ಒಂದೇ ದಿನ 9000 ಜನಕ್ಕೆ ವೈರಸ್! ಇಟಲಿ ಹಿಂದಿಕ್ಕುವತ್ತ ದಾಪುಗಾಲು
ಲಾಕ್‌ಡೌನ್ ತೆರವಾದ ಬಳಿಕ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಮಾರಕ ಕೊರೋನಾ ವೈರಸ್ ಮತ್ತೊಂದು ದಾಖಲೆ ಬರೆದಿದೆ. ಗುರುವಾರ ಬೆಳಗ್ಗೆವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 9304 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ ಇಷ್ಟೊಂದು ಸಂಖ್ಯೆಯ ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪಿಟಿಐ, ದೆಹಲಿ(ಜೂ.05): ಲಾಕ್‌ಡೌನ್ ತೆರವಾದ ಬಳಿಕ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಮಾರಕ ಕೊರೋನಾ ವೈರಸ್ ಮತ್ತೊಂದು ದಾಖಲೆ ಬರೆದಿದೆ. ಗುರುವಾರ ಬೆಳಗ್ಗೆವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 9304 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ ಇಷ್ಟೊಂದು ಸಂಖ್ಯೆಯ ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,16,919ಕ್ಕೆ ಹೆಚ್ಚಳವಾಗಿದೆ. 24 ತಾಸುಗಳ ಅವಧಿಯಲ್ಲಿ 260 ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ ಒಟ್ಟಾರೆ ಮೃತರ ಸಂಖ್ಯೆ 6000ದ ಗಡಿ ದಾಟಿ 6075ಕ್ಕೆ ಹೆಚ್ಚಳಗೊಂಡಿದೆ ಎಂದು ಸರ್ಕಾರ ತಿಳಿಸಿದೆ. ದೇಶದಲ್ಲಿ ಸದ್ಯ 1,06,737 ಕೊರೋನಾ ಸಕ್ರಿಯ ಪ್ರಕರಣಗಳು ಇದ್ದರೆ, 1,04,106 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.47.99ರಷ್ಟಿದೆ ಎಂದು ಸರ್ಕಾರ ತಿಳಿಸಿದೆ.
ಉಡುಪಿ ಜಿಲ್ಲೆ: 5 ಶತಕ ದಾಟಿದ ‘ಮಹಾಸೋಂಕು’
ಈ ನಡುವೆ ಪಿಟಿಐ ಸುದ್ದಿ ಸಂಸ್ಥೆ ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿ 9.50ರವರೆಗಿನ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ದೇಶದಲ್ಲಿ ಹೊಸದಾಗಿ 8226 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 2,17,389ಕ್ಕೆ ಏರಿಕೆಯಾಗಿದೆ. 227 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 6223ಕ್ಕೆ ಹೆಚ್ಚಳವಾಗಿದೆ.
2 ದಿನದಲ್ಲಿ ಇಟಲಿ ಹಿಂದಿಕ್ಕಿ ಭಾರತ 6ನೇ ಸ್ಥಾನಕ್ಕೆ?
ಅತಿ ಹೆಚ್ಚು ಕೊರೋನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸದ್ಯ 7ನೇ ಸ್ಥಾನದಲ್ಲಿದೆ. ಇದೇ ವೇಗದಲ್ಲಿ ಸೋಂಕು ದಾಖಲಾದರೆ 2.34 ಲಕ್ಷ ಪ್ರಕರಣಗಳೊಂದಿಗೆ 6ನೇ ಸ್ಥಾನದಲ್ಲಿರುವ ಇಟಲಿಯನ್ನೂ ಹಿಂದಿಕ್ಕುವ ಸಾಧ್ಯತೆಗಳಿವೆ. ಅಲ್ಲದೆ, ಕ್ರಮವಾಗಿ 2.81 ಲಕ್ಷ ಮತ್ತು 2.87 ಲಕ್ಷ ಸೋಂಕಿತರನ್ನು ಹೊಂದಿರುವ ಬ್ರಿಟನ್ ಮತ್ತು ಸ್ಪೇನ್ ಅನ್ನೂ 10 ದಿನಗಳಲ್ಲಿ ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿಯುವ ಅಪಾಯವೂ ಕಂಡುಬರುತ್ತಿದೆ.
ಮಹಾರಾಷ್ಟ್ರ: ದಾಖಲೆಯ 2933 ಹೊಸ ಸೋಂಕು
ದೇಶದಲ್ಲಿ ಕೊರೋನಾದಿಂದ ಅತಿ ಹೆಚ್ಚು ನಲುಗಿರುವ ಮಹಾರಾಷ್ಟ್ರದಲ್ಲಿ ವೈರಸ್ ಇನ್ನೂ ಅಟ್ಟಹಾಸ ಮೆರೆಯುತ್ತಲೇ ಇದೆ. ಗುರುವಾರ ಒಂದೇ ದಿನ ಆ ರಾಜ್ಯದಲ್ಲಿ ದಾಖಲೆಯ 2933 ಹೊಸ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 77793ಕ್ಕೆ ಏರಿಕೆಯಾಗಿದೆ. 123 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 2710ಕ್ಕೆ ಹೆಚ್ಚಳವಾಗಿದೆ.
ಅಮೆರಿಕದಲ್ಲಿ ನಿತ್ಯ 1000 ಜನ ಸಾವು
ಅಮೆರಿಕದಲ್ಲಿ ಕೊರೋನಾ ಹಾವಳಿ ತಗ್ಗುತ್ತಲೇ ಇಲ್ಲ. ಪ್ರತಿನಿತ್ಯ ಸರಾಸರಿ 20 ಸಾವಿರ ಮಂದಿಯಲ್ಲಿ ಸೋಂಕು ಕಂಡುಬರುತ್ತಿದ್ದರೆ, ನಿತ್ಯ ಸರಾಸರಿ 1000 ಮಂದಿ ಸಾವಿಗೀಡಾಗುತ್ತಿದ್ದಾರೆ. ಸದ್ಯ ಅಮೆರಿಕದಲ್ಲಿ 19 ಲಕ್ಷ ಸೋಂಕಿತರಿದ್ದರೆ, ಮೃತರ ಸಂಖ್ಯೆ 1.09 ಲಕ್ಷದಷ್ಟಿದೆ.