ಬೆಂಗಳೂರು [ಜ.12]:  ನಗರದಲ್ಲಿ ಶೇಕಡ 90ರಷ್ಟುಕಟ್ಟಡಗಳು ಕಾನೂನು ಬಾಹಿರವಾಗಿದ್ದು, ಅತಿಯಾಗಿ ಕಾನೂನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರಿಂ ಕೋರ್ಟ್‌ ಆದೇಶದಂತೆ ಶನಿವಾರ ಕೇರಳದ ಎರ್ನಾಕುಲಂನಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 350 ವಸತಿ ಸಮುಚ್ಛಯವನ್ನು ನೆಲಸಮಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಿರಂತವಾಗಿ ನಡೆಯುತ್ತಿದೆ. ನಗರದ ಶೇ.90ರಷ್ಟುಕಟ್ಟಡಗಳು ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಆದರೆ ಭಾರೀ ಪ್ರಮಾಣದಲ್ಲಿ ಕಾನೂನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ಬಿಬಿಎಂಪಿ ತೆರವುಗೊಳಿಸಲಿದೆ ಎಂದರು.

ನಿಯಮ ಉಲ್ಲಂಘನೆ: 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್‌ ಕ್ಷಣದಲ್ಲಿ ನೆಲಸಮ...

ಈವರೆಗೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ 2,626 ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಪೈಕಿ 1,600 ಕಟ್ಟಡಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ನಗರದಲ್ಲಿ 10 ಕೆರೆ ವ್ಯಾಪ್ತಿಯಲ್ಲಿಯೂ ಅಕ್ರಮ ಕಟ್ಟಡಗಳು ನಿರ್ಮಾಣ ಆಗಿರುವುದನ್ನು ಪತ್ತೆ ಮಾಡಲಾಗಿದ್ದು, ಇದನ್ನು ಕೂಡಲೇ ತೆರವು ಮಾಡಲಾಗುವುದು ಎಂದು ತಿಳಿಸಿದರು.

ಕೊಚ್ಚಿ ಮಾದರಿ ಆಗಬೇಕಿಲ್ಲ:

ಮೇಯರ್‌ ಎಂ.ಗೌತಮ್‌ಕುಮಾರ್‌ ಮಾತನಾಡಿ, ಕೊಚ್ಚಿ ಘಟನೆ ಬಿಬಿಎಂಪಿಗೆ ಮಾದರಿ ಆಗಬೇಕಿಲ್ಲ, ಪಾಲಿಕೆ ನಗರಾಭಿವೃದ್ಧಿ ಇಲಾಖೆ ಅಡಿ ಕಾರ್ಯ ನಿರ್ವಹಿಸುತ್ತಿದೆ. ಇಲಾಖೆಯ ನಿರ್ದೇಶನದ ಮೇರೆಗೆ ಪಾಲಿಕೆ ನಿರ್ಧಾರ ಕೈಗೊಳ್ಳಲಿದೆ. ನಗರದಲ್ಲಿನ ಅಕ್ರಮ ಕಟ್ಟಡಗಳು, ಕೆರೆ ಮತ್ತು ರಾಜಕಾಲುವೆ ಬಫರ್‌ ಜೋನ್‌ಗಳ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿವೆ. ಹೀಗಾಗಿ, ಪಾಲಿಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ- 2019 ರೂಪಿಸಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಬೈಲಾ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ 980 ಕಾನೂನು ಬಾಹಿರ ಕಟ್ಟಡ

ನಗರದಲ್ಲಿ ಅಕ್ರಮವಾಗಿ, ನಕ್ಷೆ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಕುರಿತು ಸರ್ವೇ ನಡೆಸಿದ್ದು 980 ನಕ್ಷೆ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳಿವೆ ಎಂದು ಗುರುತಿಸಿದೆ. ಪಶ್ಚಿಮ ವಲಯದಲ್ಲಿ 88, ದಕ್ಷಿಣದಲ್ಲಿ 274, ಪೂರ್ವದಲ್ಲಿ 108, ಬೊಮ್ಮನಹಳ್ಳಿಯಲ್ಲಿ 92, ದಾಸರಹಳ್ಳಿಯಲ್ಲಿ 3, ಮಹದೇವಪುರದಲ್ಲಿ 176, ಆರ್‌.ಆರ್‌. ನಗರದಲ್ಲಿ 103 ಹಾಗೂ ಯಲಹಂಕದಲ್ಲಿ 136 ಕಟ್ಟಡಗಳನ್ನು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.