ಬೆಂಗಳೂರು(ಫೆ.01): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 6ನೇ ಹಂತದ ಮೂಲೆ ನಿವೇಶನಗಳ ಇ-ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 271 ನಿವೇಶನಗಳು ಮಾರಾಟವಾಗಿದ್ದು 88.28 ಕೋಟಿ ಲಾಭಗಳಿಸಿದೆ.

ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ, ಅರ್ಕಾವತಿ ಬಡಾವಣೆ, ಬನಶಂಕರಿ ಬಡಾವಣೆಗಳ ವಿವಿಧ ಬ್ಲಾಕ್‌ಗಳ 429 ನಿವೇಶನಗಳನ್ನು ಇ-ಹರಾಜಿಗೆ ಇಡಲಾಗಿತ್ತು. ಈ ಪೈಕಿ 271 ನಿವೇಶನಗಳು ಮಾರಾಟವಾಗಿವೆ. ಈ ನಿವೇಶನಗಳ ಮೂಲ ದರ 166.72 ಕೋಟಿಗಳಾಗಿದ್ದು, ಹರಾಜಿನಲ್ಲಿ 255 ಕೋಟಿಗೆ ಮಾರಾಟವಾಗುವ ಮೂಲಕ ಬಿಡಿಎಗೆ 88.28 ಕೋಟಿ ಲಾಭ ಬಂದಿದೆ.

ವಾಣಿಜ್ಯ ಮಳಿಗೆಯಿಂದ ಬಿಡಿಎಗೆ 40 ಕೋಟಿ ರು. ಬಾಡಿಗೆ ಬಾಕಿ

ಹರಾಜಿನಿಂದ ಐದು ನಿವೇಶನಗಳನ್ನು ಹಿಂಪಡೆಯಲಾಗಿದ್ದು, 128 ನಿವೇಶನಗಳ ಬಗ್ಗೆ ಗ್ರಾಹಕರು ಆಸಕ್ತಿ ವಹಿಸಲಿಲ್ಲ. 29 ನಿವೇಶನಗಳು ಶೇ.5ಕ್ಕಿಂತ ಕಡಿಮೆ ಪ್ರತಿಕ್ರಿಯೆ ಬಂದಿದ್ದರಿಂದ ಮಾರಾಟದಿಂದ ಕೈಬಿಡಲಾಗಿತ್ತು. 6ನೇ ಹಂತದ ಇಹರಾಜಿನಲ್ಲಿ 1614 ಮಂದಿ ಬಿಡ್ಡುದಾರರು ಭಾಗವಹಿಸಿದ್ದರು ಎಂದು ಬಿಡಿಎ ತಿಳಿಸಿದೆ.

ವಿಶೇಷವಾಗಿ ಈ ಬಾರಿ ಕೆಲವೊಂದು ನಿವೇಶನಗಳು ನಿರೀಕ್ಷೆಗೂ ಮೀರಿದ ಬೆಲೆಗೆ ಮಾರಾಟವಾಗಿವೆ. ಸರ್‌.ಎಂ.ವಿ. ಬಡಾವಣೆ 3ನೇ ಬ್ಲಾಕ್‌ನ ನಿವೇಶನಕ್ಕೆ ಪ್ರತಿ ಚದರ ಮೀಟರ್‌ಗೆ 39 ಸಾವಿರ ನಿಗದಿಪಡಿಸಲಾಗಿತ್ತು. ಆದರೆ, ಪ್ರತಿ ಚ.ಮೀಗೆ 1.67 ಲಕ್ಷದಂತೆ 1.30 ಕೋಟಿಗೆ ಮಾರಾಟವಾಗಿದೆ. ಇದರ ಮೂಲ ದರ 30.42 ಲಕ್ಷ ಇತ್ತು. ಅಂತೆಯೇ ಸರ್‌.ಎಂ.ವಿ. ಬಡಾವಣೆ 5ನೇ ಬ್ಲಾಕ್‌ನ ನಿವೇಶನ ಪ್ರತಿ ಚ.ಮೀ. 42 ಸಾವಿರ ಇದ್ದು, ಇ-ಹರಾಜಿನಲ್ಲಿ ಪ್ರತಿ ಚ.ಮೀಗೆ 1.20 ಲಕ್ಷದಂತೆ ಮಾರಾಟವಾಗಿದೆ. ಇದರ ಮೂಲ ದರ 61.23 ಲಕ್ಷ ಇದ್ದು, 1.74 ಕೋಟಿಗೆ ಮಾರಾಟವಾಗಿದೆ. ಒಟ್ಟು 13 ನಿವೇಶನಗಳು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗಿವೆ.