Asianet Suvarna News Asianet Suvarna News

ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ 9 ಲಕ್ಷ ಜನರಿಗೆ ಕೋವಿಡ್‌ ಪರೀಕ್ಷೆ..!

* ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ನಿತ್ಯ ಅಂದಾಜು 3 ಸಾವಿರ ಮಂದಿಗೆ ಟೆಸ್ಟ್‌
* ಮನೆ ಮನೆ ಸರ್ವೆ ಆರಂಭಿಸಿದ ಜಿಲ್ಲಾಡಳಿತ
* ಜಿಲ್ಲಾಡಳಿತದಿಂದ ಶ್ರಮದಿಂದ ಎರಡೂ ಜಿಲ್ಲೆಯಲ್ಲಿ ಕೊರೋನಾ ಹಾವಳಿ ನಿಯಂತ್ರಣ

9 Lakh Covid Test in Ballari and Vijayanagara Districts So Far grg
Author
Bengaluru, First Published Jun 28, 2021, 12:34 PM IST

ಬಳ್ಳಾರಿ(ಜೂ.28): ಕೊರೋನಾ ಸೋಂಕಿನ ಏರಿಕೆ ಹಾಗೂ ಸಾವಿನ ಪ್ರಮಾಣದ ಹೆಚ್ಚಳದಿಂದ ರಾಜ್ಯದ ಗಮನ ಸೆಳೆದಿದ್ದ ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಈವರೆಗೆ 9 ಲಕ್ಷಕ್ಕೂ ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ!

ಎರಡನೇ ಅಲೆ ಭೀಕರತೆ ಹೆಚ್ಚಾದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮನೆ ಮನೆ ಸರ್ವೆ ಆರಂಭಿಸಿತಲ್ಲದೆ, ಕೋವಿಡ್‌ ಪರೀಕ್ಷೆಯ ಮೂಲಕ ಸೋಂಕಿತರನ್ನು ಹುಡುಕಾಡಿ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲು ಮಾಡಿತು. ಇದರ ಪರಿಣಾಮವೇ ಎರಡು ಜಿಲ್ಲೆಯಲ್ಲಿ ಕೊರೋನಾ ದಾಳಿ ಇಳಿಮುಖವಾಗಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಎರಡು ಜಿಲ್ಲೆಯಲ್ಲಿ ನಿತ್ಯ 2.5ರಿಂದ 3 ಸಾವಿರ ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದ್ದು, ಒಮ್ಮೊಮ್ಮೆ ಪರೀಕ್ಷೆಯ ಸಂಖ್ಯೆ 4 ಸಾವಿರವೂ ದಾಟಿದೆ. ಇದೀಗ ನಿತ್ಯ ಕನಿಷ್ಠ 2500ಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ರ‍್ಯಾಪಿಡ್  ಪರೀಕ್ಷೆ 2,76,683 ಇದ್ದು, ಆರ್‌ಟಿ-ಪಿಸಿಆರ್‌ ಪರೀಕ್ಷೆ 6,24,101 ದಾಟಿದೆ.

ತಗ್ಗಿದ ಕೊರೋನಾ: 1,000 ಬೆಡ್‌ನ ಜಿಂದಾಲ್‌ ಕೋವಿಡ್‌ ಆಸ್ಪತ್ರೆ ಬಂದ್‌

ಜೂ. 26ರ ವರದಿಯಂತೆ ಬಳ್ಳಾರಿ ಜಿಲ್ಲೆಯ ಪೈಕಿ ಬಳ್ಳಾರಿ 469, ಸಂಡೂರು 45 ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 75 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ. ಬಳ್ಳಾರಿಯ 469 ಸಕ್ರಿಯ ಪ್ರಕರಣಗಳಲ್ಲಿ ಬಳ್ಳಾರಿ ನಗರದ್ದೇ 325 ಪ್ರಕರಣಗಳಿವೆ. ಇನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ 47, ಹಡಗಲಿ 69, ಹೊಸಪೇಟೆ 170, ಹಗರಿಬೊಮ್ಮನಹಳ್ಳಿ 61 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 105 ಸಕ್ರಿಯ ಪ್ರಕರಣಗಳು ಇವೆ.

ಎಚ್ಚರ ತಪ್ಪಿದರೆ ಅಪಾಯ:

ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ ಸೋಂಕು ಇಳಿಮುಖವಾಗಿದೆ ನಿಜ. ಆದರೆ, ಸಾರ್ವಜನಿಕರು ಕೋವಿಡ್‌ ಕುರಿತು ನಿರ್ಲಕ್ಷ್ಯ ಮುಂದುವರಿಸಿದರೆ ಮತ್ತೆ ಅಪಾಯ ಕಾದಿದೆ ಎನ್ನುತ್ತಾರೆ ಜಿಲ್ಲೆಯ ವೈದ್ಯಾಧಿಕಾರಿಗಳು. ಎರಡು ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಸಕ್ರಿಯ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೋವಿಡ್‌ ಸೋಂಕಿತರು ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಾಗಂತ ಜನರು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೊರೋನಾ ವೈರಸ್‌ ರೂಪಾಂತರಗೊಳ್ಳುತ್ತಿರುವುದರಿಂದ ಎಚ್ಚರದಿಂದ ಇರುವುದು ಸೂಕ್ತ ಎನ್ನುತ್ತಾರೆ.

ಕೋವಿಡ್‌ನಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ದಾರಿಯಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಇಲ್ಲ. ನಾನಾ ವದಂತಿಗಳಿಗೆ ಕಿವಿಗೊಟ್ಟು ಲಸಿಕೆಯಿಂದ ದೂರ ಉಳಿಯುತ್ತಿದ್ದಾರೆ. ಇದು ಹೆಚ್ಚು ಅಪಾಯ ತಂದೊಡ್ಡುವ ಸಂಗತಿಯಾಗಿದೆ. ಈಗ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಯಾವುದೇ ಸಮಸ್ಯೆಯಿಲ್ಲ. ಲಸಿಕೆಗಾಗಿ ಮುಗಿಬೀಳಬೇಕಾದ ಅಗತ್ಯವೂ ಇಲ್ಲ ಎಂದು ವೈದ್ಯಾಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕೊಟ್ಟೂರಲ್ಲಿ 'ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆಗೆ ಗ್ರೀನ್‌ ಸಿಗ್ನಲ್‌..!

ಬಳ್ಳಾರಿ ಜಿಲ್ಲೆಯ ಕೊರೋನಾ ಸೋಂಕು ಏರಿಕೆಯ ಪ್ರಮಾಣ ನೋಡಿದರೆ ಭಾರಿ ಸಂಖ್ಯೆಯಲ್ಲಿ ಸಾವುಗಳು ಸಂಭವಿಸುವ ಆತಂಕ ಎದುರಾಗಿತ್ತು. ಆದರೆ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದರಿಂದ ಸೋಂಕು ಪತ್ತೆ ಹಚ್ಚಿ, ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಸಾರ್ವಜನಿಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ತಿಳಿಸಿದ್ದಾರೆ.  

ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟು ಶ್ರಮಿಸಿದೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಹಾವಳಿ ನಿಯಂತ್ರಣಗೊಂಡಿದೆ. ಹಾಗಂತ ಜನರು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಕೋವಿಡ್‌ ನಿಯಮ ಪಾಲಿಸಿದರೆ ಹೆಚ್ಚು ಸುರಕ್ಷಿತ ಎಂದು ಬಳ್ಳಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ ಹೇಳಿದ್ದಾರೆ. 
 

Follow Us:
Download App:
  • android
  • ios