ಚಿಕಿತ್ಸೆ ಇಲ್ಲ, ಆಸ್ಪತ್ರೆ ಸೇರಲಿಲ್ಲ, ಕೊರೋನಾ ಸೋಂಕು ಮಾಯ..!
ವರದಿ ಕೈ ಸೇರಿದ ಮಾರನೇ ದಿನವೇ ಇಲ್ಲವಾದ ಸೋಂಕು| ರೋಗನಿರೋಧಕ ಶಕ್ತಿ ಕಾರಣ| ತಾಲೂಕಿನ 35 ಮಂದಿ ಸೋಂಕಿತರು ಆಸ್ಪತ್ರೆಗೆ ಹೋಗದೆ ಬಿಡುಗಡೆ| ಕೊರೋನಾದಿಂದ ಆತಂಕಕ್ಕೆ ಸಿಲುಕಿರುವ ಮಂದಿಗೆ ಇದು ಒಳ್ಳೆಯ ಸುದ್ದಿ|
ಸು.ನಾ.ನಂದಕುಮಾರ್
ಚನ್ನಪಟ್ಟಣ(ಜು.23): ಮಂಗಳವಾರ ಜಿಲ್ಲಾಡಳಿತದ ಕೈ ಸೇರಿದ ವರದಿಯಲ್ಲಿ ತಾಲೂಕಿನ 9 ಮಂದಿಗೆ ಸೋಂಕು ಪತ್ತೆಯಾಗಿದೆ. ಅಚ್ಚರಿ ಎಂದರೆ ಬುಧವಾರ ಬೆಳಿಗ್ಗೆ ಇವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಇವರ ವರದಿ ನೆಗೆಟಿವ್...!
ಹೌದು.. ಈ ಸಂಗತಿ ವಿಚಿತ್ರವಾದರೂ ಸತ್ಯ. ಯಾವುದೇ ಚಿಕಿತ್ಸೆ ಇಲ್ಲದೆ, ಆಸ್ಪತ್ರೆಯಲ್ಲಿ ದಾಖಲೂ ಆಗದೆ, ತಾಲೂಕಿನ ಸಾಕಷ್ಟು ಮಂದಿಯಲ್ಲಿ ಕೊರೋನಾ ಸೋಂಕು ಅದರಷ್ಟಕ್ಕೆ ಅದೇ ವಾಸಿಯಾಗಿದೆ. ಅವರ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಬಳಸಿಕೊಂಡು.
ವರದಿ ಬರುವ ಮೊದಲೇ ಗುಣಮುಖ:
ಜು.8 ರಂದು ಕೋವಿಡ್ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಗಂಟಲು ದ್ರವದ ಮಾದರಿಯ ಫಲಿತಾಂಶ ಜು.21 ರಂದು ತಾಲೂಕು ಆರೋಗ್ಯ ಇಲಾಖೆಯ ಕೈಸೇರಿದೆ. ಈ ಫಲಿತಾಂಶದಲ್ಲಿ ತಾಲೂಕಿನ ಗ್ರಾಮೀಣ ಭಾಗದ 5 ಮಂದಿಗೆ, ನಗರ ಪ್ರದೇಶದ 4 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.
ಸೋಂಕಿತರನ್ನು ಹುಡುಕಿದ ಆರೋಗ್ಯ ಇಲಾಖೆ ಇವರಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದಿರುವುದನ್ನು ಕಂಡುಆಶ್ಚರ್ಯ ಗೊಂಡಿತು. ಈಗಾಗಲೇ 13 ದಿನಗಳ ಬಳಿಕ ವರದಿ ಬಂದಿರುವ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ಮತ್ತೊಮ್ಮೆ ಪರೀಕ್ಷೆ ಮಾಡುವ ನಿರ್ಧಾರಕ್ಕೆ ಬಂದಿತು.
'ಹೆಚ್‌ಡಿಕೆ, ಡಿಕೆಶಿ ಆಂತರಿಕವಾಗಿ ಬಿಜೆಪಿ ಸರ್ಕಾರದ ಜೊತೆಗಿದ್ದಾರೆ'
ನೆರವಾದ ಆ್ಯಂಟಿಜನ್ ಟೆಸ್ಟ್:
ಕೊರೋನಾ ವಾರಿಯರ್ಸ್ ಮತ್ತು ಪ್ರಮುಖ ಸನ್ನಿವೇಶದಲ್ಲಿ ತುರ್ತಾಗಿ ಸೋಂಕು ಗುರುತಿಸಲು ನೆವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಆರೋಗ್ಯ ಇಲಾಖೆಗೆ ರಾರಯಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್‌ಗಳನ್ನು ನೀಡಿದೆ. ಈ ಕಿಟ್ ಅನ್ನು ಬಳಸಿಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ ಪಾಸಿಟಿವ್ ಎಂದು ವರದಿ ಬಂದ 9 ಮಂದಿಯನ್ನು ಮತ್ತೆ ತಪಾಸಣೆಗೆ ಒಳಪಡಿಸಿದಾಗ ಅಚ್ಚರಿ ಕಾಯ್ದಿತ್ತು. ಅದೇನೆಂದರೆ ಅವರೆಲ್ಲರಿಗೂ ಕೊರೋನಾ ಸೋಂಕು ಇರಲಿಲ್ಲ.
ಈ ಹಿಂದೆ ಗಂಟಲುದ್ರವದ ಮಾದರಿಯನ್ನು ತೆಗೆದಾಗ ಕಾಣಿಸಿಕೊಂಡಿದ್ದ ಸೋಂಕು ಇದೀಗ ಸಂಪೂರ್ಣ ಗುಣಮುಖವಾಗಿದೆ. ಈ ಸೋಂಕು ಇಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಇವರೆಲ್ಲರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿರುವ ಜಿಲ್ಲಾಡಳಿತ ಇವರಿಗೆ ಮತ್ತೊಮ್ಮೆ ತಪಾಸಣೆ ನಡೆಸಿ ಸೋಂಕು ಇಲ್ಲ ಎಂದು ಪುನಃ ಖಚಿತ ಪಡಿಸಿಕೊಂಡು ಕ್ವಾರಂಟೈನ್ ನಿಂದು ಮುಕ್ತ ಮಾಡಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
35 ಮಂದಿಗೆ ಇದೇ ರೀತಿ ಗುಣಮುಖ:
ತಾಲೂಕಿನಲ್ಲಿ ಕಳೆದ ನಾಲ್ಕೆತ್ರೖದು ದಿನಗಳಿಂದ ಪತ್ತೆಯಾಗಿರುವ ಸೋಂಕಿತರ ಪೈಕಿ 35 ಮಂದಿ ಇದೇ ರೀತಿ ಯಾವುದೇ ಚಿಕಿತ್ಸೆ ಇಲ್ಲದೆ ಗುಣಮುಖ ಹೊಂದಿದ್ದಾರೆ ಎನ್ನುತ್ತಿದೆ ಆರೋಗ್ಯ ಇಲಾಖೆಯ ಮೂಲಗಳ ಮಾಹಿತಿ. ಇಷ್ಟುಮಂದಿಯ ಪರೀಕ್ಷಾ ವರದಿ ಕೈ ಸೇರುವ ಮೊದಲೇ ಇವರಿಗೆ ಇದ್ದ ಸೋಂಕು ಮಾಯವಾಗಿದ್ದು, ಆಸ್ಪತ್ರೆಗೆ ಸೇರದೆ, ಚಿಕಿತ್ಸೆ ಪಡೆಯದೆ ಇವರು ತಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಮೂಲಕ ಗುಣ ಮುಖ ಹೊಂದಿದ್ದಾರೆ.
ವೈದ್ಯರು ಏನು ಹೇಳುತ್ತಾರೆ:
ಇಂತಹ ಪ್ರಕರಣಗಳು ಸಾಮಾನ್ಯ, ಆರೋಗ್ಯ ವಂತ ವ್ಯಕ್ತಿಯಲ್ಲಿ ಅವನ ದೇಹದ ರೋಗನಿರೋಧಕ ವ್ಯವಸ್ಥೆಯ ಮೂಲಕವೇ ಕೊರೋನಾ ವೈರಸ್ ನಾಶಹೊಂದುತ್ತದೆ ಎಂಬುದು ವೈದ್ಯರ ವಿವರಣೆಯಾಗಿದೆ. ಕೊರೋನಾ ವೈರಸ್‌ಗೆ ಯಾವುದೇ ನಿರ್ಧಿಷ್ಟಲಸಿಕೆ ಇಲ್ಲವಾಗಿದ್ದು, ರೋಗ ನಿರೋಧಕ ಶಕ್ತಿ ಹಚ್ಚಿಸುವುದೇ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯಾಗಿದೆ. ಆರೋಗ್ಯ ವಂತ ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಯಾವುದೇ ಚಿಕಿತ್ಸೆ ಇಲ್ಲದೆ ವಾಸಿಯಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಒಟ್ಟಾರೆ ತಾಲೂಕಿನ 35 ಮಂದಿ ಸೋಂಕಿತರು ಆಸ್ಪತ್ರೆಗೆ ಹೋಗದೆ ಬಿಡುಗಡೆ ಹೊಂದಿದ್ದಾರೆ. ಕೊರೋನಾದಿಂದ ಆತಂಕಕ್ಕೆ ಸಿಲುಕಿರುವ ಮಂದಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಆದರೆ, ಕೊರೋನಾ ಪರೀಕ್ಷೆಯ ವರದಿ ವಿಳಂಭವಾಗಿ ಬೇರೆ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದವರು ಸಮಸ್ಯೆಗೆ ಸಿಲುಕಿದರೆ ಏನು ಮಾಡಬೇಕು ಎಂಬುದು ಜನರ ಪ್ರಶ್ನೆಯಾಗಿದೆ.