದರು.

ಮಳಿಗೆಗಳೆಷ್ಟು?:

ಸುಮಾರು 250ಕ್ಕೂ ಹೆಚ್ಚು ಮಳಿಗೆಗಳಿವೆ. ಈ ಪೈಕಿ 18 ರಿಂದ 19 ಸರ್ಕಾರಿ ಮತ್ತು ವಿವಿಧ ನಿಗಮಗಳ ಮಳಿಗೆಗಳಿವೆ. ಆದರೆ ಯಾವುದೇ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಮಳಿಗೆಗಳಿಲ್ಲ. 15 ಮಕ್ಕಳ ಆಟಿಕೆಗಳಿವೆ. ಬಹುಪಾಲು ಮಳಿಗೆಗಳ ನಿರ್ಮಾಣ ಪೂರ್ಣಗೊಂಡಿವೆ. ಪ್ರವಾಸೋದ್ಯಮ ಇಲಾಖೆಯಿಂದ ಬೆಳವಾಡಿ ದೇವಾಲಯ ನಿರ್ಮಿಸಲಾಗಿದೆ.

ವಾರ್ತಾ ಇಲಾಖೆ ಮಳಿಗೆ ಉದ್ಘಾಟಿಸಿದ ಸಿ.ಟಿ. ರವಿ:

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಉದ್ಘಾಟಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಸಿದ್ದರಾಮಪ್ಪ, ಜಂಟಿ ನಿರ್ದೇಶಕ ಬಸವರಾಜ್‌ ಕಂಬಿ, ಉಪ ನಿರ್ದೇಶಕ ವಿನೋದ ಚಂದ್ರ, ಸಹಾಯಕ ನಿರ್ದೇಶಕ ಮಹೇಶ್‌, ರಾಜು ಹಾಗೂ ಇತರರು ಇದ್ದರು.

ಇದಕ್ಕೂ ಮುನ್ನ ಸಚಿವರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜನ್ನು ಹಾಗೂ ಇಲಾಖೆ ನಿರ್ದೇಶಕಿ ಕೆ.ಎಂ .ಜಾನಕಿ ಇದ್ದರು.