Asianet Suvarna News Asianet Suvarna News

ಕೆ.ಆರ್‌.ಪೇಟೆ ಶೇ.80ರಷ್ಟುಮತದಾನ

ಕೆ. ಆರ್. ಪೇಟೆ ಕ್ಷೇತ್ರದ ಒಂದೆರಡು ಕಡೆ ಮತಯಂತ್ರಗಳ ದೋಷದಿಂದ ಮತದಾನ ಅರ್ಧ ಗಂಟೆಗಳ ಕಾಲ ಸ್ಥಗಿತಗೊಂಡಿರುವ ಪ್ರಕರಣಗಳನ್ನು ಬಿಟ್ಟರೆ ಉಳಿದಂತೆ ಮುಕ್ತ ಹಾಗೂ ನ್ಯಾಯಯುತ ಮತದಾನವಾಗಿರುವ ಬಗ್ಗೆ ವರದಿಗಳು ಬಂದಿವೆ.

80 percent voting in kr pet byelection
Author
Bangalore, First Published Dec 6, 2019, 8:17 AM IST

ಮಂಡ್ಯ(ಡಿ.06): ಬಹು ನಿರೀಕ್ಷಿತ ಕೆ.ಆರ್‌. ಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಗುರುವಾರ ನಡೆದ ಮತದಾನ ಅತ್ಯಂತ ಶಾಂತಿಯುತವಾಗಿ ನಡೆಯಿತು.

ಕ್ಷೇತ್ರದ ಒಂದೆರಡು ಕಡೆ ಮತಯಂತ್ರಗಳ ದೋಷದಿಂದ ಮತದಾನ ಅರ್ಧ ಗಂಟೆಗಳ ಕಾಲ ಸ್ಥಗಿತಗೊಂಡಿರುವ ಪ್ರಕರಣಗಳನ್ನು ಬಿಟ್ಟರೆ ಉಳಿದಂತೆ ಮುಕ್ತ ಹಾಗೂ ನ್ಯಾಯಯುತ ಮತದಾನವಾಗಿರುವ ಬಗ್ಗೆ ವರದಿಗಳು ಬಂದಿವೆ.

ಬೆಳಗ್ಗೆ 7ಗಂಟೆ ಆರಂಭವಾದ ಮತದಾನವು ಚಳಿಯಿಂದಾಗಿ ತುಸು ಮಂದಗತಿಯಲ್ಲೇ ಆರಂಭವಾಯಿತು. ಬಿಸಿಲು ಏರುತ್ತಿದ್ದಂತೆ ಮತದಾನ ಪ್ರಕ್ರಿಯೆ ಕೂಡ ಬಿರುಸಿನಿಂದ ಸಾಗಿತು. ಬೆಳಗ್ಗೆ 9 ಗಂಟೆ ವೇಳೆಗೆ ಶೇ.6.20 ರಷ್ಟುಮಾತ್ರ ಮತದಾನ ನಡೆದಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ ಶೇ.20.01 ರಷ್ಟುಮಧ್ಯಾಹ್ನ 1 ಗಂಟೆ ವೇಳೆಗೆ ಶೇ.39.47 ರಷ್ಟುಹಾಗೂ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.59.86 ರಷ್ಟುಹಾಗೂ ಸಂಜೆ 5 ಗಂಟೆಗೆ ಶೇ.75.87 ರಷ್ಟುಮತದಾನವಾಗಿತ್ತು. ಈ ವೇಳೆಗೆ 1,57,993 ಮಂದಿ ಮತದಾನ ಮಾಡಿದ್ದರು. ಇದರಲ್ಲಿ 80,228 ಮಹಿಳೆಯರು ಹಾಗೂ 77,765 ಮಂದಿ ಪುರುಷರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತ ಯಂತ್ರ ದೋಷ:

ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜ್‌ ತವರು ಗ್ರಾಮ ಬಂಡಿಹೊಳೆಯಲ್ಲಿ ಬೆಳಗ್ಗೆ 7.30 ವೇಳೆಗೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತು. ಮತದಾನಕ್ಕಾಗಿ ಅರ್ಧ ಗಂಟೆಯಿಂದ ಕಾದು ಕುಳಿತಿರುವ ಅಭ್ಯರ್ಥಿ ಬಿ.ಎಲ್‌. ದೇವರಾಜು. ಸ್ಥಳಕ್ಕೆ ಚುನಾವಣಾಧಿಕಾರಿಗಳು ದೌಡಾಯಿಸಿ ಬಂದು ರಿಪೇರಿ ಮಾಡಿದ ನಂತರ ಮತದಾನ ಆರಂಭವಾಯಿತು.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ತಾಲೂಕಿನ ಹೆಗ್ಗಡಹಳ್ಳಿಯ ಮತಗಟ್ಟೆಸಂಖ್ಯೆ 98ರಲ್ಲೂ ಮತಯಂತ್ರ ದೋಷ ಕಾಣಿಸಿಕೊಂಡಿತು. ಬೆಳಗ್ಗೆಯಿಂದ ಈವರೆಗೆ 688 ಮತಗಳು ಈ ಬೂತ್‌ನಲ್ಲಿ ಚಲಾವಣೆಯಾಗಿತ್ತು. ಮಧ್ಯಾಹ್ನ ವೇಳೆಗೆ ಮತಯಂತ್ರದಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿತು. ಹೀಗಾಗಿ ಹಕ್ಕು ಚಲಾಯಿಸಲು ಕಾದು ಕುಳಿತ ಮತದಾರರು. ಮತಯಂತ್ರ ಬದಲಾಯಿಸಲು ಮುಂದಾದ ಸಿಬ್ಬಂದಿ. ಮತಗಟ್ಟೆಮುಂದೆ ಸರದಿ ಸಾಲಿನಲ್ಲಿ ಕಾದು ನಿಂತಿದ್ದದ್ದು ಕಂಡು ಬಂದಿತು.

106 ವರ್ಷದ ವೃದ್ಧೆ ಮತದಾನ:

ಕ್ಷೇತ್ರ ಉಪಚುನಾವಣೆಗೆ ತನ್ನ ಹಕ್ಕನ್ನು 106 ವರ್ಷದ ಮಹಿಳೆ ಸಣ್ಣಮ್ಮ ತಾಲೂಕಿನ ಸೊಳ್ಳೇಪುರ ಮತಗಟ್ಟೆಯಲ್ಲಿ ತನ್ನ ಮೊಮ್ಮಕ್ಕಳ ಸಹಾಯದೊಂದಿಗೆ ಮತ ಚಲಾಯಿಸಿದಳು. 106 ವರ್ಷದ ಮಹಿಳೆ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಕಟ್ಟಿರುವ ಶಾಸಕರನ್ನು ಆಯ್ಕೆ ಮಾಡಲು ತಮ್ಮ ಹಕ್ಕು ಚಲಾಯಿಸಿರುವುದಾಗಿ ಹೇಳಿದರು.

ಚಳಿ ಇದ್ದ ಕಾರಣ ಪ್ರಾರಂಭದಲ್ಲಿ ಮತದಾನ ಮಂದಗತಿಯಿಂದ ನಡೆಯುತ್ತಿದಾರೂ, ಬೆಳಗ್ಗೆ 9 ಗಂಟೆಯಿಂದ ಮತದಾರರ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಬಿರುಸುಗೊಂಡಿತ್ತು. ಪಕ್ಷದ ಕಾರ್ಯಕರ್ತರು, ಮುಖಂಡರು ಕರೆತಂದು ನಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವೊಲಿ ಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

100ಕ್ಕೆ 1000 ಪಟ್ಟು ಗೆಲ್ತೀನಿ: ಬಿಜೆಪಿ ಅಭ್ಯರ್ಥಿ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ, ಜಾ.ದಳ ಅಭ್ಯರ್ಥಿ ಬಿ.ಎಲ್ ದೇವರಾಜು, ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಉತ್ತಮ ಪ್ರಜಾಕೀಯ ಪಕ್ಷದ ಎಚ್‌.ಎಂ. ಚಂದ್ರೇಗೌಡ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಕೆ.ಎನ್‌. ಶಂಕರೇಗೌಡ, ಪೂರ್ವಾಂಚಲ… ಮಹಾ ಪಂಚಾಯಚ್‌ನಿಂದ ಎಚ್‌.ಡಿ. ರೇವಣ್ಣ, ಪಕ್ಷೇತರ ಅಭ್ಯರ್ಥಿಯಾಗಿ ದೇವೇಗೌಡರೂ ಕೂಡ ಮತದಾನ ಮಾಡಿರುವ ಬಗ್ಗೆ ವರದಿಗಳು ಬಂದಿವೆ.

ಕಟ್ಟು ನಿಟ್ಟಿನ ಮತದಾನ ವ್ಯವಸ್ಥೆ

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಮಾರ್ಗದರ್ಶನದಲ್ಲಿ ಕೆ.ಆರ್‌.ಪೇಟೆ ಉಪ ಚುನಾವಣೆಯು ವ್ಯವಸ್ಥಿತವಾಗಿ ನೆರವೇರಿತು. ಕ್ಷೇತ್ರದಲ್ಲಿ 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 290 ಪ್ರಿಸೈಡಿಂಗ್‌ ಅಧಿಕಾರಿಗಳು, 293 ಸಹಾಯಕ ಮತಗಟ್ಟೆಅಧಿಕಾರಿಗಳು, 580 ಮತದಾನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು.

ಕ್ಷೇತ್ರದಲ್ಲಿ ಮತಗಟ್ಟೆಸಂಖ್ಯೆ 53 ಮತ್ತು 141ರಲ್ಲಿ 2 ಸಖಿ ಮತಗಟ್ಟೆಹಾಗೂ ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆಸ್ಥಾಪಿಸಲಾಗಿತ್ತು. ಅಲ್ಲದೇ, ಮತದಾರರಿಗೆ ಮತದಾನ ಮಾಡಲು ಬಂದಾಗ ಸುಂದರ ವಾತಾವರಣ ಕಲ್ಪಿಸಲು ಕೆ.ಆರ್‌ ಪೇಟೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 8 ಮತಗಟ್ಟೆಗಳಲ್ಲಿ ಮಾದರಿ ಮತಗಟ್ಟೆಗಳನ್ನು ವಿನ್ಯಾಸಗೊಳಿಸಲಾಗಿತ್ತು.

ಬಿಗಿ ಬಂದೋಬಸ್ತು

ಕ್ಷೇತ್ರದಲ್ಲಿ 52 ಸೂಕ್ಷ್ಮ, 13 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಉಪ ಚುನಾವಣೆಗಾಗಿ 4 ಕೇಂದ್ರಿಯ ಮೀಸಲು ಪಡೆ, 4 ಕೆಎಸ್‌ಆರ್‌ಪಿ, ಡಿಎಆರ್‌ 10 ತುಕಡಿ ಹಾಗೂ 600 ಪೊಲೀಸರನ್ನು ಹಾಗೂ 450 ಗೃಹರಕ್ಷಕ ದಳವನ್ನು ಜಿಲ್ಲಾ ಪೊಲೀಸ್‌ ಇಲಾಖೆ ನಿಯೋಜಿಸಿತ್ತು.

ಡಿ 9ರಂದು ಮತ ಎಣಿಕೆ

ಕೆ.ಆರ್‌. ಪೇಟೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿ.9 ರಂದು ಮತ ಎಣಿಕೆ ನಡೆಯಲಿದ್ದು, ಮತದಾರರ ಒಲವು ಯಾರಿಗೆ ಎಂಬುದು ತಿಳಿಯಲಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರುವುದರಿಂದ ಎಲ್ಲರ ಚಿತ್ರ ಫಲಿತಾಂಶದತ್ತ. ಹೀಗಾಗಿ ಈ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios