Asianet Suvarna News Asianet Suvarna News

ಧಾರವಾಡದಲ್ಲಿ ನುಡಿ ಹಬ್ಬ..ಚುಮು ಚುಮು ಚಳಿಗೆ ಸಾಹಿತ್ಯದ ಬಿಸಿಯೂಟ

ಚಳಿಗಾಲದ ಮಂಜಿನ ನಡುವೆ ಕನ್ನಡದ ಕಂಪು ವಿದ್ಯಾನಗರಿಯಲ್ಲಿ ಹರಡಲಿದೆ. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರವಾಡ ಸಜ್ಜಾಗಿದೆ. ಜನವರಿ 4, 5 ಮತ್ತು 6 ರಂದು  ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಅಕ್ಷರ ಜಾತ್ರೆಗೆ ಕನ್ನಡ ಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ. ಚುಮು ಚುಮು ಚಳಿಯಲ್ಲಿ ಬಂದವರಿಗೆಲ್ಲ ಸಾಹಿತ್ಯದ ಬಿಸಿಯೂಟ ದಕ್ಕಲಿದೆ.

84 Akhila Bharata Kannada Sahitya Sammelana Dharwad
Author
Bengaluru, First Published Jan 3, 2019, 8:01 PM IST

ಧಾರವಾಡ [ಜ.03]  61 ವರ್ಷಗಳ ನಂತರ  ಧಾರವಾಡದದಲ್ಲಿ ನುಡಿ ಹಬ್ಬದ ಸಂಭ್ರಮ. ಇಡೀ ಧಾರವಾಡ ಸಾಹಿತ್ಯ ಪ್ರೇಮಿಗಳ ಬರುವಿಕೆಗೆ ಕಾದು ಕುಳಿತಿದೆ. ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು. 15 ಸ್ತಬ್ಧ ಚಿತ್ರಗಳು, ಎಲ್ಲ ಜಿಲ್ಲೆಗಳ 30 ಜಾನಪದ ಕಲಾತಂಡಗಳು, ಧಾರವಾಡದ 28 ತಂಡಗಳಲ್ಲಿ ಒಟ್ಟು 750 ಕಲಾವಿದರು, 15 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 

ಆಕರ್ಷಕ ವೇದಿಕೆ: ಹತ್ತು ದಿನಗಳಲ್ಲಿ ಬಿ. ಮಾರುತಿ ಮತ್ತು ಕಲಾವಿದರ ತಂಡ ಹಗಲಿರುಳು ಶ್ರಮಿಸಿ ಮುಖ್ಯ ವೇದಿಕೆಗೆ ಕಳೆ ಕಟ್ಟಿದ್ದಾರೆ. ಯು.ಆರ್. ಅನಂತಮೂರ್ತಿ, ವಿ.ಕೃ. ಗೋಕಾಕ, ಗಿರೀಶ್ ಕಾರ್ನಾಡ್‌ ಮತ್ತು ಚಂದ್ರಶೇಖರ ಕಂಬಾರ ಭಾವಚಿತ್ರಗಳು ಮೆರುಗನ್ನು ದ್ವಿಗುಣ ಮಾಡಿವೆ. ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಇದೆ.

84 Akhila Bharata Kannada Sahitya Sammelana Dharwad

ಉತ್ತರ ಕರ್ನಾಟಕ ಊಟ ಸ್ಪೇಷಲ್:  ಬೆಳಿಗ್ಗೆ- ರವೆ ಉಂಡೆ-ಶಿರಾ-ಉಪ್ಪಿಟ್ಟು, ಚಹಾ, ಮಧ್ಯಾಹ್ನ ಊಟಕ್ಕೆ  ಖಡಕ್‌ ರೊಟ್ಟಿ, ಚಪಾತಿ ಗೋದಿ ಹುಗ್ಗಿ, ಬದನೆಕಾಯಿ, ಹಿರೇಕಾಯಿಪಲ್ಯ,  ಮಡಿಕೆಕಾಳು ಉದ್ದಿನ ಬೆಳೆ ಸೊಪ್ಪು ಬಾಲುಶಾ ಅಥವಾ ಫೇಡಾ, ಬಾದಾಮ್ ಪೂರಿ,ಮೈಸೂರು ಪಾಕ್‌,  ಬಿಸಿಬೇಳೆ ಬಾತ್, ಅಥವಾ ಸುಸ್ಲಾ, ಮಿರ್ಚಿ, ಚಹಾ,  ಮಧ್ಯಾಹ್ನ ಶೇಂಗಾ ಹೋಳಿಗೆ, ಖಡಕ್ ರೊಟ್ಟಿ, ಪುರಿ ಅಥವಾ ಚಪಾತಿ  ಹೆಸರುಬೇಳೆ ಹಲ್ವಾ, ಜಿಲೇಬಿ ಅವಲಕ್ಕಿ, ವಾಂಗಿಭಾತ್‌ ಅಥವಾ ಪುಳಿಯೊಗರಿ, ಚಹಾ, ಮಧ್ಯಾಹ್ನ ಮಾದ್ಲಿ, ಆಲೂಗಡ್ಡೆ ಪಲ್ಲೆ, ಡೊಣ್ಣಗಾಯಿ ಅಥವಾ ಹಿರೇಕಾಯಿ ಪಲ್ಲೆ, ರೊಟ್ಟಿ-ಚಪಾತಿ, ಅನ್ನ-ಸಾಂಬರ್‌,  ಶ್ಯಾವಿಗೆ ಪಾಯಸ ಅಥವಾ ಹೆಸರು ಬೆಳೆ ಪಾಯಸ ಅಬ್ಬಬ್ಬಾ...! ಇವೆಲ್ಲವನ್ನು ಸಮ್ಮೇಳನದಲ್ಲಿ ಸವಿಯಬಹುದು.

ಹೊಡಿ ಒಂಬತ್ತ್.. ಹುಬ್ಳಿ-ಧಾರವಾಡ ನಡಕ ಎಲಿವೇಟೆಡ್ ರಸ್ತಾ ಬರ್ಲಿಕತ್ತದ!

ಗೋಷ್ಠಿಗಳು: ಮೂರು ದಿನಗಳ ಸಮ್ಮೇಳನದಲ್ಲಿ ನಡೆಯುವ 26 ಗೋಷ್ಠಿಗಳಲ್ಲಿ ನಾಡು-ನುಡಿ, ಸಾಹಿತ್ಯ ಹಾಗೂ ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗಿನ ಬಗ್ಗೆ ಚಿಂತನ-ಮಂಥನ ನಿರೀಕ್ಷಿಸಲಾಗಿದೆ. ನೋಂದಣಿಗಾಗಿ 75 ಮಳೆಗೆಗಳನ್ನು ಕಾಯ್ದಿರಿಸಿದ್ದು, ಇದರಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕೌಂಟರ್‌ಗಳಿವೆ. ಅಲ್ಲಿಯೇ ಸರಕಾರಿ ನೌಕರರಿಗೆ ಒಒಡಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 16,500 ಕ್ಕೂ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಪುಸ್ತಕ ಮಳಿಗೆ: 500 ಪುಸ್ತಕ ಹಾಗೂ 250 ವಾಣಿಜ್ಯ ಮಳಿಗೆ ತೆರೆಯಲಾಗುತ್ತಿದೆ. ವಿದ್ಯಾವರ್ಧಕ ಸಂಘ, ರಂಗಾಯಣ ಸೇರಿದಂತೆ ಒಟ್ಟು 6 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಲಿವೆ. 

ಕುವೆಂಪು ಅವರ ಬಾಯಲ್ಲೇ ವಿಶ್ವ ಮಾನವ ಸಂದೇಶ ಕೇಳಿ

ಉಚಿತ ಬಸ್ ವ್ಯವಸ್ಥೆ:  ಜನರನ್ನು ಕರೆತರಲು ಹೊಸಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಗಾಂಧಿನಗರ ಸೇರಿದಂತೆ ವಿವಿಧೆಡೆಯಿಂದ ಒಟ್ಟು 50 ಬಸ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಉತ್ತರ ಕರ್ನಾಟಕ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಪ್ರವಾಸ ಪ್ಯಾಕೇಜ್‌ ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿ ಬೇಕಾ?:  ಸಮ್ಮೇಳನದ ಕುರಿತ ಮಾಹಿತಿ, ವಸತಿ ವ್ಯವಸ್ಥೆಯ ಕುರಿತಾಗಿ ಟೋಲ್‌ ಫ್ರೀ (ಮಾಹಿತಿ- 18004250741, 9449847641, ವಸತಿ- 0836- 2447544, ಸಾರಿಗೆ- 0836- 2445566) ಸಂಖ್ಯೆಗಳಿಗೆ ಕರೆ ಮಾಡಬಹುದು.

84 Akhila Bharata Kannada Sahitya Sammelana Dharwad

 

 

Follow Us:
Download App:
  • android
  • ios