Asianet Suvarna News Asianet Suvarna News

9 ಕಿಮೀ ಪ್ರಧಾನಿ ಮೋದಿ ರೋಡ್‌ ಶೋ; ದಾರಿಯುದ್ದಕ್ಕೂ ಮೊಳಗಿದ ಜೈಕಾರ!

ಧಾರವಾಡ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಹುಬ್ಬಳ್ಳಿ ನಗರದಲ್ಲಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಸ್ವಾಗತ ದೊರಕಿತು.

9 km PM narendramodi road show at hubballi rav
Author
First Published Jan 13, 2023, 9:59 AM IST

ಬಸವರಾಜ ಹಿರೇಮಠ

ಹುಬ್ಬಳ್ಳಿ (ಜ.13) : ಧಾರವಾಡ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಹುಬ್ಬಳ್ಳಿ ನಗರದಲ್ಲಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಸ್ವಾಗತ ದೊರಕಿತು.

ಇಲ್ಲಿಯ ವಿಮಾನ ನಿಲ್ದಾಣ(Airport)ದಿಂದ ಸಮಾರಂಭ ನಡೆಯಲಿದ್ದ ರೈಲ್ವೆ ಮೈದಾನ(Railway ground) ವರೆಗಿನ ಸುಮಾರು ಎಂಟು ಕಿಮೀ ದೂರ ನಿರಂತರವಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನಸ್ತೋಮವಿತ್ತು. ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಸಮೀಪದಿಂದ ನೋಡಲು ಮಧ್ಯಾಹ್ನ 12ರಿಂದಲೇ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು, ಮಹಿಳೆಯರು ಮತ್ತು ಮಕ್ಕಳು ಕಾದು ನಿಂತಿದ್ದರು. ಮಧ್ಯಾಹ್ನ 3.40ರ ನಂತರ ಮೋದಿ ಅವರು ಕಾರಿನಲ್ಲಿ ಆಗಮಿಸುತ್ತಿದ್ದಂತೆ, ಮೋದಿ ಮೋದಿ ಎಂದು ಹರ್ಷೋದ್ಗಾರಗೈಯ್ಯುತ್ತ ಪುಳುಕಿತರಾದ ಜನೋಸ್ತೋಮವು ಸಾರ್ಥಕತೆಯ ನಿಟ್ಟಿಸಿರು ಬಿಟ್ಟಿತು. ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಜನರತ್ತ ಕೈಬೀಸುತ್ತ ರೋಡ್‌ ಶೋ ನಡೆಸಿದರು.

ತಮಗಾಗಿ ಕಿಕ್ಕಿರಿದು ನಿಂತಿದ್ದ ಜನರತ್ತ ಹಸನ್ಮುಖಿಯಾಗಿ ಕೈ ಬೀಸುತ್ತ ಮಧ್ಯಾಹ್ನದ ಉರಿ ಬಿಸಿಲು ಲೆಕ್ಕಿಸದೇ ಮೋದಿ ಅವರು ನೆರೆದ ಜನರ ಉತ್ಸಾಹಕ್ಕೆ ಮತ್ತಷ್ಟುಉತ್ಸಾಹದ ಬುಗ್ಗೆ ತುಂಬಿದರು. ಕಪ್ಪು ವರ್ಣದ ಟೋಯೋಟಾ ಫಾಚ್ರ್ಯೂನರ್‌ ಕಾರಿನಲ್ಲಿ ಆಗಮಿಸಿದ ಮೋದಿ ಎಂಟು ಕಿ.ಮೀ. ದೂರವೂ ನಿಧಾನವಾಗಿ ಸಾಗುತ್ತಾ ಎರಡೂ ಬದಿಯಲ್ಲಿನ ಜನರತ್ತ ಕೈ ಬೀಸಿದರು. ಅವರ ದರ್ಶನವಾಗುತ್ತಿದಂತೆ ಜನರೂ ಸಹ ಅವರತ್ತ ಘೋಷಣೆಗಳನ್ನು ಕೂಗಿ ಕೈ ಬೀಸುತ್ತಾ, ಪುಷ್ಪಾರ್ಚನೆಗೈಯ್ಯುವ ಮೂಲಕ ಹುಬ್ಬಳ್ಳಿ ನಗರಕ್ಕೆ ವಿಶೇಷ ಸ್ವಾಗತ ಕೋರಿದರು.

ಬಿರಿ ಬಿಸಿಲಲ್ಲೂ ರೋಡ್‌ ಶೋ:

ಸಾಮಾನ್ಯವಾಗಿ ರೋಡ್‌ ಶೋ ತೆರೆದ ವಾಹನದಲ್ಲಿ ಮಾಡಲಾಗುತ್ತದೆ. ಆದರೆ, ಪ್ರಧಾನಿಗಳ ಭದ್ರತಾ ದೃಷ್ಟಿಯಿಂದ ತೆರೆದ ವಾಹನ ಸಾಧ್ಯವಾಗಲಿಲ್ಲ. ಹೀಗಾಗಿ 73 ವರ್ಷದ ಮೋದಿ ಅವರು ಕಾರಿನ ಒಂದು ಬಾಗಿಲು ತೆರೆದು ಫುಟ್‌ ಬೋರ್ಡ್‌ನಲ್ಲಿ 45 ನಿಮಿಷಗಳ ಕಾಲ ನಿಂತು ಜನರತ್ತ ಕೈ ಬೀಸಿದ್ದು ಸಾಮಾನ್ಯದ ಮಾತಲ್ಲ. ಬಿರು ಬಿಸಿಲಿನಲ್ಲೂ ಇಡೀ ರೋಡ್‌ನಲ್ಲಿ ಒಂಚೂರು ಸುಸ್ತಾದಂತೆ ಕಾಣದೇ ನಗುಮುಖದಲ್ಲಿಯೇ ಎರಡೂ ಬದಿಯ ಜನರತ್ತ ಕೈ ಬೀಸುತ್ತಿದ್ದ ಮೋದಿ ಅವರನ್ನು ಕಂಡು ಬಹಳಷ್ಟುಜನರು ಮೋದಿ ಬಗ್ಗೆ ಸಾಕಷ್ಟುಕೇಳಿದ್ವಿ, ಈಗ ಸಮೀಪದಲ್ಲಿಯೇ ಅವರ ದರ್ಶನವಾಗಿದ್ದು ನಮ್ಮ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣದಿಂದ ಸುಮಾರು 2 ಕಿ.ಮೀ. ದೂರದ ವರೆಗೂ ರಸ್ತೆಯ ತುಂಬೆಲ್ಲ ರಂಗೋಲಿ ಹಾಕಿ ಸ್ವಾಗತ ಕೋರಲಾಗಿತ್ತು. ನೂರಾರು ಮಹಿಳೆಯರು ರಂಗೋಲಿ ಹಾಕಿದ್ದರು. ಅದೇ ರೀತಿ ದಾರಿಯುದ್ದಕ್ಕೂ ಮೋದಿ ಅವರತ್ತ ಪುಷ್ಪವೃಷ್ಟಿಗೈದರು.

ಕೇಸರಿಮಯ..

ಮೋದಿ ಆಗಮನದ ಹಿನ್ನೆಲೆ ಅವರು ಸಂಚರಿಸುತ್ತಿದ್ದ ವಿಮಾನ ನಿಲ್ದಾಣದಿಂದ ಗೋಕುಲ ರಸ್ತೆ, ಹೊಸೂರ ವೃತ್ತ, ನೀಲಿಜನ್‌ ರಸ್ತೆ, ಬಿಜೆಪಿ ಕಾರ್ಯಾಲಯ ಎದುರಿನ ರಸ್ತೆ, ಕೋರ್ಚ್‌ ವೃತ್ತ ಹಾಗೂ ರೈಲ್ವೆ ಮೈದಾನದ ವರೆಗೂ ಸಂಪೂರ್ಣವಾಗಿ ಕೇಸರ ಬಟ್ಟೆಕಟ್ಟಿ, ಮೋದಿ ಭಾವಚಿತ್ರ ಅಳವಡಿಸಿ ಸಿಂಗಾರ ಮಾಡಲಾಗಿತ್ತು.

ವಾಯುಸೇನೆಯ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಗೆ ಬಂದಿಳಿದ ಮೋದಿ ಅವರರನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಕೀಡಾ ಸಚಿವ ಅನುರಾಗ ಸಿಂಗ್‌ ಠಾಕೂರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತಿತರರು ಹೂಗುಚ್ಛ ನೀಡಿ ಸ್ವಾಗತಿಸಿದರು. ಜತೆಗೆ ಅವರ ರೋಡ್‌ ಶೋದಲ್ಲೂ ಅವರ ಹಿಂದೆಯೇ ಸಾಗಿದರು.

Narendra Modi: ಪ್ರಧಾನಿ ಸ್ವಾಗತಿಸುವುದನ್ನು ಮರೆತ ಮೇಯರ್‌; ಸಾರ್ವಜನಿಕರಿಂದ ಟೀಕೆ

ವಿಮಾನ ನಿಲ್ದಾಣದಿಂದ ಹೊರ ಬಂದ ಪ್ರಧಾನಿ ಗೋಕುಲ ರಸ್ತೆಗೆ ಬರುತ್ತಿದ್ದಂತೆ ಅಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರಿದ್ದರು. ಆಗ ಕೆಳಕ್ಕಿಳಿದ ಮೋದಿ ಎರಡು ಸುತ್ತು ರಸ್ತೆಯ ಅತ್ತಿಂದ ಇತ್ತ ಸುತ್ತು ಹಾಕಿ ಅಭಿಮಾನಿಗಳತ್ತ ಕೈಬೀಸಿದರು. ಬಳಿಕ ಮತ್ತೆ ಕಾರು ಹತ್ತಿ ಒಂದು ಕಿ.ಮೀ. ದೂರ ತೆರಳಿದರು. ಆದರೆ ರಸ್ತೆಯ ಇಕ್ಕೆಲದಲ್ಲಿ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ನೋಡಿ ಉತ್ತೇಜಿತರಾಗಿ ಕಾರಿನಿಂದ ಇಳಿದು ಫುಟ್‌ಬೋರ್ಡ್‌ನ ಮೇಲೆ ನಿಂತು ಎಂಟು ಕಿ.ಮೀ. ದೂರದ ವರೆಗೂ ಸಾಗಿದರು. ಅಭಿಮಾನಿಗಳತ್ತ ಕೈಬೀಸಿದರು.

ರೋಡ್‌ ಶೋದಲ್ಲಿ ಮೋದಿ ಗಮನ ಸೆಳೆಯಲು ಅಭಿಮಾನಿ ಬಳಗ ಕೈಯಲ್ಲಿ ಬಿಜೆಪಿ ಧ್ವಜ ಹಿಡಿದು ಜೈಕಾರ ಕೂಗಿರುವುದು ಸೇರಿದಂತೆ ಹತ್ತು ಹಲವು ಪ್ರಯೋಗಗಳನ್ನು ಮಾಡಿತು. ಹತ್ತಾರು ಜನರು ಕೂಡಿ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಅಭಿಮಾನ ಮೆರೆದರೆ, ಇನ್ನು ಕೆಲವರು ತಮ್ಮ ಕೈಯ್ಯಾರೆ ಮೋದಿ ಚಿತ್ರ ಬಿಡಿಸಿ ಮೋದಿ ಗಮನ ಸೆಳೆಯಲು ಪ್ರಯತ್ನಿಸಿದರು. ಮತ್ತೆ ಕೆಲವರು ತಮ್ಮ ಮಕ್ಕಳಿಗೆ ಶ್ರೀರಾಮ, ಸೀತೆ, ಶಿವಾಜಿ, ರಾಣಿ ಕಿತ್ತೂರು ಚೆನ್ನಮ್ಮ, ವಿವೇಕಾನಂದರ ವೇಷ ಧರಿಸಿ ಮೋದಿ ಅವÃ ಗಮನ ಸೆಳೆದರು. ಗೋಕುಲ ರಸ್ತೆಯಲ್ಲಿ ಮೋದಿ ಅವರ ವೀಕ್ಷಣೆಗಾಗಿ ಶಿವಾಜಿ ಮತ್ತು ಬಸವೇಶ್ವರ ಮೂರ್ತಿ ಸಹ ನಿಯೋಜನೆ ಮಾಡಲಾಗಿತ್ತು. ಇನ್ನು, ಮೋದಿ ಅವರನ್ನೇ ಹೋಲುವ ಬಾಗಲಕೋಟೆ ಮೂಲದ ಪಾಂಡುರಂಗ ಕುಲಕರ್ಣಿ ಎಂಬುವರು ಮೋದಿ ಅವರ ವೀಕ್ಷಣೆಗೆ ಬಂದಿದ್ದು ಸೇರಿದ ಜನರ ಗಮನ ಸಳೆದರು.

ಪೊಲೀಸ್‌ ಬಂದೋಬಸ್ತ್:

ಪ್ರಧಾನಿಗಳ ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದ ವರೆಗೆ ರೋಡ್‌ ಶೋ ಮಾಡುವ ರಸ್ತೆ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಪ್ರಧಾನಿಗಳು ಬರುವ ಒಂದು ಗಂಟೆ ಮುಂಚೆಯೇ ಸಂಪೂರ್ಣವಾಗಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ರಸ್ತೆಗೆ ಯಾರೊಬ್ಬರೂ ಇಳಿಯದಂತೆ ಕಟ್ಟುನಿಟ್ಟಿನ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು. ಇಷ್ಟಾಗಿಯೂ ಗೋಕುಲ ರಸ್ತೆಯಲ್ಲಿ ಮೋದಿ ಅವರು ಜನರತ್ತ ಕೈ ಬೀಸುವಾಗ ನುಗ್ಗಿ ಬಂದ 11 ವರ್ಷದ ಬಾಲಕನೋರ್ವ ಮೋದಿ ಅವರಿಗೆ ಹೂವಿನ ಮಾಲೆ ನೀಡಿದ್ದು ಅಚ್ಚರಿ ಮೂಡಿಸಿತು. ನಂತರ ಬಾಲಕನನ್ನು ಕರೆಯಿಸಿ ವಿಚಾರಣೆ ನಡೆಸಲಾಯಿತು.

ಹಕ್ಕುಪತ್ರ ವಿತರಣೆಗೆ ಮೋದಿಯವರನ್ನ ಕರೆಸಿದ್ರೆ ಶಾಸಕರು, ಸಚಿವರು ಯಾಕಿರಬೇಕು? : ಎಚ್‌ಡಿಕೆ

ಮರಳುಗವಾಗಲೂ ಜೈಕಾರ!

ನರೇಂದ್ರ ಮೋದಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನಕ್ಕೆ ರೋಡ್‌ ಶೋ ಮಾಡುತ್ತಾ ಸಾಗುವಾಗ ಇದ್ದಷ್ಟೇ ಜನರು ಅವರು ಯುವಜನೋತ್ಸವ ಉದ್ಘಾಟನೆ ನೆರವೇರಿಸಿ ಮರಳಿ ವಿಮಾನ ನಿಲ್ದಾಣದತ್ತ ಕಾರಿನಲ್ಲಿ ಸಾಗುತ್ತಿದ್ದಾಗಲೂ ಅಷ್ಟೇ ಸಂಖ್ಯೆಯ ಜನರು ಅವರಿಗೆ ಪುಷ್ಪಾರ್ಪಣೆ ಹಾಗೂ ಜೈ ಜೈ ಮೋದಿ ಎಂಬ ಘೋಷಣೆಗಳ ಮೂಲಕ ಆತ್ಮೀಯವಾಗಿ ಬೀಳ್ಕೊಟ್ಟರು. ಬರೀ ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ ಹಾವೇರಿ, ಗದಗ, ಬಾಗಲಕೋಟ, ಬೆಳಗಾವಿ, ವಿಜಯಪೂರದಿಂದಲೂ ಮೋದಿ ಅಭಿಮಾನಿಗಳು ಆಗಮಿಸಿದ್ದು ವಿಶೇಷ.

Follow Us:
Download App:
  • android
  • ios