ಉಡುಪಿ(ಆ.15): ಈ ಬಾರಿಯ ಮಳೆಗೆ ಜಿಲ್ಲೆಯಲ್ಲಿ ಒಟ್ಟು 9 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವರು, ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಜುಲೈ ತಿಂಗಳ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಅಂಗನವಾಡಿ, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲಾ ಕಟ್ಟಡಗಳ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಸಿಇಒ ಸಿಂಧೂ ರೂಪೇಶ್‌ ಅವರು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

1167 ಹೆಕ್ಟೇರ್‌ ಭತ್ತದ ಕೃಷಿ ಪ್ರದೇಶ ಜಲಾವೃತ:

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ 1167 ಹೆಕ್ಟೇರ್‌ ಭತ್ತದ ಕೃಷಿ ಪ್ರದೇಶ ಜಲಾವೃತಗೊಂಡಿದೆ. 263 ಹೆಕ್ಟೇರ್‌ ಬೆಳೆ ಹಾನಿ ವರದಿಯಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಜಲಾವೃತಗೊಂಡ ಕೃಷಿ ಭೂಮಿಯ ಪರಿಶೀಲನೆ ನಡೆಸುತ್ತಿದ್ದು, ಶೇ.33ಕ್ಕಿಂತ ಹೆಚ್ಚಿನ ಹಾನಿಗೆ ಪರಿಹಾರ ನೀಡಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಭಾರಿ ಮಳೆಗೆ ಜಿಲ್ಲೆಯಲ್ಲಿ 6.2 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಹೇಳಿದರು.

ಉಡುಪಿ: ಕಲ್ಲುಬಂಡೆಯಲ್ಲೇ ಭತ್ತ ಬೆಳೆದ ರೈತ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿಕಾಂತ್‌ ಪಡುಬಿದ್ರೆ, ಬಾಬು ಶೆಟ್ಟಿ, ಉದಯ ಕೋಟ್ಯಾನ್‌, ಸಿಪಿಒ ಶ್ರೀನಿವಾಸ್‌ ರಾವ್‌, ಯೋಜನಾ ನಿರ್ದೇಶಕ ಮಧುಕುಮಾರ್‌ ಉಪಸ್ಥಿತರಿದ್ದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ