ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟನೆ ಮಾಡಲಾಯಿತು. 88 ನೇ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಬೆಳ್ತಂಗಡಿ (ಡಿ.14): ಧರ್ಮದ ತಿರುಳನ್ನು ಅರಿಯದವರಿಂದ ಅಶಾಂತಿ ಉಂಟಾಗುತ್ತಿದೆಯೇ ಹೊರತು ಧರ್ಮದಿಂದಲ್ಲ ಎಂದು ರಾಜ್ಯದ ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ನಡೆದ 88ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳದ ಪ್ರಭೆ ಇಂದು ಜಗತ್ತಿಗೆ ಬೆಳಕು ನೀಡುತ್ತಿದೆಯಲ್ಲದೆ ಪಥದರ್ಶಕವಾಗಿದೆ. ವಸುಧೈವ ಕುಟುಂಬಕಂ ಎಂಬ ಉಕ್ತಿ ಇಲ್ಲಿ ಅನ್ವರ್ಥವಾಗಿದೆ. ಧರ್ಮ, ನ್ಯಾಯ, ಸಹಿಷ್ಣುತೆ, ನಿಷ್ಠೆಗೆ ಹೆಸರುವಾಸಿಯಾಗಿರುವ ಭಾರತದಲ್ಲಿ ಇಲ್ಲಿನ ಸಮ್ಮೇಳನಗಳು ದಾರಿದೀವಿಗೆಯಾಗಿದೆ ಎಂದು ಶ್ಲಾಘಿಸಿದರು.
ಕ್ಷೇತ್ರದಲ್ಲಿ ಧಾರ್ಮಿಕ ಚಿಂತನೆಯ ಜೊತೆಗೆ ಇಲ್ಲಿನ ಸೇವಾಕಾರ್ಯಗಳು ಹಳ್ಳಿಗಾಡಿನ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ನಿಷ್ಕಲ್ಮಶ ಮನೋಭಾವದಿಂದ ಎಲ್ಲರಿಗೂ ಸಮಾನತೆ ನೀಡುವ ಕ್ಷೇತ್ರ ಇದಾಗಿದ್ದು, ನಾನು ಸಚಿವನಾಗಿ ಮಾಡಿರುವ ಸಾಧನೆಗೆ ಡಾ.ಹೆಗ್ಗಡೆಯವರ ಆಶೀರ್ವಾದವೂ ಕಾರಣವಾಗಿದೆ ಎಂದರು.
ಡಾ.ವೀರೇಂದ್ರ ಹೆಗ್ಗಡೆಗೆ ಹುಟ್ಟುಹಬ್ಬದ ಸಂಭ್ರಮ: ಲೋಕಕ್ಕೇ ಮಾದರಿ ಧರ್ಮಾಧಿಕಾರಿ
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮವಿರುವುದು ಆಚರಣೆಯಲ್ಲಿ. ಇನ್ನೊಬ್ಬರಿಗೆ ಸಮಸ್ಯೆಯಾಗದ ಹಾಗೆ ನಮ್ಮ ಧರ್ಮದ ನಿಷ್ಠೆಯನ್ನು, ಆಚರಣೆಯನ್ನು ನಾವು ಅನುಸರಿಸಿಕೊಂಡು ಬರಬೇಕು ಮತ್ತು ನಮ್ಮ ವೃತ್ತಿ ಧರ್ಮವನ್ನು ನಾವು ಹಾಳು ಮಾಡಿಕೊಳ್ಳದೆ ಅದನ್ನು ಕಾಪಾಡಿಕೊಳ್ಳಬೇಕು, ಬೆಳೆಸಿಕೊಳ್ಳಬೇಕು ಎಂದರು. ಕನಕಗಿರಿ ಜೈನಮಠದ ಶ್ರೀಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಚಿವರನ್ನು ಹಾಗೂ ಸ್ವಾಮೀಜಿಯವರನ್ನು ಡಾ.ಹೆಗ್ಗಡೆಯವರು ಪರವಾಗಿ ಗೌರವಿಸಿದರು.
ಲಲಿತೋದ್ಯಾನ ಉತ್ಸವ: ಲಕ್ಷ ದೀಪೋತ್ಸವದ ಮೂರನೇ ದಿನ ಶನಿವಾರ ರಾತ್ರಿ ಶ್ರೀಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನೆರವೇರಿದರೆ, ನಾಲ್ಕನೇ ದಿನ ಭಾನುವಾರ ಕಂಚಿಮಾರು ಕಟ್ಟೆಉತ್ಸವ ನಡೆಯಿತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 14, 2020, 8:17 AM IST